ಬೆಂಗಳೂರು: ಮುಖ್ಯಮಂತ್ರಿ ಮತ್ತು ರಾಜ್ಯಪಾಲರ ಹೆಸರಿನಲ್ಲಿ ನಕಲಿ ಸಹಿ ಬಳಸಿ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)ದ ಸದಸ್ಯತ್ವ ಕೊಡಿಸುವುದಾಗಿ ಚಿತ್ರಕಲಾ ಶಿಕ್ಷಕಿಗೆ ಬರೋಬ್ಬರಿ 4.10 ಕೋಟಿ ರೂ.ವಂಚಿಸಿದ್ದ ಸರ್ಕಾರಿ ನೌಕರ ಸೇರಿ ನಾಲ್ವರು ಆರೋಪಿಗಳನ್ನು ಸಿಸಿಬಿಯ ಆರ್ಥಿಕ ಅಪರಾಧ ದಳದ ಅಧಿಕಾರಿಗಳು ಬಂಧಿಸಿದ್ದಾರೆ.
ಬೆಂಗಳೂರಿನ ತಾವರೆಕೆರೆ ನಿವಾಸಿ ರಿಯಾಜ್ ಅಹ್ಮದ್ (41), ಮಲ್ಲೇಶ್ವರದ ನಿವಾಸಿ ಯೂಸುಫ್ ಸುಬ್ಬೆಕಟ್ಟೆ (47), ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ರುದ್ರೇಶ್ (35) ಮತ್ತು ಚಿಕ್ಕಮಗಳೂರು ಕಳಸ ತಾಲೂಕಿನ ತೋಟಗಾರಿಕಾ ನಿರ್ದೇಶಕರ ಕಚೇರಿ ಸಿಬ್ಬಂದಿ ಸಿ.ಚಂದ್ರಪ್ಪ (44) ಎಂಬುವರನ್ನು ಬಂಧಿಸಲಾಗಿದೆ.
ಕಲಬುರಗಿ ಮೂಲದ ಶಿಕ್ಷಕಿಗೆ ವಂಚನೆ: ಬಂಧಿತ ಕಿಲಾಡಿ ಗ್ಯಾಂಗ್ ಶಿಕ್ಷಕಿಗೆ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯತ್ವ ಕೊಡಿಸಲು 5 ಕೋಟಿ ಆಫರ್ ನೀಡಿದ್ದು ಬಳಿಕ 4.10 ಕೋಟಿ ಹಣ ಪಡೆದಿದ್ದಾರೆ. ಆರೋಪಿಗಳ ಚಲನವಲನ ಬಗ್ಗೆ ಸಂಶಯ ಬಂದು ಮಹಿಳೆ ಸಿಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಪಡೆದು ಸಿಸಿಬಿ ಪೊಲೀಸರು ನಾಲ್ವರನ್ನ ಬಂಧಿಸಿದ್ದಾರೆ. ರಾಜ್ಯ ಸರ್ಕಾರದ ನಡಾವಳಿಗಳು, ಟಿಪ್ಪಣಿಯನ್ನ ನಕಲು ಮಾಡಿದ್ದ ಆರೋಪಿಗಳು ನೇಮಕಾತಿ ಬಗ್ಗೆ ನಕಲಿ ಟಿಪ್ಪಣಿ ತಯಾರಿಸಿ, ಸಿಎಂ ಹಾಗೂ ರಾಜ್ಯಪಾಲರ ನಕಲಿ ಸಹಿ ಬಳಕೆ ಮಾಡಿ ಮಹಿಳೆಯನ್ನು ವಂಚಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಸಿಸಿಬಿ ಪೊಲೀಸರು ಮಾರ್ಚ್ 26 ರಂದು ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ವಿಚಾರಣೆ ವೇಳೆ ನಕಲಿ ನೇಮಕಾತಿ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ.
ಪ್ರಧಾನಿ ಸಹೋದರ ಪರಿಚಯ ಎಂದಿದ್ದ ಆರೋಪಿ : ಆರೋಪಿಗಳ ಪೈಕಿ ರಿಯಾಜ್ ಅಹ್ಮದ್, ಸರ್ಕಾರಿ ನೌಕರರ ವರ್ಗಾವಣೆ ದಂಧೆಯ ಮಧ್ಯವರ್ತಿಯಾಗಿದ್ದಾನೆ ಎಂದು ಹೇಳಲಾಗಿದೆ. ಯೂಸುಫ್ ಸುಬ್ಬೆಕಟ್ಟೆ ಮಲ್ಲೇಶ್ವರದಲ್ಲಿ ಅಕ್ಯೂರೆಟ್ ಟೈಂ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಚೇರಿ ನಡೆಸುತ್ತಿದ್ದ. ಚಂದ್ರಪ್ಪ ಸರ್ಕಾರಿ ನೌಕರನಾಗಿದ್ದಾನೆ. ಇನ್ನು ರುದ್ರೇಶ್, ಈ ಹಿಂದೆ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದ. ಜತೆಗೆ ಕರವೇ ಅಧ್ಯಕ್ಷ ಎಂದು ಹೇಳಿಕೊಂಡಿದ್ದ ಎಂಬುದು ಗೊತ್ತಾಗಿದೆ. ಇನ್ನು ವಂಚನೆಗೊಳಗಾದ ಚಿತ್ರಕಲಾ ಶಿಕ್ಷಕಿಗೆ ಪರಿಚಯಸ್ಥರೊಬ್ಬರ ಮೂಲಕ ರಿಯಾಜ್ ಪರಿಚಯವಾಗಿದೆ. ಈ ವೇಳೆ ಆರೋಪಿ, “ತನಗೆ ಪ್ರಧಾನಿ ನರೇಂದ್ರ ಮೋದಿ ಸಹೋದರನ ಪರಿಚಯವಿದೆ ಎಂದು ಹೇಳಿಕೊಂಡು, ಕೆಪಿಎಸ್ ಸಿಯಲ್ಲಿ ಸದಸ್ಯತ್ವ ಕೊಡಿಸುತ್ತೇನೆ. ಈ ಕುರಿತು ಅರ್ಜಿ ಸಲ್ಲಿಸುವಂತೆ ಹೇಳಿದ್ದ. ಆಗ, ಇತರೆ ಆರೋಪಿಗಳು ದೂರುದಾರರನ್ನು ಭೇಟಿಯಾಗಿ, ಅದಕ್ಕೆ 15-20 ಕೋಟಿ ರೂ. ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಅಲ್ಲದೆ, ಮಲ್ಲೇಶ್ವರದಲ್ಲಿರುವ ಯೂಸುಫ್ ಸುಬ್ಬೆಕಟ್ಟೆಯ ಕಚೇರಿಗೆ ದೂರುದಾರ ಮಹಿಳೆಯನ್ನು ಕರೆಸಿಕೊಂಡಿದ್ದ ಆರೋಪಿಗಳು, ತಮ್ಮ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ-ಹಂತವಾಗಿ 4.10 ಕೋಟಿ ರೂ. ವರ್ಗಾವಣೆ ಮಾಡಿದ್ದರು. ಆ ನಂತರ ಆರೋಪಿಗಳು, ಮುಖ್ಯಮಂತ್ರಿಗಳು, ರಾಜ್ಯಪಾಲರ ಹೆಸರಿನ ನಕಲಿ ನೇಮಕಾತಿ ಆದೇಶ ಪ್ರತಿ ನೀಡಿ ವಂಚಿಸಿದ್ದರು. ಈ ಸಂಬಂಧ ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಬಳಿಕ ತಾಂತ್ರಿಕ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು. ಸಿಸಿಬಿ ಇನ್‌ಸ್ಪೆಕ್ಟರ್ ಪ್ರವೀಣ್ ಹೆಲಿಗಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
Discover more from Coastal Times Kannada
Subscribe to get the latest posts sent to your email.
Discussion about this post