ಮಂಗಳೂರು, ಆಗಸ್ಟ್ 2: ಕೇರಳ ಮತ್ತು ಮಹಾರಾಷ್ಟ್ರಗಳಿಂದ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಇಲ್ಲದೆ ಮಂಗಳೂರಿಗೆ ಆಗಮಿಸಿದ್ದ 51 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಿದ್ದಾರೆ. ಸದ್ಯಕ್ಕೆ ಅವರನ್ನು ನಗರದ ಟೌನ್ ಹಾಲ್ ನಲ್ಲಿ ಇರಿಸಿದ್ದು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ.
ಎಲ್ಲರ ಸ್ವಾಬ್ ಸಂಗ್ರಹಿಸಿದ್ದು ಪರೀಕ್ಷೆ ವರದಿ ಬರುವ ವರೆಗೆ ಟೌನ್ ಹಾಲ್ ನಲ್ಲಿ ಇರಿಸಲಾಗುವುದು. ಯುವತಿಯರು, ಮಹಿಳೆಯರನ್ನು ರಾತ್ರಿ ವೇಳೆ ಮನೆಗೆ ತೆರಳಲು ಅವಕಾಶ ನೀಡಿದ್ದು ಪ್ರತ್ಯೇಕ ಕ್ವಾರಂಟೈನ್ ಇರುವಂತೆ ಸೂಚಿಸಲಾಗಿದೆ.
ಪುರುಷರು ಟೌನ್ ಹಾಲ್ ನಲ್ಲಿಯೇ ಇರುವಂತೆ ಫಲಿತಾಂಶ ಬರೋ ವರೆಗೆ ಕಾಯಲು ಸೂಚಿಸಿದ್ದೇವೆ. ನೆಗೆಟಿವ್ ಬಂದರೆ ಹೋಗಲು ಬಿಡುತ್ತೇವೆ. ಪಾಸಿಟಿವ್ ಬಂದರೆ ಅವರನ್ನು ಕೋವಿಡ್ ಕೇರ್ ಸೆಂಟರ್ ನಲ್ಲಿ ಇರಿಸಲಾಗುವುದು. ರಾಜ್ಯದ ಎಲ್ಲ ರೈಲು ನಿಲ್ದಾಣಗಳಲ್ಲೂ ಇದೇ ರೀತಿಯ ನಿಯಮ ಪಾಲನೆ ಮಾಡಲಾಗುತ್ತಿದೆ ಎಂದು ಮಂಗಳೂರು ನಗರ ಡಿಸಿಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.