ಬಂಟ್ವಾಳ, ಆಗಸ್ಟ್ 2: ಭಾರೀ ಮಳೆಯ ನಡುವೆ ಬಂಟ್ವಾಳ ತಾಲೂಕಿನ ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಎಂಬುವರ ಪುತ್ರ ಜೀವನ್ ಪಿಂಟೊ (48) ನೀರು ಹರಿಯುವ ತೋಡಿಗೆ ಬಿದ್ದು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು ಇವರ ಪತ್ತೆಗಾಗಿ ಎನ್ ಡಿಆರ್ ಎಫ್ ತಂಡ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ವಿದೇಶದಲ್ಲಿ ಉದ್ಯೋಗದಲ್ಲಿದ್ದ ಜೀವನ್ ಪಿಂಟೊ ಅವರು ಕೆಲವು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದು, ಶೀಘ್ರದಲ್ಲೇ ವಿದೇಶಕ್ಕೆ ಮರಳುವವರಿದ್ದರು. ಶನಿವಾರ ರಾತ್ರಿ ಭಾರೀ ಮಳೆ ಸುರಿಯುತ್ತಿದ್ದ ಸಮಯದಲ್ಲಿ, ಅವರು ತೋಡಿನ ಮತ್ತೊಂದು ಬದಿಯಲ್ಲಿರುವ ತಮ್ಮ ಮಾವನ ಮನೆಗೆ ತೆರಳಲು ಕೈಯಲ್ಲಿ ಟಾರ್ಚ್ ಹಿಡಿದು ಮನೆಯಿಂದ ಹೊರಟಿದ್ದರು. ಮಾರ್ಗಮಧ್ಯೆ ತೋಡಿಗೆ ಹಾಕಲಾಗಿರುವ ಸಣ್ಣ ಸೇತುವೆಯ ಮೂಲಕ ಅವರು ಸಾಗಬೇಕಿತ್ತು.
ಆದರೆ ಎಷ್ಟು ಸಮಯವಾದರೂ ಅವರು ಮಾವನ ಮನೆಗೆ ತಲುಪದಿದ್ದಾಗ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ತುಂಬಿ ಹರಿಯುತ್ತಿದ್ದ ತೋಡಿನ ಸಮೀಪ ಅವರ ಚಪ್ಪಲಿ ಮತ್ತು ಟಾರ್ಚ್ ಪತ್ತೆಯಾಗಿದೆ. ಇದರಿಂದಾಗಿ ಅವರು ಕಾಲುಜಾರಿ ತೋಡಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳೀಯರು ಸೇರಿ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನ ವರೆಗೂ ಹುಡುಕಾಟ ನಡೆಸಿದ್ದಾರೆ. ಭಾನುವಾರ ದಿನವಿಡೀ ಎನ್ ಡಿಆರ್ ಎಫ್ ತಂಡದ ಸದಸ್ಯರು ಹುಡುಕಾಟ ನಡೆಸಿದ್ದು ಸಂಜೆಯ ವರೆಗೂ ಜೀವನ್ ಪಿಂಟೋ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಘಟನೆ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಲ ಗ್ರಾಮಾಂತರ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಶನಿವಾರ ರಾತ್ರಿಯಿಂದಲೇ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ. ರವಿವಾರವೂ ಶೋಧ ಕಾರ್ಯ ಮುಂದುವರಿದಿದೆಯಾದರೂ, ಈವರೆಗೆ ಅವರ ಯಾವುದೇ ಸುಳಿವು ಲಭಿಸಿಲ್ಲ.
Discover more from Coastal Times Kannada
Subscribe to get the latest posts sent to your email.







Discussion about this post