ಮಂಗಳೂರು, ಮಾ.3: ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸುತ್ತಿರುವ ಬಿಜೆಪಿ ಅಳೆದು ತೂಗಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನಿನ್ನೆ ಬಿಡುಗಡೆ ಮಾಡಿದೆ. ಅದರಂತೆ 33 ಹಾಲಿ ಸಂಸದರನ್ನು ಕೈಬಿಡಲಾಗಿದೆ. ಈ ಪೈಕಿ ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಕೂಡ ಒಬ್ಬರು. ಇವರ ಬದಲು ದೆಹಲಿ ಟಿಕೆಟ್ ಅನ್ನು ಸುಷ್ಮ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್ ಅವರಿಗೆ ನೀಡಲಾಗಿದೆ. ಇತ್ತ, ಟಿಕೆಟ್ ಕೈತಪ್ಪುತ್ತಿದ್ದಂತೆ ಮಂಗಳೂರಿನಲ್ಲಿ ಮೀನಾಕ್ಷಿ ಲೇಖಿ ಅವರು ಭಾಗಿಯಾಗಬೇಕಿದ್ದ ಕಾರ್ಯಕ್ರಮವನ್ನು ಬಿಜೆಪಿ ಮುಂದೂಡಿದೆ.
ನಾಳೆ (ಫೆಬ್ರವರಿ 4) ಮಂಗಳೂರಿನ ಸಂಘನಿಕೇತನದಲ್ಲಿ ಬೂತ್ ಕಾರ್ಯಕರ್ತರ ಬೃಹತ್ ಸಮಾವೇಶ ಆಯೋಜಿಸಲಾಗಿತ್ತು. ಈ ಸಮಾವೇಶಕ್ಕೆ ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಇಲಾಖೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಅವರನ್ನು ಆಹ್ವಾನಿಸಲಾಗಿತ್ತು. ಅವರು ಭಾಗಿಯಾಗುವುದು ಖಚಿತವಾಗಿತ್ತು. ಆದರೆ, ಇವರಿಗೆ ಟಿಕೆಟ್ ಕೈತಪ್ಪುತ್ತಿದ್ದಂತೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಈಬಗ್ಗೆ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ವಕ್ತಾರ ಅರುಣ್ ಜಿ. ಶೇಟ್ ಮಾಹಿತಿ ನೀಡಿದ್ದಾರೆ. ಸುಪ್ರೀಂ ಕೋರ್ಟ್ ವಕೀಲರೂ ಆಗಿರುವ ಮೀನಾಕ್ಷಿ ಲೇಖಿ 2014 ಮತ್ತು 2019ರಲ್ಲಿ ದೆಹಲಿ ಕ್ಷೇತ್ರದಿಂದ ಗೆಲುವು ಕಂಡಿದ್ದಾರೆ. ಈ ಬಾರಿ ವಿರೋಧಿ ಅಲೆ ಎದುರಿಸುತ್ತಿರುವ ಕಾರಣದಿಂದಾಗಿ ಲೇಖಿ ಅವರನ್ನು ಬದಲಿಸಲಾಗಿದ್ದು, ಆ ಸ್ಥಾನವನ್ನು ಮಾಜಿ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಮಗಳು 39 ವರ್ಷದ ಬಾನ್ಸುರಿ ಸ್ವರಾಜ್ ಅವರಿಗೆ ನೀಡಲಾಗಿದೆ. ಇದರಿಂದ ಸಿಟ್ಟಿನಲ್ಲಿರುವ ಮೀನಾಕ್ಷಿ ಲೇಖಿ ಮಂಗಳೂರು, ಉಡುಪಿ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ರದ್ದು ಪಡಿಸಿದ್ದಾರೆ.
ನಿನ್ನೆ ದೇಶದ 195 ಕ್ಷೇತ್ರಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ನವದೆಹಲಿ ಸಂಸದೆ ಮೀನಾಕ್ಷಿ ಲೇಖಿಗೆ ಟಿಕೆಟ್ ಮಿಸ್ ಆಗಿದ್ದು, ಮಾಜಿ ಕೇಂದ್ರ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಅವರಿಗೆ ಕ್ಷೇತ್ರದಲ್ಲಿ ಮಣೆ ಹಾಕಲಾಗಿದೆ.
ರಾಜದೀಪ್ ರಾಯ್, ಹೋರೆನ್ ಸಿಂಗ್ ಬೇ, ಪಲ್ಲಬ್ ಲೋಚನ್ ದಾಸ್, ರಾಮೇಶ್ವರ್ ತೇಲಿ, ಗುಹರಾಮ್ ಅಜ್ಗಲ್ಲಿ, ಸುನಿಲ್ ಕುಮಾರ್ ಸೋನಿ, ಚುನ್ನಿ ಲಾಲ್ ಸಾಹು, ಮೋಹನ್ ಮಾಂಡವಿ, ಮಾಜಿ ಕೇಂದ್ರ ಸಚಿವ ಹರ್ಷವರ್ಧನ್, ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ, ಮೀನಾಕ್ಷಿ ಲೇಖಿ, ರಮೇಶ್ ಬಿಧುರಿ ಸೇರಿದಂತೆ ಒಟ್ಟು 33 ಹಾಲಿ ಸಂಸದರಿಗೆ 2024ರ ಲೋಕಸಭಾ ಚುನಾವಣೆಯ ಬಿಜೆಪಿ ಟಿಕೆಟ್ ಕೈತಪ್ಪಿದೆ. ಹರ್ಷವರ್ಧನ್ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post