ಮಂಗಳೂರು, ಜೂನ್ 4: ಕರಾವಳಿಯಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಕೊರತೆ ಇಲ್ಲ. ಶಿಕ್ಷಣಕ್ಕೂ ಕೊರತೆ ಇಲ್ಲ. ಹಾಗಿದ್ದರೂ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವುದು, ಅದರಲ್ಲಿ ತೇರ್ಗಡೆಯಾಗುವುದು ತುಂಬ ಕಡಿಮೆ. ಈ ಬಗ್ಗೆ ಅರಿತ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಕಾಲೇಜು ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಮಂಗಳೂರಿನ ಪುರಭವನದಲ್ಲಿ ಐಎಎಸ್, ಐಪಿಎಸ್, ಇನ್ನಿತರ ಪೊಲೀಸ್ ಸೇವೆಗಳಿಗೆ ಹೇಗೆ ತಯಾರಾಗಬೇಕು, ಯಾವ ರೀತಿ ತಯಾರಿ ನಡೆಸಬೇಕು ಎನ್ನುವ ಬಗ್ಗೆ ಕಾರ್ಯಾಗಾರ ನಡೆಸಿದ್ದಾರೆ.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಪೊಲೀಸ್ ಕಮಿಷನರ್ ಶಶಿಕುಮಾರ್, ಕರಾವಳಿ ಜಿಲ್ಲೆಗಳು ಶಿಕ್ಷಣ ಕಾಶಿಯೆಂದೇ ಹೆಸರು ಮಾಡಿದೆ. ಆದರೆ, ಸ್ಪರ್ಧಾತ್ಮಕ ಪರೀಕ್ಷೆಗೆ ಹೋಲಿಸಿದರೆ ಈ ಭಾಗದ ಮಂದಿ ತುಂಬ ಹಿಂದೆ ಇದ್ದಾರೆ. ಇಂತಹ ಪರೀಕ್ಷೆಗಳನ್ನು ಹೇಗೆ ತಯಾರಿ ಎದುರಿಸಬೇಕು ಎನ್ನುವ ಬಗ್ಗೆಯೇ ಇಲ್ಲಿನ ಮಂದಿಗೆ ಮಾಹಿತಿ ಇಲ್ಲ. ವರ್ಷದ ಹಿಂದೆ ಒಂದು ತಿಂಗಳ ಕಾಲ ಆಸಕ್ತರಿಗಾಗಿ ಕಾರ್ಯಾಗಾರ ನಡೆಸಿದ್ದೆವು. ಕಾರ್ಯಾಗಾರಕ್ಕೆ ಪಾಲ್ಗೊಳ್ಳಲು 706 ಅರ್ಜಿಗಳು ಬಂದಿದ್ದವು. ಅದರಲ್ಲಿ ಅಂತಿಮಗೊಳಿಸಿ 100 ಮಂದಿಗೆ ತರಬೇತಿ ಕೊಡಲಾಗಿತ್ತು. ಆ ಪೈಕಿ 11 ಮಂದಿ ಪೊಲೀಸ್ ಕಾನ್ಸ್ ಟೇಬಲ್ ಆಗಿ ಆಯ್ಕೆಯಾಗಿದ್ದಾರೆ.
ನಗರದ ವಿವಿಧ ಕಾಲೇಜುಗಳ ಪಿಯು ಹಾಗೂ ಪದವಿ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಜತೆಗೆ ಅವರ ಅನುಭವಗಳನ್ನು ಪಡೆದುಕೊಂಡರು. ಕಾರ್ಯಾಗಾರದ ಆರಂಭದಲ್ಲಿ ತಮ್ಮ ಅನುಭವಗಳೊಂದಿಗೆ ಪ್ರೇರಣಾತ್ಮಕ ನುಡಿಗಳನ್ನಾಡಿದ ದ.ಕ. ಜಿಲ್ಲಾ ಎಸ್ಪಿ ಋಷಿಕೇಶ್ ಸೊನಾವಣೆ, ತಾನು ಸಾಫ್ಟ್ ವೇರ್ ಇಂಜಿನಿಯರ್ ಕಲಿತು, ಕೆಲ ವರ್ಷ ಬಹುರಾಷ್ಟ್ರೀಯ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸಿ ಬಳಿಕ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಿ, ಆಯ್ಕೆಯಾದ ಬಗ್ಗೆ ತಿಳಿಸಿದರು. ನಿರ್ದಿಷ್ಟವಾದ ಗುರಿಯೊಂದಿಗೆ ನಾನು ಸಾಧಿಸಿಯೇ ತೀರುವೆನೆಂಬ ಹಠದಿಂದ ಪ್ರಯತ್ನ ಮುಂದುವರಿಸಿದರೆ ಯಾವುದೇ ರೀತಿಯಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದವರು ಹೇಳಿದರು.
ಬಂಟ್ವಾಳ ಎಎಸ್ಪಿ ಅವಿನಾಶ್ ರಜಪೂತ್ ಮಾತನಾಡಿ, ಓದಿದ ಮಾತ್ರಕ್ಕೆ ಪರೀಕ್ಷೆ ಪಾಸ್ ಆಗಲ್ಲ. ತುಂಬ ಶ್ರಮ ಪಡಬೇಕಾಗುತ್ತದೆ. ನಾನು ಐದನೇ ಬಾರಿಯ ಪ್ರಯತ್ನದಲ್ಲಿ ಪಾಸ್ ಆಗಿದ್ದೆ. ಪ್ರತಿ ಬಾರಿಯೂ ಸಂದರ್ಶನದ ವರೆಗೆ ಹೋಗುತ್ತಿದ್ದೆ. ಫೇಲ್ ಆಗುತ್ತಿದ್ದೆ. ಆಗೋದಿಲ್ಲ ಅಂತ ಇದ್ದುಬಿಟ್ಟಿದ್ದರೆ ಈ ಮಟ್ಟಿಗೆ ಬರಲು ಆಗುತ್ತಿರಲಿಲ್ಲ. ಸಾಮಾನ್ಯ ಮಧ್ಯಮ ವರ್ಗದವನಾಗಿದ್ದರೂ, ನನಗೆ ಪರೀಕ್ಷೆ ಪಾಸ್ ಮಾಡುವುದು ಕಷ್ಟವಾಗಲಿಲ್ಲ. ಅಬ್ಜೆಕ್ಟಿವ್ ಪ್ರಶ್ನೆಗಳನ್ನು ಉತ್ತರಿಸಲು ನಮ್ಮ ಸಮಾಜದಲ್ಲಿ ಏನೇನು ಆಗುತ್ತಿವೆ ಅನ್ನೋದನ್ನು ಓದಿ ತಿಳ್ಕೋಬೇಕು. ಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಮಂಗಳೂರು ನಗರ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಹರಿರಾಮ್ ಶಂಕರ್ ಸ್ವಾಗತಿಸಿ, ತನ್ನ ಅನುಭವ ಹೇಳಿಕೊಂಡರು. ಕೊನೆಯಲ್ಲಿ ಇತ್ತೀಚೆಗೆ ಸಬ್ ಇನ್ ಸ್ಪೆಕ್ಟರ್ ಹುದ್ದೆ ಗಿಟ್ಟಿಸಿಕೊಂಡವರು ತಮ್ಮ ಪರೀಕ್ಷೆ ಗೆದ್ದ ಅನುಭವಗಳನ್ನು ಹೇಳಿಕೊಂಡರು. ಕರ್ನಾಟಕ ಪೊಲೀಸ್ ಸೇವೆಯಲ್ಲಿ ಐದಾರು ವಿಭಾಗ ಇದೆ, ಎಲ್ಲದಕ್ಕೂ ಬೇರೆಯದೇ ಅರ್ಹತೆಗಳಿವೆ. ಪಿಯುಸಿ, ಪದವಿ, ಸೈನ್ಸ್ ಓದಿದವರಿಗೆ ಹೀಗೆ ಎಲ್ಲ ವಿಭಾಗದವರಿಗೂ ಆಯ್ಕೆಗಳಿವೆ. ಸೈನ್ಸ್ ಆದವರು ಫಾರೆನ್ಸಿಕ್ ವಿಭಾಗದಲ್ಲಿ, ಸಿಐಡಿ ವಿಭಾಗದ ಡಿಟೆಕ್ಟಿವ್ ಆಗಲು ಅವಕಾಶ ಇದೆ. ಇದರ ಬಗ್ಗೆ ತಿಳಿದುಕೊಂಡು ಪರೀಕ್ಷೆಗೆ ತಯಾರಿ ಆಗಬೇಕು ಎಂದು ಆರ್ ಎಸ್ಐ ಗಿರೀಶ್ ಹೇಳಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ನಿರಂತರ ತಯಾರಿ, ನಿರ್ದಿಷ್ಟ ಗುರಿ ಮುಖ್ಯ – ಎನ್. ಶಶಿಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು.
ಸ್ಪರ್ಧಾತ್ಮಕ ಪರೀಕ್ಷೆ ಎಂಬುದು ಯಾವುದೇ ರೀತಿಯ ವಿದ್ಯಾರ್ಹತೆ ಅಲ್ಲ. ಅದು ಸರಕಾರಿ ಸೇವೆಯಲ್ಲಿನ ಉನ್ನತ ಹುದ್ದೆಗಾಗಿ ನಡೆಯುವ ಪರೀಕ್ಷೆ. ಇದಕ್ಕಾಗಿ ಆಕಾಂಕ್ಷಿಗಳಲ್ಲಿ ನಿರ್ದಿಷ್ಟವಾದ ಗುರಿ ಹಾಗೂ ಸತತ ಪ್ರಯತ್ನ ಅತೀ ಮುಖ್ಯ. ಶಿಕ್ಷಣ ಕಾಶಿಯೆಂದೇ ಹೆಸರಾಗಿರುವ ದ.ಕ., ಉಡುಪಿ ಜಿಲ್ಲೆಯಲ್ಲಿ ಸ್ಪಧಾತ್ಮಕ ಪರೀಕ್ಷೆಗಳ ಬಗ್ಗೆ ಆಸಕ್ತಿಯಿದ್ದರೂ ಮಾರ್ಗದರ್ಶನದ ಕೊರತೆ ಇದೆ. ಅದು ದೊರಕಿದರೆ ಸಾಕಷ್ಟು ಸಂಖ್ಯೆಯಲ್ಲಿ ಜಿಲ್ಲೆಯ ಯುವಕರು ಸರಕಾರಿ ಸೇವೆಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರಂತರ ಓದುವಿಕೆ, ಸ್ನೇಹಿತರು, ಕುಟುಂಬ, ಬಂಧುಗಳ ಪ್ರೋತ್ಸಾಹ, ಏಕಾಗ್ರ ಚಿತ್ತ, ಅರ್ಥೈಸಿಕೊಂಡು ಓದಿ, ಅರಗಿಸಿಕೊಳ್ಳುವುದು ಇವೇ ಮೊದಲಾದ ಕ್ರಮಗಳನ್ನು ತೆಗೆದುಕೊಂಡರೆ ಸ್ಪರ್ಧಾತ್ಮಕ ಪರೀಕ್ಷೆ ಪಾಸ್ ಮಾಡುವುದು ಕಷ್ಟವಲ್ಲ. ಗುರಿ ಮತ್ತು ತರಬೇತಿ ನಿಯಮಿತವಾಗಿ ಇರಬೇಕು. ಅಪಾರ ಶ್ರಮ ವಹಿಸಿದರೆ ಫೇಲ್ ಆಗಲು ಸಾಧ್ಯವೇ ಇಲ್ಲ. ನಿಮ್ಮ ಭವಿಷ್ಯಕ್ಕೆ ನೀವೇ ಉತ್ತರ ನೀಡಬೇಕು. ಅನಗತ್ಯ ವಿಚಾರಗಳನ್ನು ತಲೆಗೆ ಹಾಕಿಕೊಳ್ಳಬಾರದು.