ಪುತ್ತೂರು: ಎರಡೂವರೆ ವರ್ಷದ ಹಿಂದೆ ನಡೆದಿದ್ದ ಹಿಂದೂ ಜಾಗರಣಾ ವೇದಿಕೆಯ ಪುತ್ತೂರು ತಾಲ್ಲೂಕು ಘಟಕದ ಕಾರ್ಯದರ್ಶಿ ಕಾರ್ತಿಕ್ ಮೇರ್ಲ ಕೊಲೆ ಪ್ರಕರಣದ ಪ್ರಮುಖ ಆರೋಪಿ ಚರಣ್‌ರಾಜ್ ರೈ (28) ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿಶನಿವಾರ ಕೊಲೆ ಮಾಡಲಾಗಿದೆ. ಆರ್ಯಾಪು ಗ್ರಾಮದ ಸಂಪ್ಯ ಪೊಲೀಸ್ ಠಾಣೆಯ ಸಮೀಪದ ನಿವಾಸಿಯಾಗಿದ್ದ ಚರಣ್‌ರಾಜ್ ಫೈನಾನ್ಸ್ ಸಂಸ್ಥೆಯನ್ನು ನಡೆಸುತ್ತಿದ್ದ. ಆತನ ಪತ್ನಿ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯವರಾಗಿದ್ದು, ಅಲ್ಲಿನ ಮೇಲಿನ ಪೇಟೆಯಲ್ಲಿ ದಂಪತಿಯು ಮೆಡಿಕಲ್ ಅಂಗಡಿ ತೆರೆಯಲು ಸಿದ್ಧತೆ ನಡೆಸುತ್ತಿದ್ದರು. ಭಾನುವಾರ ಅದರ ಶುಭಾರಂಭ ಇಟ್ಟುಕೊಳ್ಳಲಾಗಿತ್ತು. ಅದರ ಸಿದ್ಧತೆಯಲ್ಲಿರುವಾಗ ಎರಡು ಬೈಕ್‌ಗಳಲ್ಲಿ ಬಂದ ಮೂವರು ದುಷ್ಕರ್ಮಿಗಳು ಹಾಡುಹಗಲೇ ರಸ್ತೆ ಬದಿಯಲ್ಲೇ ತಲುವಾರಿನಿಂದ ಕಡಿದು ಹತ್ಯೆ ಮಾಡಿದ್ದಾರೆ.
ರಸ್ತೆ ಬದಿ ರಕ್ತದ ಮಡುವಿನಲ್ಲಿ ಬಿದ್ದ ಚರಣ್‌ರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೃತ್ಯಕ್ಕೆ ಬಳಸಿದ ಆಯುಧವನ್ನು ಆರೋಪಿಗಳು ಅಲ್ಲೇ ಪಕ್ಕದಲ್ಲಿ ಎಸೆದು ಹೋಗಿದ್ದಾರೆ. ಘಟನಾ ಸ್ಥಳಕ್ಕೆ ಬೆಳ್ಳಾರೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚರಣ್‌ರಾಜ್‌ಗೆ ಪತ್ನಿ ಹಾಗೂ ಒಂದು ವರ್ಷದ ಮಗು ಇದೆ.
ಕೊಲೆ ಪ್ರಕರಣದ ಆರೋಪಿ: 2019ರ ಸೆಪ್ಟೆಂಬರ್ 4ರಂದು ರಾತ್ರಿ ಸಂಪ್ಯ ಪೊಲೀಸ್ ಠಾಣೆಯ ಎದುರು ನಡೆಯುತ್ತಿದ್ದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಯಕ್ಷಗಾನ ವೀಕ್ಷಿಸುತ್ತಿದ್ದ ಕಾರ್ತಿಕ್ ಮೇರ್ಲ (27) ಎಂಬುವರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಚರಣ್‌ರಾಜ್ ರೈ, ಅವರ ಸಹೋದರ ಕಿರಣ್ ರೈ, ಮಂಗಳೂರಿನ ಪ್ರೀತೇಶ್ ಶೆಟ್ಟಿ ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದ್ದ ಮಂಗಳೂರಿನ ಮೊಂತೆರೊ ಅವರನ್ನು ಪೊಲೀಸರು ಬಂಧಿಸಿದ್ದರು. ಒಂದೂವರೆ ವರ್ಷದ ಹಿಂದೆ ಜಮೀನಿನ ಮೇಲೆ ಮೂವರು ಆರೋಪಿಗಳು ಬಿಡುಗಡೆಯಾಗಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post