ಮಂಗಳೂರು, : ಕೆಎಂಸಿ ಆಸ್ಪತ್ರೆ ಮಂಗಳೂರು, ಫ್ಯಾಮಿಲಿ ಡಾಕ್ಟರ್ಸ್ ಅಸೋಸಿಯೇಷನ್ (ದಕ್ಷಿಣ ಕನ್ನಡ ಶಾಖೆ) ಮತ್ತು ಆಯುಷ್ ಫೆಡರೇಶನ್ ಆಫ್ ಇಂಡಿಯಾ (ದಕ್ಷಿಣ ಕನ್ನಡ ಶಾಖೆ) ಜಂಟಿಯಾಗಿ ‘ವೈದ್ಯರ ದಿನಾಚರಣೆ–2026’ನ್ನು ಅರ್ಥಪೂರ್ಣವಾಗಿ ಆಚರಿಸಿದೆ. ಈ ಸಮಾರಂಭದಲ್ಲಿ, ಗ್ರಾಮೀಣ ಮತ್ತು ನಗರದ ಹೊರವಲಯದ ಪ್ರದೇಶಗಳಲ್ಲಿ ಸಮಾಜದ ಆರೋಗ್ಯ ರಕ್ಷಣೆಗೆ ಶ್ರಮಿಸುತ್ತಿರುವ ವೈದ್ಯರನ್ನು ಸನ್ಮಾನಿಸಲಾಯಿತು.
ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿರುವ ಕೆಎಂಸಿ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯುಷ್ ಫೆಡರೇಷನ್ ಆಫ್ ಇಂಡಿಯಾ (ದಕ್ಷಿಣ ಕನ್ನಡ ಶಾಖೆ), ಫ್ಯಾಮಿಲಿ ಡಾಕ್ಟರ್ಸ್ ಅಸೋಸಿಯೇಷನ್ (ದಕ್ಷಿಣ ಕನ್ನಡ ಶಾಖೆ), ವಿವಿಧ ವಿಭಾಗಗಳ ಮುಖ್ಯಸ್ಥರು (ಎಚ್‌ಒಡಿಗಳು) ಹಾಗೂ ಇತರ ವೈದ್ಯಕೀಯ ವೃತ್ತಿಪರರು ಸೇರಿದಂತೆ 150ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು.


ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಎಂಎಎಚ್‌ಇ) ಮಂಗಳೂರು ಕ್ಯಾಂಪಸ್‌ನ ಪ್ರೊ ವೈಸ್ ಚಾನ್ಸಲರ್ ಡಾ. ದಿಲೀಪ್ ಜಿ. ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಬಳಿಕ ಕೇಕ್ ಕತ್ತರಿಸಿ, ವಿಶೇಷ ಸೇವೆ ಸಲ್ಲಿಸಿರುವ ವೈದ್ಯರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅಶೋಕನಗರದ ಡಾ. ಎಸ್. ಶ್ರೀಕಾಂತ್ ಶೆಣೈ, ಶಿರ್ತಾಡಿಯ ಡಾ. ಕೆ. ಕೃಷ್ಣರಾಜ್ ಭಟ್, ಶಕ್ತಿನಗರದ ಡಾ. ಕೃಷ್ಣ ಎಂ. ಗೋಖಲೆ, ಬೆಳ್ತಂಗಡಿಯ ಡಾ. ಡೆಂಜಿಲ್ ಜಾನ್ ನೊರೊನ್ಹಾ, ಸುಳ್ಯದ ಡಾ. ವೆಂಕಟಕೃಷ್ಣ ಭಟ್ ಎಸ್., ಕಾಸರಗೋಡಿನ ಡಾ. ಕೃಷ್ಣ ಭಟ್ ಸಿ., ಕಾಸರಗೋಡಿನ ಡಾ. ಹರಿಕಿರಣ್ ಟಿ. ಬಂಗೇರ, ತಳಿಪರಂಬದ ಡಾ. ಚಾರ್ಲ್ಸ್ ಎಸ್. ಮಾನಿಯನ್ ಹಾಗೂ ನ್ಯೂ ಮಂಗಳೂರು ಪೋರ್ಟ್ ಅಥಾರಿಟಿಯ ಮುಖ್ಯ ವೈದ್ಯಾಧಿಕಾರಿ ಡಾ. ಸುರೇಖಾ ಎನ್. ಹೊಸ್ಕೇರಿ ಅವರನ್ನು ಅತ್ಯುತ್ತಮ ವೈದ್ಯಕೀಯ ಸೇವೆಗಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆಎಂಸಿ ಆಸ್ಪತ್ರೆ ಮಂಗಳೂರು ಕ್ಲಸ್ಟರ್ ನಿರ್ದೇಶಕ ಪ್ರಮೋದ್ ಕುಂದರ್, “ವೈದ್ಯರ ದಿನವು ಪ್ರತಿಯೊಬ್ಬ ವೈದ್ಯರ ನಿಸ್ವಾರ್ಥ ಸೇವೆ ಮತ್ತು ಕರುಣೆಯನ್ನು ಗೌರವಿಸುವ ದಿನವಾಗಿದೆ. ವಿಶೇಷವಾಗಿ ಕುಟುಂಬ ವೈದ್ಯರು ಹಾಗೂ ಗ್ರಾಮೀಣ ಮತ್ತು ಹೊರವಲಯದ ಸಮುದಾಯಗಳಿಗೆ ಆರೋಗ್ಯ ಸೇವೆ ಒದಗಿಸುವ ವೈದ್ಯರು ಗುಣಮಟ್ಟದ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿದ್ದಾರೆ. ಅವರ ಸೇವೆಯನ್ನು ಗೌರವಿಸುವುದು ಹಾಗೂ ಅವರೊಂದಿಗೆ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವುದು ನಮ್ಮ ಹೆಮ್ಮೆಯಾಗಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಫ್ಯಾಮಿಲಿ ಡಾಕ್ಟರ್ಸ್ ಅಸೋಸಿಯೇಷನ್ (ಆರ್), ಮಂಗಳೂರು ಅಧ್ಯಕ್ಷ ಡಾ. ಸದಾಶಿವ ಪೋಲನಾಯ, ಕಾರ್ಯದರ್ಶಿ ಡಾ. ಜಿ.ಕೆ. ಭಟ್ ಸಂಕಬಿತ್ಲು, ಆಯುಷ್ ಫೆಡರೇಷನ್ ಆಫ್ ಇಂಡಿಯಾ (ದಕ್ಷಿಣ ಕನ್ನಡ ಶಾಖೆ) ಅಧ್ಯಕ್ಷ ಡಾ. ಕೃಷ್ಣ ಗೋಖಲೆ ಹಾಗೂ ಡಾ. ಸುರೇಶ್ ನೆಗಳಗುಳಿ ಉಪಸ್ಥಿತರಿದ್ದು, ಆಸ್ಪತ್ರೆಗಳು ಮತ್ತು ಸಮುದಾಯ ವೈದ್ಯರ ನಡುವಿನ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು.


Discover more from Coastal Times Kannada
Subscribe to get the latest posts sent to your email.








Discussion about this post