ಪಣಂಬೂರು: ಮಹಾರಾಷ್ಟ್ರದಿಂದ ಕೇರಳದ ಪೈನ್ನೂರಿಗೆ ಕುಟುಂಬದೊಂದಿಗೆ ತೆರಳುತ್ತಿದ್ದ ವಿಕಾಸ್ ಸುಬ್ಬುರಾವ್ ಧನವಡೆ ಅವರನ್ನು ಜೂ.29ರಂದು ಅಪಹರಿಸಿ, ಕಾರು ಹಾಗೂ ಚಿನ್ನಾಭರಣ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಂಬೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕೇರಳದ ಕಣ್ಣೂರು ಜಿಲ್ಲೆಯ ತಲಶ್ಶೇರಿ ನಿವಾಸಿ ನಿಮಿಲ್ ಆರ್.ಕೆ. (37), ಆರೋಪಿಗಳಿಗೆ ತಲೆಮರೆಸಿಕೊಳ್ಳಲು ನೆರವಾಗಿದ್ದ ಕೊಡಗು ಜಿಲ್ಲೆಯ ಅಕ್ಕತ್ತೂರು ನಿವಾಸಿ ಇರ್ಷಾದ್ (40) ಹಾಗೂ ಕೃತ್ಯಕ್ಕೆ ಕಾರು ಒದಗಿಸಿದ್ದ ಮಡಿಕೇರಿ ನಿವಾಸಿ ಮುಸ್ತಫ (49) ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಮಾಹಿತಿ ನೀಡಿದ್ದಾರೆ.
ಕೇರಳದ ಪಯ್ಯನ್ನೂರಿನ ಜುವೆಲ್ಲರಿ ಉದ್ಯಮಿ ವಿಕಾಸ್ ಧನವಡೆ (44) ಅವರು ಜುಲೈ 29ರಂದು ನಸುಕಿನ ಜಾವ ಸುಮಾರು 2:45 ಗಂಟೆಗೆ ಮಹಾರಾಷ್ಟ್ರದಿಂದ ತಮ್ಮ ಕುಟುಂಬದೊಂದಿಗೆ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ-66 ಮೂಲಕ ಬರುತ್ತಿದ್ದ ವೇಳೆ, ಮಂಗಳೂರಿನ ಸುರತ್ಕಲ್ ಸಮೀಪದ ಬೈಕಂಪಾಡಿ ಜಂಕ್ಷನ್ನಲ್ಲಿ ಎರಡು ಇನ್ನೋವಾ ಹಾಗೂ ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ 6-7 ಜನರಿದ್ದ ಮುಸುಕುಧಾರಿಗಳು ಕಾರನ್ನು ಅಡ್ಡಗಟ್ಟಿ, ತಲವಾರು ತೋರಿಸಿ ಹಲ್ಲೆ ನಡೆಸಿ 180 ಗ್ರಾಮ್ ಚಿನ್ನಾಭರಣಗಳಿದ್ದ ಸೂಟ್ ಕೇಸನ್ನು ಕಿತ್ತುಕೊಂಡು ಕಾರು ಸಹಿತ ಪರಾರಿಯಾಗಿದ್ದರು.
ಕಾರಿನೊಳಗೆ ಬ್ಯಾಗಿನಲ್ಲಿರಿಸಿದ್ದ ಸುಮಾರು 180 ಗ್ರಾಂ ಚಿನ್ನಾಭರಣಗಳು (ಅಂದಾಜು ಮೌಲ್ಯ ರೂ.20 ಲಕ್ಷ), ಎರಡು ಮೊಬೈಲ್ ಫೋನ್ (ರೂ.10,000) ಹಾಗೂ ಕಾರು (ಅಂದಾಜು ರೂ.3 ಲಕ್ಷ) ಸೇರಿದಂತೆ ಒಟ್ಟು 23,10,000 ಮೌಲ್ಯದ ದರೋಡೆ ಮಾಡಿದ್ದರು. ಪಣಂಬೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ: 84/2026 ಕಲಂ: 310(2), 311, 324(2), 137(2), 126(2) ಭಾರತೀಯ ನ್ಯಾಯ ಸಂಹಿತೆ-2023 2(b) KPDLP Act ಕಾಯ್ದೆಯಂತೆ ಪ್ರಕರಣ ದಾಖಲಾಗಿತ್ತು.
ತನಿಖೆಯ ಸಂದರ್ಭದಲ್ಲಿ ಜುಲೈ 30ರಂದು ಬೆಳಗ್ಗೆ 11:30 ಗಂಟೆಗೆ ದರೋಡೆಕೋರರು ಚಲಾಯಿಸಿ ಹೋಗಿದ್ದ ವಿಕಾಸ್ ಧನವಡೆ ಅವರಿಗೆ ಸೇರಿದ್ದ ಮಾರುತಿ ಡಿಸೈರ್ ಕಾರು ನಂಬರ್ ಪ್ಲೇಟ್ ಇಲ್ಲದೇ ಇರುವ ಸ್ಥಿತಿಯಲ್ಲಿ ಬಂಟ್ವಾಳ ತಾಲೂಕು ಪಚ್ಚಿನಡ್ಕ ಎಂಬಲ್ಲಿ ಗುಡ್ಡ ಪ್ರದೇಶದಲ್ಲಿ ಆರೋಪಿಗಳು ಬಿಟ್ಟು ಹೋಗಿದ್ದನ್ನು ಪತ್ತೆಹಚ್ಚಿ ಪೊಲೀಸರು ವಶಕ್ಕೆ ಪಡೆದಿದ್ದರು.
ಪ್ರಕರಣದಲ್ಲಿ ಪ್ರಮುಖ ಆರೋಪಿಗಳಿಗೆ ಸಹಕರಿಸಿದ ತಲಶ್ಶೇರಿ ಜಿಲ್ಲೆಯ ಮಂಬರಮ್ ಗ್ರಾಮದ ನಿಮಿಲ್ ಆರ್.ಕೆ (37) ಎಂಬಾತನನ್ನು ಪಣಂಬೂರು ಠಾಣೆ ಪೊಲೀಸ್ ನಿರೀಕ್ಷಕ ಸಲೀಂ ಅಬ್ಬಾಸ್ ಮತ್ತು ಸಿಬ್ಬಂದಿ ಕೇರಳದ ಕಣ್ಣೂರು ಜಿಲ್ಲೆಯ ಚಾಲ ಎಂಬಲ್ಲಿರುವ ASTER MIMS ಆಸ್ಪತ್ರೆಯ ಹತ್ತಿರ ವಶಕ್ಕೆ ಪಡೆದಿದ್ದಾರೆ. ಪಣಂಬೂರು ಠಾಣಾ ಪಿ.ಎಸ್.ಐ ಜ್ಞಾನಶೇಖರ ಅವರು ಸಿಬ್ಬಂದಿಗಳೊಂದಿಗೆ ಆರೋಪಿತರಿಗೆ ಕೃತ್ಯ ಎಸಗಲು ಸಹಕರಿಸಿ ಆಶ್ರಯ ನೀಡಿದ ಮಡಿಕೇರಿ ತಾಲೂಕಿನ ಹಕ್ಕತ್ತೂರು ನಿವಾಸಿ ಇರ್ಷಾದ್ (40) ನನ್ನು ಪೊನ್ನಂಪೇಟೆಯಲ್ಲಿ ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಸಹಕರಿಸಿ ಪ್ರಮುಖ ಆರೋಪಿತರಿಗೆ ಕಾರನ್ನು ಒದಗಿಸಿ ಆಶ್ರಯ ನೀಡಿದ ಇನ್ನೋರ್ವ ಆರೋಪಿ ಮುಸ್ತಾಫ (49) ಎಂಬಾತನನ್ನು ಮಡಿಕೇರಿ ತಾಲೂಕು ಮೂರ್ನಾಡು ಜಂಕ್ಷನ್ ನಲ್ಲಿರುವ ಲಯನ್ಸ್ ಕ್ಲಬ್ ಬಳಿಯ ಬಸ್ಸು ನಿಲ್ದಾಣದಲ್ಲಿ ವಶಕ್ಕೆ ಪಡೆದಿರುತ್ತಾರೆ.
ಪ್ರಾಥಮಿಕ ವಿಚಾರಣೆಯಿಂದ ಕೃತ್ಯದಲ್ಲಿ ಒಟ್ಟು 14 ಆರೋಪಿಗಳು ನೇರವಾಗಿ ಭಾಗಿಯಾಗಿದ್ದು ಇಬ್ಬರು ಆರೋಪಿಗಳು ಕೃತ್ಯಕ್ಕೆ ಸಹಕರಿಸಿ ಆರೋಪಿತರಿಗೆ ಆಶ್ರಯ ನೀಡಿದ ಬಗ್ಗೆ ಕಂಡುಬಂದಿದೆ. ಪ್ರಕರಣದಲ್ಲಿ ಭಾಗಿಯಾದ ಒಟ್ಟು 16 ಆರೋಪಿಗಳ ಪೈಕಿ ಮೂವರು ಆರೋಪಿಗಳನ್ನು ಬಂಧಿಸಿ ಜುಲೈ 3ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ವಿಚಾರಣೆಗಾಗಿ ಹತ್ತು ದಿನಗಳ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಪ್ರಮುಖ ಆರೋಪಿಗಳ ಸಹಿತ ಒಟ್ಟು 13 ಆರೋಪಿಗಳ ಪ್ತತೆಗೆ ಬಾಕಿ ಇರುತ್ತದೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ದ 04 ಕಾರುಗಳ ಪೈಕಿ ಒಂದು ಇನ್ನೋವಾ ಕ್ರಿಸ್ಟಾ ಕಾರನ್ನು ಸ್ವಾಧೀಪಡಿಸಿದ್ದು, ಉಳಿದ 03 ಕಾರುಗಳು ಮತ್ತು ದರೋಡೆ ಮಾಡಿರುವ 180 ಗ್ರಾಂ ಚಿನ್ನಾಭರಣ ಹಾಗೂ 2 ಮೊಬೈಲ್ ಫೋನ್ ಪತ್ತೆಗೆ ಬಾಕಿ ಇರುತ್ತದೆ. ಆರೋಪಿಗಳೆಲ್ಲರೂ ಮಡಿಕೇರಿ ಜಿಲ್ಲೆ ಮತ್ತು ಕೇರಳ ರಾಜ್ಯದವರೆಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುತ್ತದೆ.
ಪತ್ತೆ ಕಾರ್ಯದಲ್ಲಿ ಉತ್ತರ ವಿಭಾಗದ ಎಸಿಪಿ ಶ್ರೀಕಾಂತ ಕೆ. ಮತ್ತು ಮಂಗಳೂರು ನಗರದ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್ ಅವರ ನೇತೃತ್ವದಲ್ಲಿ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್, ಪಣಂಬೂರು ಪೊಲೀಸ್ ಠಾಣೆ ಪಿಎಸ್ಐಗಳಾದ ಶ್ರೀಕಲಾ ಕೆ.ಟಿ, ಜ್ಞಾನಶೇಖರ ಹಾಗೂ ಕಾವೂರು, ಮುಲ್ಕಿ ,ಕಂಕನಾಡಿ, ಉರ್ವ ಠಾಣೆಗಳ ಹಾಗು ಸಿಸಿಬಿ ಘಟಕದ ಪಿಎಸ್ಐ ಗಳು ಮತ್ತು ಸಿಬ್ಬಂದಿಗಳು ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.


Discover more from Coastal Times Kannada
Subscribe to get the latest posts sent to your email.







Discussion about this post