ಉಡುಪಿ: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಹೆರ್ಗ ಗ್ರಾಮದ ಈಶ್ವರನಗರದ ಜನನಿ ಬಾರ್ & ರೆಸ್ಟೋರೆಂಟ್ ಸಮೀಪ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಟ್ಟೆ ಕಾಲೇಜಿನ ನಾಲ್ವರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆಗಸ್ಟ್ 2ರಂದು ರಾತ್ರಿ ಸುಮಾರು 11.50 ಗಂಟೆಗೆ ಯಶ್‌ರಾಜ್ ಅವರು ತಮ್ಮ ಸಹೋದರ ಪವನ್ ಕುಮಾರ್ ಹಾಗೂ ಸ್ನೇಹಿತ ಶ್ರೇಯಸ್ ಅವರೊಂದಿಗೆ ಈಶ್ವರನಗರದ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ, ಎರಡು ಕಾರುಗಳಲ್ಲಿ ಬಂದ ಆರೋಪಿತರು ಪವನ್ ಕುಮಾರ್ ಅವರನ್ನು ತಡೆದು ನಿಲ್ಲಿಸಿ ವಿನಾಕಾರಣ ಜಗಳ ಆರಂಭಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಆರೋಪಿಗಳಾದ ಅಕ್ಷಯ್ ಎ. (21), ಪುನೀತ್ ಎಸ್. (21), ಶಮಂತ ಕೆ.ಆರ್. (21) ಹಾಗೂ ಯಶವಂತ್ ಬಿ.ಜೆ. (21) ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ಪವನ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಕೈಯಿಂದ ಹಲ್ಲೆ ಮಾಡಿದ್ದು, ಕಾಲಿನಿಂದ ತುಳಿದಿರುವುದಲ್ಲದೆ ಮೆಟಲ್ ಪಂಚ್‌ನಿಂದ ಮುಖಕ್ಕೆ ಗುದ್ದಿದ ಪರಿಣಾಮ ಪವನ್ ಕುಮಾರ್ ಅವರ ಮೂಗಿಗೆ ತೀವ್ರ ಗಾಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಆರೋಪಿಗಳು ಸ್ವಿಫ್ಟ್ ಡಿಜೈರ್ ಕಾರು (KA-14-P-4245) ಮತ್ತು ಫೋರ್ಡ್ ಕಾರು (KA-14-MB-4109) ನಲ್ಲಿ ಬಂದಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಮಧ್ಯಪ್ರವೇಶಿಸಿದ ಯಶ್‌ರಾಜ್ ಹಾಗೂ ಶ್ರೇಯಸ್ ಅವರ ಮೇಲೆಯೂ ಹಲ್ಲೆ ನಡೆಸಿ, ಕಾಲಿನಿಂದ ತುಳಿದು, ಬಟ್ಟೆಗಳನ್ನು ಹರಿದು ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 120/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 126(2), 352, 351, 115, 118(1), 118(2) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖೆ ನಡೆಸಿದ ಮಣಿಪಾಲ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ತನಿಖೆ ವೇಳೆ ಬಂಧಿತ ಆರೋಪಿಗಳೆಲ್ಲರೂ ನಿಟ್ಟೆ ಕಾಲೇಜಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳಾಗಿರುವುದು ತಿಳಿದುಬಂದಿದೆ. ಪ್ರಕರಣದ ಕುರಿತು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ತಿಮ್ಮೇಶ್ ಬಿ.ಎನ್. ಅವರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post