ಮಂಗಳೂರು : ಆಳ ಸಮುದ್ರ ಮೀನುಗಾರಿಕೆಗೆ ಆಳಸಮುದ್ರಕ್ಕೆ ತೆರಳಿ ಮೀನುಗಾರಿಕೆ ತೆರಳುವ ಮೀನುಗಾರರು 10ಕ್ಕೂ ಹೆಚ್ಚು ದಿನಗಳ ಕಾಲ ಸಮುದ್ರದಲ್ಲೇ ಇರುತ್ತಾರೆ. ಈ ಸಂದರ್ಭ ಸಮುದ್ರದ ನೀರು ಕುಡಿಯಲು ಯೋಗ್ಯವಲ್ಲದ ಕಾರಣ ಒಂದು ವಾರದ ಬಳಕೆಗೆ ಬೇಕಾದ ಸಿಹಿ ನೀರನ್ನು ಹೋಗುವಾಗಲೇ ಬೋಟ್‌ನಲ್ಲಿ ಸಂಗ್ರಹಿಸಿ ಕೊಂಡೊಯ್ಯುತ್ತಾರೆ. ಆದರೆ ಇನ್ನು ಮುಂದೆ ಈ ರೀತಿ ಕೊಂಡೊಯ್ಯುವ ಬದಲು ಸಮುದ್ರದ ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತಿಸಿ ಬಳಕೆ ಮಾಡಬಹುದಾಗಿದೆ. ಅಚ್ಚರಿಯಾದರೂ ಹೌದು. ಸಮುದ್ರದ ಉಪ್ಪು ನೀರನ್ನು ಬೋಟ್‌ನಲ್ಲಿಯೇ ಫಿಲ್ಟರ್ ಮಾಡಿ ಸಿಹಿನೀರಾಗಿ ಪಡೆಯುವ ತಂತ್ರಜ್ಞಾನ ಪ್ರಾರಂಭಿಸಲಾಗಿದೆ. ಭಾರತದಲ್ಲಿಯೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಇದರ ಪ್ರಯೋಗ ನಡೆಸಲಾಗಿದೆ.
ಆಸ್ಟ್ರೇಲಿಯಾದ ಈ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದಲ್ಲೇ ಮೊದಲ ಬಾರಿಗೆ ಈ ರೀತಿಯ ಪ್ರಯೋಗವನ್ನು ಮಂಗಳೂರಿನಲ್ಲಿ ಮಾಡಲಾಗಿದೆ. ಸಮುದ್ರದ ಮಧ್ಯೆದಲ್ಲಿ ಬೋಟ್‌ನಲ್ಲಿಯೇ ಉಪ್ಪು ನೀರನ್ನು ಸಿಹಿ ನೀರಾಗಿ ಫಿಲ್ಟರ್ ಮಾಡುವ ತಂತ್ರಜ್ಞಾನದ ಪ್ರಾತ್ಯಕ್ಷಿತೆಯನ್ನು ಮೀನುಗಾರಿಕ ಸಚಿವ ಎಸ್.ಅಂಗಾರ ಸಮ್ಮುಖದಲ್ಲೇ ನಡೆಸಲಾಯಿತು.
ಈ ತಂತ್ರಜ್ಞಾನ ಅಮೇರಿಕಾ, ಯುರೋಪ್‌ನಲ್ಲಿ ಈಗಾಗಲೇ ಬಳಕೆಯಲ್ಲಿದೆ.
ಆಸ್ಟ್ರೇಲಿಯಾ ಮೂಲದ ರೆಯಾನ್ಸ್ ಎಂಬ ಕಂಪೆನಿ ಈ ಕಿಟ್‌ನ್ನು ತಯಾರಿಸುತ್ತಿದೆ. ಇಲ್ಲಿ ಬೋಟ್ ಸಂಚರಿಸುವಾಗಲೇ ಉಪ್ಪು ನೀರನ್ನು ಪೈಪ್ ಮೂಲಕ ಸಂಗ್ರಹಿಸಲಾಗುತ್ತದೆ. ಪೈಪ್‌ನಿಂದ ಬಂದ ಉಪ್ಪು ನೀರು ಶುದ್ದೀಕರಿಸುವ ಯಂತ್ರದ ಒಳಗೆ ಪಂಪ್ ಆಗಿ ಬಳಿಕ ಫಿಲ್ಟರ್ ಆಗಿ ಸಿಹಿ ನೀರು ಇನ್ನೊಂದು ಪೈಪ್ ಮೂಲಕ ಹೊರ ಬರುತ್ತೆ. ಈ ರೀತಿ ಗಂಟೆಗೆ 168 ಲೀಟರ್ ನೀರು ಫಿಲ್ಟರ್ ಆಗಲಿದ್ದು, ದಿನವೊಂದಕ್ಕೆ 2000 ಲೀ ನೀರು ಫಿಲ್ಟರ್ ಆಗುತ್ತೆ. ಇದರಿಂದ ಸದ್ಯ ನೀರು ಸಂಗ್ರಹಿಸಿಡಲು ಬೋಟ್‌ನಲ್ಲಿ ಸ್ಥಳವಕಾಶ ಸಮಸ್ಯೆ ಜೊತೆ ಅಧಿಕ ಭಾರದ ಹೊರೆ ತಪ್ಪಿದಂತಾಗುತ್ತದೆ. ಮೀನುಗಾರರಿಗೆ ನಿತ್ಯ ಬಳಕೆಗೆ ಇದೇ ನೀರನ್ನು ಬಳಸಬಹುದಾಗಿದ್ದು, ಸಿಹಿ ನೀರು ಮುಗಿಯುತ್ತೆ ಎಂಬ ಆತಂಕವು ಇರುವುದಿಲ್ಲ.
ಆಸ್ಟ್ರೇಲಿಯಾದ ಮೆರೈನ್ ಕಂಪೆನಿಯಾದ ರೆಯಾನ್ಸ್ ನವರು ಈ ಉಪಕರಣವನ್ನು ಅಭಿವೃದ್ಧಿ ಪಡಿಸಿದ್ದು, ಭಾರತದಲ್ಲಿಯೇ ಮೊಟ್ಟ ಮೊದಲಬಾರಿಗೆ ಮಂಗಳೂರಿನ ಮೀನುಗಾರಿಕಾ ಬೋಟ್ ಗೆ ಇದನ್ನು ಅಳವಡಿಕೆ ಮಾಡಲಾಗಿದೆ. ಈ ಉಪಕರಣದಲ್ಲಿ ದಿನಕ್ಕೆ 2 ಸಾವಿರ ಲೀಟರ್ ನೀರನ್ನು ಉತ್ಪಾದನೆ ಮಾಡಲು ಸಾಧ್ಯ. ಈ ಮೂಲಕ ತಿಂಗಳಿಗೆ 60 ಸಾವಿರ ಲೀಟರ್ ನೀರನ್ನು ಉಳಿಕೆ ಮಾಡಲು ಸಾಧ್ಯ. ಇದು ಮೀನುಗಾರರಿಗೆ ಲಾಭದಾಯಕವೂ, ಆರೋಗ್ಯಕರವೂ ಆಗಲಿದೆ.
ಈ ಉಪಕರಣದಲ್ಲಿ ಎರಡು ಪೈಪ್ ಗಳಿದ್ದು, ಒಂದು ಪೈಪ್ ಸಮುದ್ರದಲ್ಲಿನ ನೀರನ್ನು ಸಕ್ ಮಾಡುತ್ತದೆ. ನೀರು ಶುದ್ಧೀಕರಣ ಪ್ರಕ್ರಿಯೆ ಉಪಕರಣದೊಳಗೆ ನಡೆದು ಮತ್ತೊಂದು ಪೈಪ್ ಮೂಲಕ ಶುದ್ಧ ನೀರು ಬರುತ್ತದೆ. ಈ ನೀರು ಸಿಹಿ ನೀರಿನಷ್ಟೇ ಶುದ್ಧವಾಗಿರುತ್ತದೆ.
ಈ ಯಂತ್ರಕ್ಕೆ ನಾಲ್ಕು ಲಕ್ಷದ ಆರುವತ್ತು ಸಾವಿರ ವೆಚ್ಚವಾಗಲಿದ್ದು, ಕೇಂದ್ರ ಸರ್ಕಾರ ಐವತ್ತು ಶೇಖಡ ಸಬ್ಸಿಡಿ ನೀಡುವ ನಿರ್ಧಾರ ಮಾಡಿದೆ. ಇದೀಗ ರಾಜ್ಯ ಸರ್ಕಾರವೂ ಬೋಟ್ ಮಾಲೀಕರಿಗೆ ಈ ಯಂತ್ರ ಅಳವಡಿಕೆಗೆ ವಿಶೇಷ ಅನುದಾನ ನೀಡುವ ಚಿಂತನೆ ನಡೆಸಿದೆ. ಒಟ್ಟಿನಲ್ಲಿ ಇನ್ಮುಂದೆ ಮೀನುಗಾರರಿಗೆ ಸಿಹಿ ನೀರು ಸಮುದ್ರದಲ್ಲೇ ಲಭ್ಯವಾಗಲಿದ್ದು ಸಿಹಿ ನೀರಿನ ಆಭಾವ ತಪ್ಪಲಿದೆ.