ಉಳ್ಳಾಲ, ನ.4: ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕುಂಪಲ, ಪಿಲಾರು ಪಳ್ಳ ಪ್ರದೇಶಗಳಲ್ಲಿ ಚಿರತೆ ಸುತ್ತಾಡುತ್ತಿರುವ ಬಗ್ಗೆ ಇಬ್ಬರು ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಕಾರಣ ಇಂದು ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಿಲಾರು ಪಳ್ಳ ನಿವಾಸಿ ಶಿವರಾಜ್ ಪೊಣ್ಣು ಸ್ವಾಮಿ ಎಂಬವರು ಇತ್ತೀಚೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಮನೆಯ ಬಳಿಯೇ ಚಿರತೆಯೊಂದು ರಸ್ತೆ ದಾಟಿ ಪೊದೆಯೊಳಗೆ ನುಗ್ಗಿದನ್ನು ಗಮನಿಸಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಕುಂಪಲ ಸರಳಾಯ ಕಾಲನಿ ನಿವಾಸಿ ಮೌರಿಷ್ ಡಿಸೋಜಾ ಎಂಬವರು ತೋಟದ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಚಿರತೆಯೊಂದನ್ನು ಕಂಡಿರುವುದಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಕುಂಪಲ ಬಾಲಕೃಷ್ಣ ಮಂದಿರದ ಪರಿಸರದ ಕೃಷ್ಣನಗರ ಎಂಬಲ್ಲಿ ಬೀದಿ ನಾಯಿಯೊಂದನ್ನ ಕಾಡು ಪ್ರಾಣಿ ಅರ್ಧ ಭಕ್ಷಿಸಿದ ಸ್ಥಿತಿಯಲ್ಲಿರುವುದನ್ನ ಸ್ಥಳೀಯರು ಕಂಡಿದ್ದು ಆ ಪ್ರದೇಶಕ್ಕೂ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಅಲ್ಲಿ ಯಾವುದೇ ಪುರಾವೆ ದೊರೆತಿಲ್ಲ. ಇಬ್ಬರು ಪ್ರತ್ಯಕ್ಷದರ್ಶಿಗಳು ಚಿರತೆಯನ್ನ ಕಂಡಂತಹ ಪ್ರದೇಶದಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಕುಂಪಲ, ಪಿಲಾರುವಿನ ಸ್ಥಳೀಯ ವಾಟ್ಸ್ಆ್ಯಪ್ ಗ್ರೂಪ್ ಗಳಲ್ಲಿ ಚಿರತೆಯೊಂದು ಪೊದೆಯೊಳಗೆ ನುಗ್ಗುತ್ತಿರುವ ಫೋಟೊ ಒಂದು ವೈರಲ್ ಆಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡುವಂತಾಗಿದೆ.
ಕುಂಪಲ, ಪಿಲಾರು ಪ್ರದೇಶದಲ್ಲಿ ಚಿರತೆ ಇರುವಿಕೆಯ ಬಗ್ಗೆ ಪ್ರತ್ಯಕ್ಷದರ್ಶಿಗಳ ಹೇಳಿಕೆ ಬಿಟ್ಟರೆ ಬೇರೆ ಯಾವುದೇ ಸಿಸಿಟಿವಿ ದಾಖಲೆ, ಹೆಜ್ಜೆ ಗುರುತು ಪತ್ತೆಯಾಗಿಲ್ಲ. ಆದರೂ ಈ ಬಗ್ಗೆ ನಾವು ಗಂಭೀರವಾಗಿ ಪರಿಗಣಿಸಿದ್ದು, ಮತ್ತೆ ಚಿರತೆಯನ್ನು ಯಾರಾದರೂ ಕಂಡಲ್ಲಿ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಕೋರಿದ್ದೇವೆ. ಚಿರತೆ ಇರುವುದು ಖಾತರಿಯಾದರೆ ಬೋನನ್ನು ಇಟ್ಟು ಕಾರ್ಯಾಚರಣೆ ನಡೆಸುವುದಾಗಿ ಸ್ಥಳ ಪರಿಶೀಲಿಸಿದ ಕೋಟೆಕಾರು ಶಾಖೆ ಉಪವಲಯ ಅರಣ್ಯಾಧಿಕಾರಿ ಮಹಾಬಲ ಅವರು ತಿಳಿಸಿದ್ದಾರೆ.
ಸ್ಥಳೀಯರಾದ ಸಚಿನ್ ಮಡಿವಾಳ, ಕೊಣಾಜೆ ಬೀಟ್ ಫಾರೆಸ್ಟ್ ಗಾರ್ಡ್ ಸವಿತಾ ಗಟ್ಟಿ, ಅರಣ್ಯ ರಕ್ಷಕಿ ಸೌಮ್ಯ ಕೆ. ಮೊದಲಾದವರು ಜೊತೆಗಿದ್ದರು.