ಮಂಗಳೂರು : ಮಂಗಳೂರು ನಗರದ ನೀರುಮಾರ್ಗ ಗ್ರಾಮದ ಕೆಲರಾಯಿ ಪ್ರದೇಶದಲ್ಲಿರುವ ಹಂದಿ ಸಾಕಾಣಿಕಾ ಕೇಂದ್ರದಲ್ಲಿನ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಇರುವುದು ದೃಢಪಟ್ಟಿದೆ. ಈ ರೋಗ ಹರಡುವುದನ್ನು ತಡೆಗಟ್ಟಲು ರಾಷ್ಟ್ರೀಯ ರೋಗ ನಿಯಂತ್ರಣ ಮಾರ್ಗಸೂಚಿಯಂತೆ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರವಿಕುಮಾರ್ ಎಂ ಆರ್ ತಿಳಿಸಿದ್ದಾರೆ.
ಈ ಹಂದಿ ಸಾಕಣೆ ಕೇಂದ್ರದಿಂದ ಒಂದು ಕಿ.ಮೀ ವ್ಯಾಪ್ತಿಯನ್ನು ರೋಗಪೀಡಿತ ವಲಯ ಮತ್ತು ಹತ್ತು ಕಿ.ಮೀ ವ್ಯಾಪ್ತಿಯನ್ನು ಜಾಗೃತ ವಲಯ ಎಂದು ಘೋಷಿಸಲಾಗಿದೆ. ರೋಗಪೀಡಿತ ಹಂದಿಗಳನ್ನು ವಧೆ ಮಾಡಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಆ ಸ್ಥಳದಲ್ಲಿ ಕ್ರಿಮಿನಾಶಕ ಸಿಂಪಡಿಸಲು ಹಾಗೂ ಅಲ್ಲಿಗೆ ಸಾರ್ವಜನಿಕರು ಭೇಟಿ ನೀಡದಂತೆ ನಾಮಫಲಕ ಅಳವಡಿಸುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆಫ್ರಿಕನ್ ಹಂದಿ ಜ್ವರವು ಹಂದಿಗಳಿಂದ ಅಥವಾ ಮಾಂಸ ಸೇವಿಸುವುದರಿಂದ ಮನುಷ್ಯರಿಗೆ ಹರಡುವುದಿಲ್ಲ. ಆದ್ದರಿಂದ ಸಾರ್ವಜನಿಕರು ಮತ್ತು ಹಂದಿ ಪಾಲಕರು ಭಯಭೀತರಾಗುವ ಅವಶ್ಯಕತೆ ಇಲ್ಲ. ಆದಾಗ್ಯೂ ಹಂದಿ ಮಾಂಸವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು ಎಂದು ಅವರು ಹೇಳಿದ್ದಾರೆ.
ಜಾಗೃತ ವಲಯದಲ್ಲಿರುವ ಹಂದಿ ಸಾಕಾಣಿಕೆದಾರರು ಮತ್ತು ಇತರರು ಸಧ್ಯಕ್ಕೆ ರೋಗ ಪೀಡಿತ ವಲಯಕ್ಕೆ ಭೇಟಿ ನೀಡಬಾರದು. ಅಪರಿಚಿತರಿಂದ ಹಂದಿ ಮರಿಗಳನ್ನು ಮತ್ತು ಮಾಂಸವನ್ನು ಖರೀದಿಸಬಾರದು. ತಮ್ಮ ಹಂದಿ ಸಾಕಾಣಿಕಾ ಕೇಂದ್ರಗಳನ್ನು ಬಿಸಿ ನೀರಿನಿಂದ ತೊಳೆದು, ಕ್ರಿಮಿ ನಾಶಕಗಳನ್ನು ಸಿಂಪಡಿಸುತ್ತಿರಬೇಕು. ಹಂದಿಗಳಿಗೆ ನೀಡಲಾಗುವ ಹೋಟೆಲ್ ತ್ಯಾಜ್ಯ ನೀಡದಿರುವುದು ಒಳಿತು. ಅನಿವಾರ್ಯ ಸಂದರ್ಭದಲ್ಲಿ ಚೆನ್ನಾಗಿ ಬೇಯಿಸಿ ನೀಡಬೇಕು ಎಂದು ಅವರು ಸೂಚಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post