ಬೆಂಗಳೂರು: ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಆರೋಪದಡಿ ಬಂಧಿಸಲ್ಪಟ್ಟಿರುವ ನಟಿ ರನ್ಯಾ ರಾವ್ ಅವರ ಮನೆಯಲ್ಲಿಯೂ ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಸೋಮವಾರ ರಾತ್ರಿ ರನ್ಯಾ ರಾವ್ ಅವರನ್ನು ವಶಕ್ಕೆ ಪಡೆದ ಬಳಿಕ ಅವರು ವಾಸವಿದ್ದ ನಗರದ ಲ್ಯಾವೆಲ್ಲೆ ರಸ್ತೆಯಲ್ಲಿರುವ ಫ್ಲ್ಯಾಟ್‌ನಲ್ಲಿ ಡಿಆರ್‌ಐ ಅಧಿಕಾರಿಗಳ ತಂಡ ಶೋಧ ನಡೆಸಿದ್ದು, ಈ ವೇಳೆ 2.06 ಕೋಟಿ ರೂ. ಮೌಲ್ಯದ ಚಿನ್ನ ಹಾಗೂ ನಗದು ಸೇರಿ 4.73 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚಿನ್ನ ಸೇರಿ ಒಟ್ಟು 17.29 ಕೋಟಿ ಮೌಲ್ಯದ ಆಸ್ತಿ ವಶಕ್ಕೆ: ಈ ಮೂಲಕ ರನ್ಯಾ ಅವರಿಂದ ಒಟ್ಟು 12.56 ಕೋಟಿ ಮೌಲ್ಯದ 14.2 ಕೆ.ಜಿ ವಿದೇಶಿ ಮೂಲದ ಚಿನ್ನ ಮತ್ತು 4.73 ಕೋಟಿ ಮೌಲ್ಯದ ಇತರ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ತಿಳಿಸಿದೆ. 1962ರ ಕಸ್ಟಮ್ಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಡಿಆರ್‌ಐ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಕರಣದಲ್ಲಿ ಚಿನ್ನ, ನಗದು ಸೇರಿದಂತೆ ಒಟ್ಟು 17.29 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡ ಅತಿದೊಡ್ಡ ಪ್ರಮಾಣದ ಚಿನ್ನದಲ್ಲಿ ಇದೂ ಒಂದಾಗಿದೆ ಎಂದು ಡಿಆರ್‌ಐ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ದುಬೈನಿಂದ ಬೆಂಗಳೂರಿಗೆ ಬಂದಿಳಿದಿದ್ದ ರನ್ಯಾ: ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಆರೋಪದಡಿ ನಟಿ ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಸೋಮವಾರ ರಾತ್ರಿ ಎಮಿರೇಟ್ಸ್ ಏರ್‌ಲೈನ್ಸ್ ಮೂಲಕ ದುಬೈನಿಂದ ಬೆಂಗಳೂರಿಗೆ ಬಂದಿಳಿದ ರನ್ಯಾ ರಾವ್ ಅವರನ್ನು 14.2 ಕೆ.ಜಿ ಚಿನ್ನದ ಸಮೇತ ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬಳಿಕ ವೈದ್ಯಕೀಯ ತಪಾಸಣೆಗೊಳಪಡಿಸಿ ಕೋರಮಂಗಲದಲ್ಲಿರುವ ನ್ಯಾಯಾಧೀಶರ ನಿವಾಸದ ಮುಂದೆ ರನ್ಯಾ ರಾವ್ ಅವರನ್ನು ಹಾಜರುಪಡಿಸಲಾಗಿತ್ತು. ಮಾರ್ಚ್ 18ರ ವರೆಗೂ ರನ್ಯಾ ರಾವ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದರು.
ಇತ್ತೀಚಿನ ದಿನಗಳಲ್ಲಿ ಭಾರತ ಹಾಗೂ ದುಬೈ ನಡುವೆ ನಿರಂತರವಾಗಿ ಪ್ರಯಾಣಿಸುತ್ತಿದ್ದ ರನ್ಯಾ ರಾವ್ ಕುರಿತು ಕಂದಾಯ ಗುಪ್ತಚರ ಇಲಾಖೆಯ ಅಧಿಕಾರಿಗಳು ನಿಗಾ ವಹಿಸಿದ್ದರು. ಕಳೆದ 15 ದಿನಗಳ ಅವಧಿಯಲ್ಲಿ 4 ಬಾರಿ ರನ್ಯಾ ರಾವ್ ದುಬೈಗೆ ತೆರಳಿ ಪಾಪಸ್ ಮರಳಿದ್ದರು. ಸೋಮವಾರ ರಾತ್ರಿ ರನ್ಯಾ ರಾವ್ ಬೆಂಗಳೂರಿಗೆ ಬಂದಿಳಿಯಲಿರುವ ಮಾಹಿತಿ ಪಡೆದಿದ್ದ ಕಂದಾಯ ಗುಪ್ತಚರ ಅಧಿಕಾರಿಗಳು ರನ್ಯಾ ಚಿನ್ನದ ಸಮೇತ ರನ್ಯಾ ರಾವ್ ಅವರನ್ನು ವಶಕ್ಕೆ ಪಡೆದಿದ್ದರು.
ಹೆಚ್ಚಿನ ಚಿನ್ನಾಭರಣಗಳನ್ನು ಧರಿಸಿದ್ದ ರನ್ಯಾ ರಾವ್, ಉಳಿದ ಚಿನ್ನವನ್ನು ಬಟ್ಟೆಯಲ್ಲಿ ಬಚ್ಚಿಟ್ಟಿದ್ದರು. ಏರ್‌ಪೋರ್ಟ್‌ನಲ್ಲಿ ತಾನು ಡಿಜಿಯವರ ಪುತ್ರಿ ಎಂದು ಹೇಳಿಕೊಂಡು ತೆರಳುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿತ್ತು.
Discover more from Coastal Times Kannada
Subscribe to get the latest posts sent to your email.
Discussion about this post