ಮಂಗಳೂರು: ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಪದಕ ಸ್ವೀಕರಿಸಿದ ಆರು ಮಂದಿ ಪೊಲೀಸರನ್ನು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಸೋಮವಾರ ಸನ್ಮಾನಿಸಿದರು.
ನಗರದ ಕಮಿಷನರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಚಾರ ವಿಭಾಗದ ಎಸಿಪಿ ಎಂ.ಎ.ನಟರಾಜ್, ಸಬ್ ಇನ್‌ಸ್ಪೆಕ್ಟರ್‌ಗಳಾದ ಪ್ರದೀಪ ಟಿ.ಆರ್., ವನಜಾಕ್ಷಿ ಕೆ., ಶೋಭಾ, ಎಎಸ್‌ಐ ಕುಶಾಲ ಮಣಿಯಾಣಿ, ಹೆಡ್ ಕಾನ್‌ಸ್ಟೆಬಲ್, ಇಸಾಕ್ ಕೆ. ಅವರನ್ನು ಪೊಲೀಸ್ ಕಮಿಷನರ್ ಸನ್ಮಾನಿಸಿದರು.
ಬಳಿಕ ಮಾತನಾಡಿದ ಎನ್. ಶಶಿಕುಮಾರ್, ಕಮಿಷನರೇಟ್ ವ್ಯಾಪ್ತಿಯಲ್ಲಿ ಆರು ಮಂದಿ ಪೊಲೀಸರು ಮುಖ್ಯಮಂತ್ರಿ ಪದಕ ಪಡೆದಿರುವುದು ಹೆಮ್ಮೆಯ ವಿಚಾರ ಎಂದರು.
ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಅವರು, ಅಧಿಕಾರಿ, ಸಿಬ್ಬಂದಿ ಕಾರ್ಯವನ್ನು ಶ್ಲಾಘಿಸಿ ₹1 ಲಕ್ಷ ನಗದು ಬಹುಮಾನ ಘೋಷಿಸಿದ್ದಾರೆ. ಸಾರ್ವಜನಿಕ ಶಾಂತಿ ಮತ್ತು ಕೋಮು ಸಾಮರಸ್ಯ ಗಂಭೀರ ಪ್ರಕರಣ ನಡೆಯದಂತೆ ಈ ಇಬ್ಬರು ಆರೋಪಿಗಳ ಮೇಲಿನ ಗೂಂಡಾ ಕಾಯ್ದೆ ಸಹಕಾರಿಯಾಗಲಿದೆ ಎಂದು ಶಶಿಕುಮಾರ್ ತಿಳಿಸಿದರು.
ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕಾವೂರು ಮತ್ತು ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ರೋಹಿದಾಸ್ ಅಲಿಯಾಸ್ ಆಕಾಶಭವನ ಶರಣ್ ಮತ್ತು ಮುಹಮ್ಮದ್ ನವಾಝ್ ಅಲಿಯಾಸ್ ಪಿಂಕಿ ನವಾಝ್, ಕುಖ್ಯಾತ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಪ್ರಕ್ರಿಯೆ ನಡೆಸಲಾಗಿತ್ತು. ನಗರದ ಇಬ್ಬರು ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿ ಪ್ರಕ್ರಿಯೆಯಲ್ಲಿ ಸಹಕರಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಅಭಿನಂದಿಸಲಾಯಿತು. ಒಂದು ವರ್ಷದ ಅವಧಿಯಲ್ಲಿ ಮಂಗಳೂರು ನಗರದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಹಕರಿಸಿದ ಅಧಿಕಾರಿಗಳನ್ನು ಕೂಡಾ ಅಭಿನಂದಿಸಲಾಯಿತು.