ಮಂಗಳೂರು, : ‘ನಿಹಾರಿಕಾ’ ಎಂಬ ಹುಡುಗಿಯ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ವ್ಯಕ್ತಿಯೊಬ್ಬರನ್ನು ಪರಿಚಯ ಮಾಡಿಕೊಂಡು, ಅವರ ಬ್ಯಾಂಕ್ ಖಾತೆಯಿಂದ ಒಟ್ಟು ರೂ.98.7 ಸಾವಿರ ವರ್ಗಾಯಿಸಿಕೊಂಡು ವಂಚಿಸಿದ ಬಗ್ಗೆ ನಗರದ ಸೆನ್ ಅಪರಾಧ ಠಾಣೆಯಲ್ಲಿ ದೂರು ದಾಖಲಾಗಿದೆ.
‘2023ರ ಫೆ. 26ರಂದು ನನ್ನ ಇನ್‌ಸ್ಟಾಗ್ರಾಂ ಖಾತೆಗೆ ಅಪರಿಚಿತ (nihari_kaaa) ಖಾತೆಯಿಂದ ಹಾಯ್ ಎಂಬ ಸಂದೇಶ ಬಂದಿತ್ತು. ನನ್ನ ಪರಿಚಯ ಇದೆಯಾ ಎಂದು ಕೇಳಿದ್ದೆ. ಅದಕ್ಕೆ ‘ನನ್ನ ಹೆಸರು ನಿಹಾರಿಕಾ. ದಿಯಾ ಸಿಸ್ಟಮ್‌ನಲ್ಲಿ ಉದ್ಯೋಗದಲ್ಲಿದ್ದೇನೆ. ದೇರೆಬೈಲ್ ಬ್ರಿಗೇಡ್ ಪಿನಾಕಲ್ ಅಪಾರ್ಟ್‌ಮೆಂಟ್ ಸಮುಚ್ಚಯದಲ್ಲಿ ವಾಸವಾಗಿದ್ದೇನೆ. ನೀವು ಕಾವೂರಿನಲ್ಲಿ ಕಪ್ಪು ಬಣ್ಣದ ಸ್ಕೂಟರ್‌ನಲ್ಲಿ ಹೋಗುತ್ತಿರುವುದನ್ನು ನೋಡಿದ್ದೆ’ ಎಂದು ಪ್ರತಿಕ್ರಿಯಿಸಿದ್ದರು. ನಂತರವೂ ಆಗಾಗ ಸಂದೇಶ ಕಳುಹಿಸುವ ಮೂಲಕ ನನ್ನ ಸಂಪರ್ಕದಲ್ಲಿದ್ದರು’ ಎಂದು ವಂಚನೆಗೊಳಗಾದ ವ್ಯಕ್ತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಕೇಕ್ ಖರೀದಿಸಲು ತಾಯಿಯ ಬ್ಯಾಂಕ್ ಖಾತೆಯಿಂದ ಹಣ ಪಾವತಿಸಲು ಪ್ರಯತ್ನಿಸಿ ವಿಫಲವಾದೆ. ನನ್ನ ತಂದೆಯ ಹೆಸರು ಸಶಾನ್ ಟಿ. ಶೆಟ್ಟಿ. ಅವರ ಬ್ಯಾಂಕ್ ಖಾತೆಗೆ ರೂ. 3,800 ವರ್ಗಾಯಿಸಬಹುದೇ’ ಎಂದು ನಿಹಾರಿಕಾ ಒಮ್ಮೆ ಕೋರಿದ್ದರು. ಆಕೆ ಕಳುಹಿಸಿದ ಕ್ಯೂಆರ್ ಕೋಡ್‌ಗೆ ಗೂಗಲ್ ಪೇ ಮೂಲಕ ಅಷ್ಟು ಮೊತ್ತವನ್ನು ಕಳುಹಿಸಿದ್ದೆ. ನಂತರ ಫೆ.27ರಂದು ಮತ್ತೆ ಸಂದೇಶ ಕಳುಹಿಸಿ, ‘ಸೋದರನಿಗೆ ಅಪಘಾತವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಆತನಿಗೆ ಎಂ.ಆರ್.ಐ ಸ್ಕ್ಯಾನ್ ಮಾಡಿಸಲು ರೂ.28 ಸಾವಿರ ಕಟ್ಟಿದ್ದೇನೆ. ಇನ್ನಷ್ಟು ಹಣದ ಅವಶ್ಯಕತೆ ಇದೆ’ ಎಂದು ತಿಳಿಸಿದ್ದರು. ಮತ್ತೆ ರೂ.5,800 ಅನ್ನು ಗೂಗಲ್ ಪೇ ಮೂಲಕ ಪಾವತಿಸಿದ್ದೆ. ಇದೇ ರೀತಿ ಫೆ 28ರಂದು ಮತ್ತೆ ರೂ.5 ಸಾವಿರ ಕಳುಹಿಸಿದ್ದೆ. ಮಾರ್ಚ್ 2ರಿಂದ14ರ ನಡುವೆ ಮತ್ತೆ ಹಂತ ಹಂತವಾಗಿ ಒಟ್ಟು ರೂ.84,100 ಕಳುಹಿಸಿದ್ದೆ. ಬಳಿಕ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪರಿಚಯಮಾಡಿಕೊಂಡ ವ್ಯಕ್ತಿಯ ನಡವಳಿಕೆ ಸಂಶಯ ಬಂತು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ಯಾರೋ ಅಪರಿಚಿತ ವ್ಯಕ್ತಿ ನನಗೆ ಮೋಸ ಮಾಡುವ ಉದ್ದೇಶದಿಂದ ಹುಡುಗಿಯ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ಸೃಷ್ಟಿಸಿ ಫೆ 26ರಿಂದ ಮಾ 14ರವರೆಗೆ ಹಂತ ಹಂತವಾಗಿ ಒಟ್ಟು ರೂ.98,700 ಮೊತ್ತವನ್ನು ಆನ್ ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಆತನ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ಆರೋಪಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Discover more from Coastal Times Kannada
Subscribe to get the latest posts sent to your email.
Discussion about this post