ಉಳ್ಳಾಲ: ಮಾಜಿ ಶಾಸಕ ದಿ.ಇದಿನಬ್ಬ ಪುತ್ರ ಬಿ.ಎಂ. ಬಾಷಾ ಅವರ ಉಳ್ಳಾಲ ಮಾಸ್ತಿಕಟ್ಟೆಯಲ್ಲಿರುವ ಮನೆಗೆ ಬುಧವಾರ ನಸುಕಿನ ಜಾವ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ದಳದ ತಂಡ ಅವರ ಪುತ್ರನನ್ನು ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆದುಕೊಂಡಿದೆ.
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಉಮ್ಮರ್ ಅಬ್ದುಲ್ ರೆಹಮಾನ್ (25) ಎಂಬಾತನನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ. ಎರಡು ವಾಹನಗಳಲ್ಲಿ ಬಂದಿದ್ದ ರಾಷ್ಟ್ರೀಯ ತನಿಖಾ ದಳದ ತಂಡ ಮಧ್ಯಾಹ್ನದವರೆಗೂ ವಿಚಾರಣೆ ನಡೆಸಿ, ಉಮ್ಮರ್‌ನನ್ನು ವಶಕ್ಕೆ ಪಡೆದು ಕೊಂಡಿದೆ. ಮಧ್ಯಾಹ್ನ ನಂತರವೂ ತನಿಖೆ ಮುಂದುವರಿಸಿದ ತಂಡ ಸಾಕ್ಷ್ಯ ಗಳ ಸಂಗ್ರಹಣೆ ನಡೆಸಿ, ಸಂಜೆ 7.30ರ ಸುಮಾರಿಗೆ ವಾಪಸಾಗಿದೆ. ತಂಡದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 24 ಅಧಿಕಾರಿಗಳಿದ್ದರು.
ಇದಿನಬ್ಬ ಪುತ್ರ ಬಿ.ಎಂ. ಬಾಷಾ ಮಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು. ಇವರ ಪುತ್ರರು ವಿದೇಶದಲ್ಲಿದ್ದಾರೆ. ಇವರ ಕುಟುಂಬದವರು ಐಸಿಸ್ ಸಂಬಂಧಿಸಿದ ಯೂಟ್ಯೂಬ್ ಚಾನೆಲ್ಗಳನ್ನು ಸಬ್ಸ್ಕ್ರೈಬ್ ಮಾಡಿ, ಮೃದುಧೋರಣೆ ಅನುಸರಿಸಿದ್ದರು ಎನ್ನಲಾಗಿದೆ. ಅಲ್ಲದೆ, ಐಸಿಸ್ ಸಂಪರ್ಕ ಮತ್ತು ಜಮ್ಮು ಕಾಶ್ಮೀರದ ಉಗ್ರ ಸಂಘಟನೆಯ ಯುವಕರ ಜತೆ ಮೊಬೈಲ್ ಸಂಪರ್ಕ ಇರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಎನ್ಐಎ ವಿಭಾಗದ ಡಿಐಜಿ ಶ್ರೇಣಿಯ ಅಧಿಕಾರಿ ಉಮಾ ಎಂಬವರ ನೇತೃತ್ವದಲ್ಲಿ ದಾಳಿ ನಡೆದಿದೆ.
ಮಹಮ್ಮದ್ ಅಮೀನ್ ನೇತೃತ್ವದಲ್ಲಿ ಕರ್ನಾಟಕ ಹಾಗೂ ಕೇರಳ ಮೂಲದ ಮುಖಂಡರನ್ನು ಟಾರ್ಗೆಟ್ ನಡೆಸಿ ಹತ್ಯೆ ನಡೆಸುವ ಸಂಚು ರೂಪಿಸಲಾಗಿತ್ತು. ಇದೇ ಮಾಹಿತಿ ಆಧಾರದಲ್ಲಿ ರಾಷ್ಟ್ರೀಯ ತನಿಖಾ ತಂಡ ದಾಳಿ ನಡೆಸಿದೆ.
ದಾಳಿ ವೇಳೆ ಲ್ಯಾಪ್ ಟಾಪ್, ಹಾರ್ಡ್‌ಡಿಸ್ಕ್, ಹಲವು ಸಿಮ್ ಕಾರ್ಡ್‍ಗಳನ್ನು ವಶಕ್ಕೆ ಪಡೆದಿತ್ತು. ಈ ವೇಳೆ ಮಹಮ್ಮದ್ ಅಮೀನ್ ತಂಡ ಕರ್ನಾಟಕ ಮತ್ತು ಕೇರಳದಲ್ಲಿ ಐಸಿಸ್ ಸಂಘಟನೆಗೆ ನೇಮಿಸಿದ್ದ ಹಲವು ಯುವಕರ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಇದರ ಆಧಾರದ ಮೇಲೆ ಉಳ್ಳಾಲದ ಮಾಜಿ ಶಾಸಕ ಇದಿನಬ್ಬ ಕುಟುಂಬದ ಸದಸ್ಯರೊಬ್ಬರು ಐಸಿಸ್ ಪರ ಒಲವು ಹೊಂದಿರುವ ಬಗ್ಗೆ ಮಾಹಿತಿ ಪಡೆದು ದಾಳಿ ನಡೆದಿದೆ. ಅಲ್ಲದೆ, ಐಎಸ್ ಪರವಾದ ಹಲವು ಯುಟ್ಯೂಬ್ ಚಾನೆಲ್ ಗಳು, ಇಸ್ಟ್ಯಾಗ್ರಾಂ ಮತ್ತು ಟೆಲಿಗ್ರಾಮ್ ಮೂಲಕ ಮಾಹಿತಿ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದ ಕೆಲವು ತಾಂತ್ರಿಕ ಸಾಕ್ಷ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.