ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ಶ್ರೀನಿವಾಸ್ ಕಾಲೇಜಿನಲ್ಲಿ ಮತ್ತೆ ರ್ಯಾಗಿಂಗ್ ಪ್ರಕರಣ ಬೆಳಕಿಗೆ ಬಂದಿದ್ದು, ಕೇವಲ ಕಪ್ಪು ಬಣ್ಣದ ಶೂ ಧರಿಸಿದ್ದ ವಿಚಾರಕ್ಕೆ ಇಬ್ಬರು ಪ್ರಥಮ ವರ್ಷದ ವಿದ್ಯಾರ್ಥಿಗಳ ಮೇಲೆ ಸೀನಿಯರ್ ವಿದ್ಯಾರ್ಥಿಗಳ ಗುಂಪು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಗಾಯಗೊಂಡ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದು, ಆರು ಮಂದಿ ಸೀನಿಯರ್ ವಿದ್ಯಾರ್ಥಿಗಳ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ : ನಗರದ ಗುಜ್ಜರಕೆರೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಆದರ್ಶ ಮತ್ತು ಜಾಸಿನ್ ಮೇಲೆ ದ್ವಿತೀಯ ವರ್ಷದ ಲಾಜೆಸ್ಟಿಕ್ ವಿಭಾಗದ ವಿದ್ಯಾರ್ಥಿಗಳ ಗುಂಪು ಹಲ್ಲೆ ನಡೆಸಿದೆ ಎನ್ನಲಾಗಿದೆ. ಹಲ್ಲೆಗೊಳಗಾದ ಇಬ್ಬರೂ ವಿದ್ಯಾರ್ಥಿಗಳು ಕೇರಳ ಮೂಲದವರಾಗಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಕಪ್ಪು ಶೂ ಹಾಕಿಕೊಂಡು ಬಂದಿದ್ದನ್ನು ನೆಪವನ್ನಾಗಿ ಮಾಡಿಕೊಂಡು ಸೀನಿಯರ್ ವಿದ್ಯಾರ್ಥಿಗಳು ಜೂನಿಯರ್ ವಿದ್ಯಾರ್ಥಿಗಳೊಂದಿಗೆ ವಾಗ್ವಾದ ನಡೆಸಿ, ಬಳಿಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಘಟನೆಯಿಂದ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪಾಂಡೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಆಸ್ಪತ್ರೆಗೆ ತೆರಳಿ ಗಾಯಗೊಂಡ ವಿದ್ಯಾರ್ಥಿಗಳ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ದ್ವಿತೀಯ ವರ್ಷದ ಲಾಜೆಸ್ಟಿಕ್ ವಿಭಾಗದ ಆರು ಮಂದಿ ವಿದ್ಯಾರ್ಥಿಗಳ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕಾಲೇಜುಗಳಲ್ಲಿ ರ್ಯಾಗಿಂಗ್ ಪ್ರಕರಣಗಳು ಮತ್ತೆ ತಲೆ ಎತ್ತುತ್ತಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಆತಂಕ ಮೂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







