ಬಂಟ್ವಾಳ: ಇನ್‌ಸ್ಟಾಗ್ರಾಂನಲ್ಲಿ ನಕಲಿ ಐಡಿ ಸೃಷ್ಟಿಸಿ ಅಪ್ರಾಪ್ತ ಬಾಲಕಿಯರಿಬ್ಬರೊಂದಿಗೆ ಮೋಸದಾಟ ನಡೆಸಿ ನಿರಂತರ ಲೈಂಗಿಕ ದೌರ್ಜನ್ಯ ಎಸಗಿ ಒಬ್ಬಾಕೆಯನ್ನು ಗರ್ಭಿಣಿಯನ್ನಾಗಿ ಮಾಡಿದ ಕಾಸರಗೋಡು ಮೂಲದ ಕಾಮುಕ ಯುವಕನನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.
ವಿಟ್ಲ ಠಾಣೆ ವ್ಯಾಪ್ತಿಯಲ್ಲಿ ಪರಸ್ಪರ ಸಂಬಂಧಿಕರಾಗಿರುವ 16 ಹಾಗೂ 17ರ ಹರೆಯದ ಇಬ್ಬರು ಮುಸ್ಲಿಂ ಯುವತಿಯರಿಗೆ ಹುಡುಗಿಯ ಹೆಸರಲ್ಲೇ ಇನ್ ಸ್ಟಾಗ್ರಾಂನಲ್ಲಿ ಈತ ಸಂಪರ್ಕಕ್ಕೆ ಬಂದಿದ್ದ. ಬಳಿಕ ತನ್ನ ಹೆಸರನ್ನು ಅಡ್ಡೂರಿನ ತೌಫಿಲ್ ಎಂದು ಪರಿಚಯ ಮಾಡಿಕೊಂಡಿದ್ದ. ಆದರೆ ಈತನ ನಿಜವಾದ ಹೆಸರು ಅಹಮದ್ ರಫೀಕ್ (23). ಕಾಸರಗೋಡು ಮೂಲದ ಆತ ಕೇರಳದ ಉದ್ಯಮಿಯೊಬ್ಬರ ಪುತ್ರ ಎಂದು ಮೂಲಗಳು ತಿಳಿಸಿವೆ. 16 ವರ್ಷದ ಯುವತಿಯೊಂದಿಗೆ ಆತ್ಮೀಯತೆ ಬೆಳೆಸಿ ರಾತ್ರಿ ವೇಳೆ ಮನೆಗೆ ಬಂದು ದೈಹಿಕ ಸಂಪರ್ಕ ಬೆಳೆಸಿದ್ದ. ಇದೇ ವೇಳೆ, ಅದೇ ಪರಿಸರದ ಮತ್ತೊಬ್ಬ 17ರ ಯುವತಿಯೊಂದಿಗೂ ಈತ ತಾನು ಕಾಸರಗೋಡಿನ ರಫೀಕ್ ಎಂದು ಪರಿಚಯ ಮಾಡಿಕೊಂಡಿದ್ದ. ಕಳೆದ ಐದಾರು ತಿಂಗಳಲ್ಲಿ ಇಬ್ಬರು ಅಪ್ರಾಪ್ತೆಯರೊಂದಿಗೂ ಈತ ಕಾಮದಾಟ ನಡೆಸಿದ್ದ. ಪರಿಣಾಮ ಒಬ್ಬಾಕೆ ಗರ್ಭಿಣಿಯಾಗಿದ್ದಾಳೆ. ಇದು ಆಕೆಯ ಮನೆಯವರಿಗೆ ತಿಳಿದು ವಿಟ್ಲ ಪೊಲೀಸರಿಗೆ ದೂರು ನೀಡಿದ್ದರು. ಇಬ್ಬರು ಯುವತಿಯರೂ ಸಾಮಾನ್ಯ ಬಡ ಕುಟುಂಬದವರಾಗಿದ್ದರು. ಆದರೆ ಆರೋಪಿ ಇಲ್ಲಿಯವರೆಗೂ ತನ್ನ ನಿಜ ಹೆಸರು, ಮೊಬೈಲ್ ಸಂಖ್ಯೆಯನ್ನು ಯುವತಿಯರಿಗೆ ನೀಡಿರಲಿಲ್ಲ. ಇನ್ ಸ್ಟಾಗ್ರಾಂನಲ್ಲಿಯೇ ಮೆಸೇಜ್, ಕರೆ ಮಾಡುತ್ತಿದ್ದ. ಆದ್ದರಿಂದ ಕಾಮುಕನ ಪತ್ತೆ ಪೊಲೀಸರಿಗೆ ಕಷ್ಟವಾಗಿತ್ತು. ಬಳಿಕ ಪೊಲೀಸರ ಸೂಚನೆಯಂತೆ, ಒಬ್ಬಾಕೆಯ ಮನೆಯವರ ಮೂಲಕವೇ ಟ್ರಾಪ್ ಮಾಡಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲವೆಂದು ಹೇಳಿ, ಬರಲು ತಿಳಿಸಿದ್ದು ಅದರಂತೆ ರಾತ್ರಿ ವೇಳೆ ಮನೆಗೆ ಬಂದಿದ್ದ ಯುವಕನನ್ನು ಪೊಲೀಸರೇ ಸೇರಿ ಅರೆಸ್ಟ್ ಮಾಡಿದ್ದಾರೆ. ಇದೀಗ ಪ್ರತ್ಯೇಕ ಪೊಕ್ಸೊ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಪ್ರಾಪ್ತ ಓರ್ವ ಯುವತಿ ಗರ್ಭಿಣಿಯೆಂಬ ಮಾಹಿತಿ ಕೇಳಿ ಬರುತ್ತಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯವರು ಪ್ರಕರಣದ ತನಿಖೆ ನಡೆಸಬೇಕಾಗಿದೆ.
Discover more from Coastal Times Kannada
Subscribe to get the latest posts sent to your email.
Discussion about this post