ಮಂಗಳೂರು, ನ.4: ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಎರಡು ದಿನಗಳ 25ನೇ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನ ಶನಿವಾರ ನ.4ರಂದು ಉದ್ಘಾಟನೆಗೊಂಡಿದ್ದು,
ಅಧ್ಯಕ್ಷತೆ ವಹಿಸಿದ್ದ ಕಾದಂಬರಿಗಾರ್ತಿ ಹಾಗೂ ಕೊಂಕಣಿ ಚಳವಳಿಯ ಮುಂದಾಳು ಹೇಮಾ ನಾಯ್ಕ ಮಾತನಾಡಿ, ದೇಶದಲ್ಲಿ 30 ವರ್ಷಗಳಿಂದ ಮಹಿಳಾ ಸ್ಥಾನಮಾನದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಕೊಂಕಣಿ ಮಹಿಳೆಯರಿಗೆ ಪ್ರಾಧಾನ್ಯ ನೀಡುತ್ತಾ ಬಂದಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದ್ದು, ರಾಜ್ಯಸಭೆಯಲ್ಲೂ ಮಹಿಳಾ ಸಾಹಿತ್ಯ ಪ್ರತಿಧ್ವನಿಸಿರುವುದು ಹೆಮ್ಮೆಯ ವಿಚಾರ. ಆದರೆ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಶೋಷಣೆಗೆ ತಡೆ ಬೀಳದಿರುವುದು ಖೇದಕರ ಸಂಗತಿ ಎಂದು ಹೇಳಿದರು. ರಾಷ್ಟ್ರ ನಿರ್ಮಾಣದಲ್ಲಿ ಭಾಷೆ ಏಕತೆಯ ಮಂತ್ರ ಸಾರಿದೆ. ಆದರೆ ಭಾಷೆ ಯನ್ನು ರಾಜಕೀಯ ಸ್ವಾರ್ಥಕ್ಕಾಗಿ ಬಳಸುವುದು ಸಮಂಜಸವಲ್ಲ ಎಂದರು.
ಕೊಂಕಣಿ ಭಾಷೆಯ ಮೇಲೆ ಇಲ್ಲಿನ ಜನ ಇಟ್ಟಿರುವ ಅಭಿಮಾನ ಮೆಚ್ಚುವಂತಹದ್ದು. ಹಲವು ಭಾಷಾ ಸಮ್ಮೇಳದಲ್ಲಿ ಭಾಗವಹಿಸಿದ್ದು, ಇಂತಹ ಅನುಭವ ಸಿಕ್ಕಿಲ್ಲ. ದೇಶದ ವಿವಿಧ ಭಾಷೆ, ಕಲೆ ಮತ್ತು ಸಂಸ್ಕೃತಿ ನಮ್ಮೆಲ್ಲರನ್ನು ಒಗ್ಗೂಡಿಸಿದೆ. ಸ್ವಾತಂತ್ರ್ಯಸಂಗ್ರಾಮದ ಸಂದರ್ಭದಿಂದಲೇ ಕೊಂಕಣಿ ದೇಶದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪ್ರಭಾವ ಬೀರಿದೆ ಎಂದು ಕವಿ, ವಿದ್ವಾಂಸ ಹಾಗೂ ವಿಮರ್ಶಕ ಉದಯನ್ ವಾಜಪೇಯಿ ಹೇಳಿದರು.
ಕೊಂಕಣಿ ಲೇಖಕರು, ಸಾಹಿತಿಗಳು ಮತ್ತು ಕಲಾವಿದರಿಗೆ ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದೊಂದಿಗೆ ವಿಷನ್ ಕೊಂಕಣಿ ಹೆಲ್ತ್ ಕಾರ್ಡ್ ಅನ್ನು ಶನಿವಾರ ಅಖಿಲ ಭಾರತ ಕೊಂಕಣಿ ಸಾಹಿತ್ಯ ಸಮ್ಮೇಳನದಲ್ಲಿ ಚಾಲನೆ ನೀಡಲಾಯಿತು. ನಗರದ ಶಕ್ತಿನಗರ ದ ವಿಶ್ವ ಕೊಂಕಣಿ ಕೇಂದ್ರದ ಬಸ್ತಿ ವಾಮನ್ ಶೆಣೈ ವೇದಿಕೆಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಮೈಕಲ್ ಡಿಸೋಜ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಕೊಂಕಣಿ ಸಾಹಿತಿ ಮತ್ತು ಕಲಾಕಾರರಿಗೆ ಸದಾ ನನ್ನ ಪ್ರೋತ್ಸಾಹ ಇದೆ. ಕೊಂಕಣಿ ಪುಸ್ತಕ ಗಳನ್ನು ಪ್ರಕಟಿಸಲು 40 ಲಕ್ಷ ರೂಪಾಯಿ ಮೊತ್ತ ದ ವಿಷನ್ ಕೊಂಕಣಿ ಪುಸ್ತಕ ಪ್ರಾಧಿಕಾರ ಸ್ಥಾಪಿಸಲಾಗಿದೆ. ಕೊಂಕಣಿ ಸಂಗೀತ ಮತ್ತು ಕೊಂಕಣಿ ಸಿನಿಮಾಕ್ಕಾಗಿ ಯೂ ವಿಶೇಷವಾದ ವ್ಯವಸ್ಥೆಯನ್ನು ಮಾಡಲಾಗಿದ್ದು ಅದು ಕೂಡ ವಿಷನ್ ಕೊಂಕಣಿ ಕಾರ್ಯಕ್ರಮದಲ್ಲಿ ಮುಂದುವರಿಯುತ್ತಿದೆ. ಪ್ರಸ್ತುತ ವರ್ಷದಿಂದ ವಿಷನ್ ಕೊಂಕಣಿ ಅಡಿ ಕೊಂಕಣಿ ಲೇಖಕರು, ಸಾಹಿತಿಗಳು ಮತ್ತು ಕಲಾ ವಿದರಿಗೆ ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದೊಂದಿಗೆ ವಿಷನ್ ಕೊಂಕಣಿ ಹೆಲ್ತ್ ಕಾರ್ಡ್ ಅನ್ನು ನಾವು ನೀಡುತ್ತಿದ್ದೇವೆ. ಕೊಂಕಣಿ ಸಾಹಿತಿ ಮತ್ತು ಕಲಾವಿದರು ಶೇ. 25ರವರೆಗೆ ಚಿಕಿತ್ಸೆಯಲ್ಲಿ ರಿಯಾಯಿತಿಯನ್ನು ಈ ಆಸ್ಪತ್ರೆ ಯಿಂದ ಪಡೆಯಬಹುದು. ಇದು ವಿಷನ್ ಕೊಂಕಣಿ ಹೆಲ್ತ್ ಕಾರ್ಡ್ ಸ್ಕೀಮ್ ಎಂದರು. ಫ್ಲೇವಿಯ ಡಿಸೋಜ ಉಪಸ್ಥಿತರಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post