ಮಂಗಳೂರು: ಒರಿಸ್ಸಾದಿಂದ ಮಂಗಳೂರು ಹಾಗೂ ಕೇರಳಕ್ಕೆ ಬೃಹತ್ ಪ್ರಮಾಣದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಕೇರಳದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 120 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಕೇರಳದ ವಯನಾಡು ಜಿಲ್ಲೆಯ ಅನೂಪ್ ಎಂ.ಎಸ್(28) ಮತ್ತು ಕಣ್ಣೂರು ಜಿಲ್ಲೆಯ ಲತೀಫ್ ಕೆ.ವಿ (36), ಎಂದು ಗುರುತಿಸಲಾಗಿದೆ. ಗಾಂಜಾ ಸಾಗಾಟದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಇನ್‌ಸ್ಪೆಕ್ಟರ್ ಶ್ಯಾಮ್‌ಸುಂದರ್ ಹೆಚ್‌ಎಂ ನೇತೃತ್ವದ ಸಿಸಿಬಿ ಪೊಲೀಸರು ತಲಪಾಡಿ ಗ್ರಾಮದ ಪಿಲಿಕೂರು ಎಂಬಲ್ಲಿ ಮಂಗಳವಾರ ಕಾರ್ಯಾಚರಣೆ ನಡೆಸಿದರು.
ಇನ್ನು ಕರ್ನಾಟಕ, ಕೇರಳದ ಸಾರ್ವಜನಿಕರಿಗೆ ಮಾದಕ ಗಾಂಜಾ ಮಾರಾಟ ಮಾಡಲು ಹುನ್ನಾರ ಮಾಡಲಾಗಿತ್ತು. ಇದೀಗ ಬರೊಬ್ಬರಿ 28 ಲಕ್ಷ ರೂ. ಮೌಲ್ಯದ 120 ಕೆಜಿ ಗಾಂಜಾ, ಸಾಗಾಟದ ವಾಹನ ಹಾಗೂ ಮೊಬೈಲ್ ಫೋನ್ ಸೇರಿದಂತೆ ಒಟ್ಟು 35 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ. ಇದನ್ನು ಒರಿಸ್ಸಾದಿಂದ ಅಂಧ್ರಪ್ರದೇಶ, ಬೆಂಗಳೂರು ಮೂಲಕ ಸಾಗಾಟ ಮಾಡಲಾಗುತ್ತಿತ್ತು. ಈ ಗಾಂಜಾ ಮಾರಾಟ ಸಾಗಾಟ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ಈ ಬಗ್ಗೆ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಪಡೆಯಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸ್ಸೈಗಳಾದ ರಾಜೇಂದ್ರ ಬಿ, ನರೇಂದ್ರ, ಸುದೀಪ್, ಶರಣಪ್ಪ ಭಂಡಾರಿ, ಎಎಸ್ಸೈಗಳಾದ ಮೋಹನ್ ಕೆ.ವಿ, ಶೀನಪ್ಪ ಮತ್ತಿತರರು ಪಾಲ್ಗೊಂಡಿದ್ದರು.
Discover more from Coastal Times Kannada
Subscribe to get the latest posts sent to your email.
Discussion about this post