ಮಂಗಳೂರು, ಫೆ.6: 1994ರಲ್ಲಿ ಒಂದೇ ಕುಟುಂಬದ ನಾಲ್ವರನ್ನು ಕೊಲೆಗೈದು ಜೀವಾವಧಿ ಶಿಕ್ಷೆಗೊಳಗಾಗಿದ್ದ ವಾಮಂಜೂರು ಪ್ರವೀಣ ಬೆಳಗಾವಿಯ ಹಿಂಡಲಗಾ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಹಾಗೆಂದು, ತನ್ನ ಊರಿಗೆ ವಾಪಸಾಗಿಲ್ಲ. ಬದಲಿಗೆ, ಬೆಳಗಾವಿ ಜೈಲಿನ ಎದುರಲ್ಲೇ ತನ್ನ ಹಳೆ ವೃತ್ತಿಯನ್ನು ನೆಚ್ಚಿಕೊಂಡಿದ್ದು, ಟೈಲರಿಂಗ್ ಶಾಪ್ ಆರಂಭಿಸಿದ್ದಾನೆ.
ಒಂದೆಡೆ ತನ್ನ ಕುಟುಂಬಸ್ಥರಿಂದಲೇ ನಿರಾಕರಣೆ, ತಮ್ಮ ಮೇಲೆ ಸೇಡು ತೀರಿಸುತ್ತಾನೆಂಬ ಭಯದಲ್ಲಿ ಕುಟುಂಬಸ್ಥರು ಪ್ರವೀಣನನ್ನು ಜೈಲಿನಿಂದ ಬಿಡುಗಡೆ ಮಾಡಬಾರದೆಂದು ಬೇಡಿಕೆ ಇರಿಸಿದ್ದರು. ಆದರೆ ರಾಷ್ಟ್ರಪತಿಯವರಿಂದ ಕ್ಷಮಾದಾನ ದೊರೆತ ಬಳಿಕ ಜೈಲಿನಲ್ಲಿ ಇಟ್ಟುಕೊಳ್ಳುವಂತಿಲ್ಲ ಎಂಬ ತಾಂತ್ರಿಕ ಕಾರಣದಿಂದ ಬೆಳಗಾವಿ ಹಿಂಡಲಗಾ ಜೈಲಿನಿಂದ ಬಿಡುಗಡೆ ಮಾಡಿದ್ದಾರೆ. ಆದರೆ ತನ್ನ ಮನೆಯವರು, ಹತ್ತಿರದ ಸಂಬಂಧಿಕರು ವಿರೋಧ ಮಾಡಿದ್ದರಿಂದ 60 ವರ್ಷದ ಪ್ರವೀಣ ಊರಿಗೆ ಮರಳಲು ಮುಂದಾಗಿಲ್ಲ. ಬದಲಿಗೆ, ತನ್ನದೇ ವೃತ್ತಿಯನ್ನು ಜೈಲಿನ ಮುಂಭಾಗದಲ್ಲೇ ಮುನ್ನಡೆಸಲು ಮುಂದಾಗಿದ್ದಾನೆ.
ಪ್ರವೀಣ್‌ನನ್ನು ಕಳೆದ ಮೇ ತಿಂಗಳಿನಲ್ಲಿ ಸನ್ನಡತೆಯ ಕಾರಣ ನೀಡಿ ಬಿಡುಗಡೆ ಮಾಡಿರುವ ಮಾಹಿತಿ ಬಂದಿತ್ತು. ಬಳಿಕ ನ.7ರಂದು ರಾತ್ರಿ ಆತ ತಮ್ಮನಿಗೆ ಕರೆ ಮಾಡಿ ಜೀವಬೆದರಿಕೆ ಹಾಕಿದ್ದ. ಹಾಗಾಗಿ ನಾವು ಜೀವಭಯದಿಂದ ಇದ್ದೇವೆ. ಪೊಲೀಸರು ಆತನ ಚಲನವಲನಗಳನ್ನು ನಿತ್ಯವೂ ಗಮನಿಸಬೇಕು. ದ.ಕ ಜಿಲ್ಲೆಗೆ ಬರದಂತೆ ಗಡೀಪಾರು ಮಾಡಬೇಕು ಎಂದು ಕುಟುಂಬಸ್ಥರು ಮಂಗ ಳೂರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಇನ್ನು ಪ್ರವೀಣ ಬಿಡುಗಡೆಯಾಗಲಿದ್ದಾನೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ 2022ರಲ್ಲಿ ಪೊಲೀಸ್ ಆಯುಕ್ತರು, ಗೃಹಸಚಿವರು, ರಾಜ್ಯಪಾಲರಿಗೆ ಮನವಿ ಮಾಡಿ ಬಿಡುಗಡೆ ಮಾಡದಂತೆ ಕೇಳಿಕೊಂಡಿದ್ದೆವು. ಆತನ ಪತ್ನಿಯೂ ಬಿಡುಗಡೆ ಮಾಡದಂತೆ ಮನವಿ ಮಾಡಿದ್ದಳು. ಆದರೆ ಪ್ರಯೋಜನ ವಾಗಲಿಲ್ಲ. ಆ ಬಳಿಕ ಬಿಡುಗಡೆಯ ಸುದ್ದಿ ತಿಳಿದ ಕೂಡಲೇ ಮತ್ತೂಮ್ಮೆ ರಕ್ಷಣೆಗಾಗಿ ಮನವಿ ಮಾಡಿದ್ದೆವು ಎಂದು ಹೇಳಿದರು.
ಪ್ರವೀಣ್ ತನ್ನ ತಮ್ಮನಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದಾಗಲೂ ಪೊಲೀಸರಿಗೆ ತಿಳಿಸಿದ್ದೇವೆ. ಆದರೆ ಪೊಲೀಸರಿಂದ ಸ್ಪಂದನೆ ಸಿಕ್ಕಿಲ್ಲ. ಕುಟುಂಬಸ್ಥರ ಮನೆಗೆ ಪೊಲೀಸರು ಇದುವರೆಗೂ ಭೇಟಿ ನೀಡಿಲ್ಲ. ತನ್ನ ಸಂಬಂಧಿಕರನ್ನೇ ಕೊಲೆ ಮಾಡಿದ್ದ ಆತ ಯಾವುದೇ ಕೃತ್ಯ ಮಾಡಲು ಹಿಂಜರಿಯುವವನಲ್ಲ. ದ್ವೇಷ ಸಾಧಿಸುವ ಆತಂಕವೂ ಇದೆ. ಕುಟುಂಬದಲ್ಲಿ ಹಲವರು ಹಿರಿಯ ನಾಗರಿಕರಿದ್ದಾರೆ. ಹಾಗಾಗಿ ಪೊಲೀಸರು ನಮಗೆ ರಕ್ಷಣೆ ನೀಡ ಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿರುವ ಪ್ರವೀಣ್ ಕುಮಾರ್, ತನ್ನ ಕುಟುಂಬಸ್ಥರ ನಿರಾಕರಣೆಯಿಂದಾಗಿ ಬೆಳಗಾವಿ ಜೈಲಿನ ಉಳಿದುಕೊಂಡಿದ್ದ. ಜೈಲಿನಲ್ಲಿದ್ದಾಗ ಸಿಬಂದಿಯ ಬಟ್ಟೆ ಹೊಲಿದು ಕೊಡುತ್ತಿದ್ದ ಪ್ರವೀಣನಿಗೆ ಜೈಲಿನಲ್ಲಿ ಕೆಲಸ ಮಾಡಿದ್ದಕ್ಕಾಗಿ ಬಿಡುಗಡೆ ಸಂದರ್ಭದಲ್ಲಿ ಆರು ಲಕ್ಷ ರೂಪಾಯಿ ದುಡಿಮೆಯ ಹಣ ಸಿಕ್ಕಿತ್ತು. ಅದೇ ಹಣದಲ್ಲೀಗ ಜೈಲು ಎದುರಲ್ಲೇ ಟೈಲರಿಂಗ್ ಶಾಪ್ ಆರಂಭಿಸಿದ್ದಾನೆ. ಇದಲ್ಲದೆ, ಜೈಲಿನಲ್ಲಿದ್ದಾಗ ಸಿಬಂದಿಯ ಒಡನಾಟವನ್ನೂ ಗಳಿಸಿದ್ದ. ಈಗ ಜೈಲಿನ ಪಕ್ಕದಲ್ಲೇ ಟೈಲರಿಂಗ್ ಶಾಪ್ ಹಾಕಿದ್ದರಿಂದ ಸಿಬಂದಿಯ ಹೊಲಿಗೆಯೂ ಸಿಕ್ಕಿದ್ದು, ನಾಲ್ವರನ್ನು ಕೆಲಸಕ್ಕಿಟ್ಟು ಸ್ವಂತ ವಹಿವಾಟು ಆರಂಭಿಸಿದ್ದಾನೆ. ದಿನಕ್ಕೆ ಮೂರು ಸಾವಿರದಷ್ಟು ಕಮಾಯಿ ಆಗುತ್ತಿದ್ದು, ತಿಂಗಳಿಗೆ 90 ಸಾವಿರದಷ್ಟು ಆದಾಯ ಗಳಿಸುತ್ತಿದ್ದೇನೆ ಎಂದು ತಿಳಿಸಿದ್ದಾನೆ.
Discover more from Coastal Times Kannada
Subscribe to get the latest posts sent to your email.
Discussion about this post