ಮಂಗಳುರು: ಸುರತ್ಕಲ್ ಟೋಲ್ ಗೇಟ್ ವಿರುದ್ಧ ಏಳು ವರ್ಷ ಹೋರಾಟ ನಡೆಸಿ ತೆರವುಗೊಳಿಸುವಲ್ಲಿ ಶ್ರಮಿಸಿದ್ದ “ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್’ನ 101 ಸದಸ್ಯರಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ.
2022ರ ಅಕ್ಟೋಬರ್ 18ರಂದು ಪೊಲೀಸರ ಸರ್ಪಗಾವಲು ಭೇದಿಸಿ ಸಾವಿರಾರು ಪ್ರತಿಭಟನಾಕಾರರು ಟೋಲ್ ಗೇಟ್ ನುಗ್ಗಿದ್ದರು. ಟೋಲ್ ಸಂಗ್ರಹಕ್ಕಾಗಿ ಅಡ್ಡ ಇರಿಸಿದ್ದ ಕಂಬಗಳನ್ನು, ಟೋಲ್ ಬೂತ್ ಗಳನ್ನು ಒಡೆದು ಹಾಕಿದ್ದಲ್ಲದೆ, ಅದರ ಮೇಲೇರಿ ಆಕ್ರೋಶ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಮುಖಂಡ ಮಿಥುನ್ ರೈ ಪೊಲೀಸರನ್ನು ಲೆಕ್ಕಿಸದೆ ಸ್ವತಃ ಟೋಲ್ ಬೂತ್ ಮೇಲೇರಿ ಕಪ್ಪು ಬಾವುಟ ಬೀಸಿದ್ದರು. ಮುನೀರ್ ಕಾಟಿಪಳ್ಳ, ಎಂಜಿ ಹೆಗ್ಡೆ, ಪ್ರತಿಭಾ ಕುಳಾಯಿ ಹೀಗೆ ಹತ್ತಾರು ಮುಖಂಡರ ನೇತೃತ್ವದಲ್ಲಿ ನೂರಾರು ಜನರು ಟೋಲ್ ಗೇಟ್ ವಿರುದ್ಧ ಬೀದಿಗಿಳಿದಿದ್ದರು.
ಅಂದಿನ ಪೊಲೀಸ್ ಕಮಿಷನರ್ ಶಶಿಕುಮಾರ್, 144 ಸೆಕ್ಷನ್ ಜಾರಿಗೊಳಿಸಿದ್ದರೂ ಅದನ್ನು ಲೆಕ್ಕಿಸದೆ ರಸ್ತೆ ತಡೆ ಮಾಡಿದ್ದರು. ಆನಂತರ, ಹೆಚ್ಚುವರಿ ಪೊಲೀಸರು ಬಂದು ನೂರಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಲ್ಲದೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ ವಿವಿಧ ಆರೋಪಗಳನ್ನೊಡ್ಡಿ ಸುರತ್ಕಲ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು. ಆನಂತರ, ಎರಡು ವಾರ ಕಾಲ ಸುರತ್ಕಲ್ ಟೋಲ್ ಗೇಟ್ ಬಳಿಯಲ್ಲೇ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷ ಮತ್ತು ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಧರಣಿಯೂ ನಡೆದಿತ್ತು. ರಸ್ತೆ ತಡೆ ಘಟನೆ ಸಂಬಂಧಿಸಿ ಸುರತ್ಕಲ್ ಪೊಲೀಸರು 101 ಮಂದಿಯ ವಿರುದ್ಧ ಚಾರ್ಜ್ ಶೀಟ್ ಹಾಕಿದ್ದರು.
ಹೋರಾಟಗಾರರ ಮೇಲೆ ಹಿಂದಿನ ಬಿಜೆಪಿ ಸರಕಾರ ಮೊಕದ್ದಮೆ ಹೂಡಿತ್ತು. ನ್ಯಾಯಾಲಯದಿಂದ ಸಮನ್ಸ್ ಜಾರಿಯಾದ ಹಿನ್ನೆಲೆಯಲ್ಲಿ ಶನಿವಾರ ಹೋರಾಟಗಾರರು ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದರು. ಮಾಜಿ ಕಾರ್ಪೊರೇಟರ್ ಪ್ರಜ್ವಲ್ ಕುಳಾಯಿ ತಮ್ಮ ಜಮೀನಿನ ದಾಖಲೆಯ ಮೂಲಕ ಜಾಮೀನು ಭದ್ರತೆ ಒದಗಿಸಿದರು. ಹಿರಿಯ ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ ನೇತೃತ್ವದಲ್ಲಿ ಚರಣ್ ಶೆಟ್ಟಿ ಪಂಜಿಮೊಗರು, ಅಶ್ವಿನಿ ಹೆಗ್ಡೆ, ನಿತಿನ್ ಕುತ್ತಾರ್, ಅನ್ನು ಮಲಿಕ್, ಮನೋಜ್ ವಾಮಂಜೂರು, ಹಸೈನಾರ್ ಗುರುಪುರ, ಶೆರ್ವಿನ್ ಸೊಲೊಮಾನ್ ಮೊದಲಾದ ಹೋರಾಟಗಾರರ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರು, ವಿವಿಧ ಸಮಾನ ಮನಸ್ಕ ಪಕ್ಷದವರು ಹೋರಾಟದಲ್ಲಿ ಭಾಗವಹಿಸಿದ್ದು, ಎಲ್ಲರ ಮೇಲೆ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಹಿಂಪಡೆಯುವಂತೆ ಈಗಾಗಲೇ ರಾಜ್ಯ ಸರಕಾರಕ್ಕೆ ಮನವಿ ಮಾಡಲಾಗಿದೆ. ಉಸ್ತುವಾರಿ ಸಚಿವ ಬಳಿಯೂ ಈ ವಿಚಾರದ ಕುರಿತು ಚರ್ಚಿಸಿದ್ದೇವೆ. ಪ್ರಕರಣದಲ್ಲಿ ಜಯ ಸಿಗುವ ವಿಶ್ವಾಸವಿದೆ ಎಂದರು.
Discover more from Coastal Times Kannada
Subscribe to get the latest posts sent to your email.
Discussion about this post