ಬೆಂಗಳೂರು: ವರ್ಲ್ಡ್ ಅಥ್ಲೆಟಿಕ್ಸ್‌ನಿಂದ ಅನುಮೋದಿತ ಚೊಚ್ಚಲ ಆವೃತ್ತಿಯ ಎನ್‌ಸಿ ಕ್ಲಾಸಿಕ್ ಪಂದ್ಯಾವಳಿಯಲ್ಲಿ ಭಾರತೀಯ ಜಾವೆಲಿನ್ ತಾರೆ ನೀರಜ್ ಚೋಪ್ರಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 86.18 ಮೀಟರ್ ದೂರ ಎಸೆಯುವ ಮೂಲಕ ನೀರಜ್ ಚೋಪ್ರಾ ಅಗ್ರಸ್ಥಾನ ಗಳಿಸಿದರು.
ಅಲ್ಲದೇ, ತಮ್ಮ ಹೆಸರಿನಲ್ಲೇ ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ ಸ್ಪರ್ಧೆಯನ್ನು ಆಯೋಜಿಸಿ, ಅದರಲ್ಲಿಯೇ ಗೆದ್ದ ಮೊದಲ ಭಾರತೀಯ ಕ್ರೀಡಾಪಟು ಎಂಬ ಹಿರಿಮೆಗೂ ಪಾತ್ರರಾದರು. 2015ರ ವಿಶ್ವ ಚಾಂಪಿಯನ್ ಕೀನ್ಯಾದ ಜೂಲಿಯಸ್ ಯೆಗೊ 84.51 ಮೀಟರ್ ಅತ್ಯುತ್ತಮ ಎಸೆತದೊಂದಿಗೆ ದ್ವಿತೀಯ ಸ್ಥಾನ ಪಡೆದರೆ, 84.34 ಮೀಟರ್ ದೂರವನ್ನು ದಾಖಲಿಸಿದ ಶ್ರೀಲಂಕಾದ ರುಮೇಶ್ ಪತಿರಾಜ್ ತೃತೀಯ ಸ್ಥಾನ ಗಿಟ್ಟಿಸಿಕೊಂಡರು.
ಈ ವರ್ಷದ ಆರಂಭದಲ್ಲಿ ದೋಹಾ ಡೈಮಂಡ್ ಲೀಗ್‌ನಲ್ಲಿ 90 ಮೀಟರ್ ಗುರಿಯನ್ನು ತಲುಪಿದ್ದ ನೀರಜ್ ಚೋಪ್ರಾ ಅವರು ತವರು ನೆಲದಲ್ಲಿ ಆರಂಭದಿಂದಲೂ ಸಹ ಗೆಲುವಿನ ಫೇವರಿಟ್ ಎನಿಸಿದ್ದರು. ಮೊದಲ ಪ್ರಯತ್ನದಲ್ಲಿ ನೀರಜ್ ಫೌಲ್ ಮಾಡಿದರೆ, ಯೆಗೊ 79.97 ಮೀಟರ್ ಎಸೆತದೊಂದಿಗೆ ಆರಂಭಿಕ ಮುನ್ನಡೆ ಸಾಧಿಸಿದರು.
ಆದರೆ ಎರಡನೇ ಪ್ರಯತ್ನದಲ್ಲಿ 82.99 ಮೀಟರ್ ಎಸೆತದೊಂದಿಗೆ ನೀರಜ್ ಮುನ್ನಡೆ ಗಳಿಸಿದರು. ಆದಾಗ್ಯೂ ಸಹ ರುಮೇಶ್ ಪತಿರಾಜ್ ತನ್ನ ಮೂರನೇ ಪ್ರಯತ್ನದಲ್ಲಿ 84.34 ಮೀಟರ್ ದೂರ ಎಸೆಯುವ ಮೂಲಕ ನೀರಜ್‌ಗೆ ಟಕ್ಕರ್ ನೀಡಿದರು.
ಆದರೆ ನಂತರದ ಪ್ರಯತ್ನದಲ್ಲಿ 86.18 ಮೀಟರ್ ದೂರ ಸಾಧಿಸುವ ಮೂಲಕ ನೀರಜ್ ಕೊನೆಯವರೆಗೂ ಅಜೇಯರಾಗುಳಿದರು.ಚೋಪ್ರಾ ಹೊರತುಪಡಿಸಿ, ಭಾರತದ ಸಚಿನ್ ಯಾದವ್ (82.33 ಮೀ) ಮತ್ತು ಯಶ್ವೀರ್ ಸಿಂಗ್ (79.65 ಮೀ) ಕೂಡ ಕೊನೆಯ ಎಂಟನೇ ಹಂತಕ್ಕೆ ತಲುಪಿದರು. ನಾಲ್ಕನೇ ಪ್ರಯತ್ನದಲ್ಲಿ ಯೆಗೊ ತನ್ನ ಋತುವಿನ ಅತ್ಯುತ್ತಮ ಎಸೆತದೊಂದಿಗೆ ಎರಡನೇ ಸ್ಥಾನಕ್ಕೆ ಜಿಗಿಯುವವರೆಗೂ ಯಾದವ್ ಪದಕ ಸ್ಪರ್ಧೆಯಲ್ಲಿದ್ದರು.
ಮತ್ತೊಂದೆಡೆ, 2016ರ ಒಲಿಂಪಿಕ್ಸ್ ಚಾಂಪಿಯನ್ ಜರ್ಮನಿಯ ಥಾಮಸ್ ರೋಹ್ಲರ್ ಮೊದಲ ಮೂರು ಥ್ರೋಗಳನ್ನು ಮೀರಿ ಹೋಗಲು ವಿಫಲವಾದರು. ಮೊದಲ ಪ್ರಯತ್ನದಲ್ಲಿ ಕೇವಲ 75.85 ಮೀಟರ್ ದೂರವನ್ನು ದಾಟಲು ಸಾಧ್ಯವಾದ ತೋಹ್ಲರ್, ನಂತರದ ಸತತ ಎರಡು ಪ್ರಯತ್ನದಲ್ಲಿ ಫೌಲ್ ಮಾಡಿದರು.
ಪ್ರಶಸ್ತಿ ಗೆದ್ದ ನಂತರ ಮಾತನಾಡಿದ ಚೋಪ್ರಾ, “ನಾನು ಎರಡು ಈವೆಂಟ್‌ಗಳಲ್ಲಿ ಭಾಗವಹಿಸಿದ ನಂತರ ಇಲ್ಲಿಗೆ ಬಂದಿದ್ದೆ. ತವರಿನ ಅಭಿಮಾನಿಗಳು ನನ್ನ ಗೆಲುವನ್ನು ನಿರೀಕ್ಷಿಸಿದ್ದರು ಎಂದು ನನಗೆ ತಿಳಿದಿದ್ದರಿಂದ ಇದು ನನಗೆ ಮಾನಸಿಕವಾಗಿ ಸಾಕಷ್ಟು ಕಠಿಣವಾಗಿತ್ತು” ಎಂದರು. ಪಂದ್ಯಾವಳಿಯನ್ನು ಅದ್ಧೂರಿಯಾಗಿ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ನೀರಜ್ ಚೋಪ್ರಾ ಧನ್ಯವಾದ ಅರ್ಪಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post