ಕೊಚ್ಚಿ, ನ 06: ಒಂದು ವಾರದ ಹಿಂದೆ ಕೇರಳದ ಜೆಹೋವಾ ವಿಟ್ನೆಸ್ ಕ್ರೈಸ್ತ ಸಮಾವೇಶ ಕೂಟದಲ್ಲಿ ಸಂಭವಿಸಿದ ಸ್ಫೋಟಗಳಲ್ಲಿ ಗಂಭೀರ ಗಾಯಗೊಂಡಿದ್ದ 61 ವರ್ಷದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು ಇದರೊಂದಿಗೆ ಮೃತರ ಸಂಖ್ಯೆ ನಾಲ್ಕಕ್ಕೆ ಏರಿದೆ.
ಸಂತ್ರಸ್ತೆಯನ್ನು ಕಲಮಸ್ಸೆರಿಯ ಮೋಲಿ ಜಾಯ್ ಎಂದು ಗುರುತಿಸಲಾಗಿದ್ದು, ಸೋಮವಾರ ಮುಂಜಾನೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ. ಅಕ್ಟೋಬರ್ 29 ರಂದು ಧಾರ್ಮಿಕ ಸಭೆಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮಹಿಳೆ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆ ಸೋಮವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಎರ್ನಾಕುಲಂ ಜಿಲ್ಲೆಯ ಮಲಯತ್ತೂರ್‌ನ ಲಿಬಿನಾ ಎಂಬ 12 ವರ್ಷದ ಬಾಲಕಿ ಕೂಡ ಅಕ್ಟೋಬರ್ 30 ರಂದು ಕಲಮಸ್ಸೆರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಅಷ್ಟು ಮಾತ್ರವಲ್ಲದೆ ಘಟನೆ ನಡೆದ ದಿನವೇ ಇಬ್ಬರು ಮಹಿಳೆಯರು ಮೃತಪಟ್ಟಿದ್ದರು ಇದರೊಂದಿಗೆ ಸ್ಪೋಟದಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
4 ಮಂದಿಯ ಸಾವಿಗೆ ಕಾರಣವಾದ ಕೊಚ್ಚಿಯ ಕಳಮಶ್ಶೇರಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಡೊಮಿನಿಕ್ ಮಾರ್ಟಿನ್‌ನನ್ನು ನವೆಂಬರ್ 15ರವರೆಗೆ 10 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ. ಇಂದು ಬೆಳಿಗ್ಗೆ ಡೊಮಿನಿಕ್‌ಗೆ ವೈದ್ಯಕೀಯ ತಪಾಸಣೆ ಮಾಡಿಸಿದ ಕೊಚ್ಚಿ ಪೊಲೀಸರು, ಬಳಿಕ ಎರ್ನಾಕುಳಂ ಪ್ರಿನ್ಸಿಪಾಲ್ ಸೆಷನ್ಸ್ ಕೋರ್ಟ್‌ಗೆ ಹಾಜರುಪಡಿಸಿದರು. ಪೊಲೀಸರು ಯಾವುದೇ ರೀತಿಯ ಹಿಂಸೆ ನೀಡಿಲ್ಲ ಎಂದು ನ್ಯಾಯಾಧೀಶರ ಮುಂದೆ ನುಡಿದ ಡೊಮಿನಿಕ್, ತಾನು ಆರೋಗ್ಯವಾಗಿದ್ದು, ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದ್ದಾನೆ.
ಸ್ಫೋಟದ ಸಾಮಾಗ್ರಿಯ ಮೂಲ, ಹಣಕಾಸು ಹಾಗೂ ತಾಂತ್ರಿಕ ಮೂಲ, ಆತನ ಅಂತರರಾಷ್ಟ್ರೀಯ ಸಂಪರ್ಕಗಳು ಮತ್ತು 10 ಸ್ಥಳಗಳಲ್ಲಿ ಸಾಕ್ಷ್ಯ ಸಂಗ್ರಹಿಸಬೇಕಾಗಿರುವುದರಿಂದ 10 ದಿನಗಳ ಕಾಲ ಕಸ್ಟಡಿಗೆ ಬೇಕು ಎಂದು ಡಿಸಿಪಿ ಶಶಿಧರನ್ ಕೋರ್ಟ್‌ಗೆ ತಿಳಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post