ಉಡುಪಿ: ಮಲ್ಪೆ ಬೀಚ್‌ನಲ್ಲಿ ರಾಜ್ಯದ ಮೊದಲ ತೇಲುವ ಸೇತುವೆ ನಿರ್ಮಿಸಲಾಗಿದ್ದು, ಪ್ರವಾಸಿಗರ ಸುರಕ್ಷತೆ ಹಾಗೂ ಭದ್ರತೆಯ ದೃಷ್ಟಿಯಿಂದ 25 ಲೈಫ್‌ಗಾರ್ಡ್‌ಗಳನ್ನು ನಿಯೋಜಿಲಾಗುವುದು ಎಂದು ಶಾಸಕ ಕೆ.ರಘುಪತಿ ಭಟ್ ತಿಳಿಸಿದರು. ಮಲ್ಪೆಯಲ್ಲಿ ಶುಕ್ರವಾರ ತೇಲುವ ಸೇತುವೆ ಉದ್ಘಾಟಿಸಿ ಮಾತನಾಡಿದ ಶಾಸಕರು, ಪ್ರವಾಸಿ ತಾಣಗಳಿಗೆ ಹೊಸತನ ನೀಡಿದರೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅಂತೆಯೇ ಮಲ್ಪೆ ಬೀಚ್‌ನಲ್ಲಿ ತೇಲುವ ಸೇತುವೆ ನಿರ್ಮಿಸಿರುವುದು ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾಗಿದೆ ಎಂದರು. ಪ್ರವಾಸಿಗರನ್ನು ಸೆಳೆಯಲು ಸ್ಥಳೀಯರು ಹೊಸತನಗಳ ಪ್ರಯೋಗ ನಡೆಯಬೇಕು. ಮಲ್ಪೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಆವಿಷ್ಕಾರಗಳಿಗೆ ಸದಾ ಪ್ರೋತ್ಸಾಹ ನೀಡಲಿದೆ. ಪ್ರವಾಸಿಗರಿಗೆ ಮನರಂಜನೆಯ ಜತೆಗೆ ಸ್ವ ಉದ್ಯೋಗ ನೀಡುವ ಹನುಮಾನ್ ವಿಠೋಬಾ ಭಜನಾ ಮಂದಿರದ ಪ್ರಯತ್ನ ಶ್ಲಾಘನೀಯ ಎಂದರು.
ಸೇಂಟ್ ಮೇರಿಸ್ ಐಲ್ಯಾಂಡ್‌ನಲ್ಲಿ ಈಚೆಗೆ ನಡೆದ ಪ್ರವಾಸಿಗರ ಸಾವಿನಿಂದ ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದಿದ್ದು ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರ ಭದ್ರತೆಗೆ ಹೆಚ್ಚಿನ ಒತ್ತು ನೀಡಲು ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ. ಪ್ರವಾಸಿಗರ ಭದ್ರತೆಗೆ ದೃಷ್ಟಿಯಿಂದ ಜಿಲ್ಲಾಡಳಿತ ಎರಡು ಜೆಟ್ ಸ್ಕೀಗಳನ್ನು ಖರೀದಿಸಿ ಸೇಂಟ್ ಮೇರಿಸ್ ಐಲ್ಯಾಂಡ್ ಹಾಗೂ ಮಲ್ಪೆ ಬೀಚ್‌ನಲ್ಲಿ ನಿಯೋಜಿಸಲು ನಿರ್ಧರಿಸಿದೆ. ಇದರಿಂದ ಅವಘಡಗಳಾದಾಗ ತಕ್ಷಣ ನೆರವಿಗೆ ಧಾವಿಸಲು ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಮಲ್ಪೆ ಬೀಚ್ ಅಭಿವೃದ್ದಿ ಸಮಿತಿ ಅಧ್ಯಕ್ಷ ಪಾಂಡುರಂಗ ಮಲ್ಪೆ, ನಗರಸಭೆ ಸ್ಥಾಯಿ ಸಮಿತಿ ಸದಸ್ಯ ಮಂಜು ಕೊಳ, ಮಲ್ಪೆ ಬೀಚ್ ಗುತ್ತಿಗೆದಾರ ಸುದೇಶ್ ಶೆಟ್ಟಿ, ಶೇಖರ್ ಪುತ್ರನ್, ಧನಂಜಯ ಕಾಂಚನ್ ಇದ್ದರು.