ನವದೆಹಲಿ: ಆಕೆ ಭುಜದ ಮೇಲೆ ಡಬಲ್ ಸ್ಟಾರ್ ಇರುವ, ಖಾಕಿ ಧರಿಸಿರೋ ಸಬ್ ಇನ್ಸ್ ಪೆಕ್ಟರ್. ಈಗಾಗಲೇ ಆಕೆಗೆ ನಿಶ್ಚಿತಾರ್ಥವಾಗಿದ್ದು ಬರುವ ನವೆಂಬರ್ ನಲ್ಲಿ ಮದುವೆಯಾಗುವ ಕನಸು ಕಂಡಿದ್ದರು. ವರನ ಕೈಯಿಂದ ಹಾರ ಹಾಕಿಸಿಕೊಂಡು ತಾಳಿ ಕಟ್ಟಿಸಿಕೊಳ್ಳುವ ಸಂಭ್ರಮದಲ್ಲಿದ್ದರು. ಆದರೆ ಇದೀಗ ಅಂತಹ ಮಧುರ ಕನಸಿಗೆ ಕಾರಣನಾಗಿದ್ದ ವರನ ಕೈಗೇ ಆ ಡಬಲ್ ಸ್ಟಾರ್ ಮಹಿಳಾ ಸಬ್ ಇನ್ಸ್ ಪೆಕ್ಟರ್ ಕೋಳ ತೊಡಿಸಿ, ಜೈಲಿಗೆ ಕಳುಹಿಸಿದ್ದಾರೆ. ನಿಮ್ಮ ಹುಬ್ಬೇರುವಂತೆ ಮಾಡಿದ ಈ ಕಥೆ ನಡೆದಿರೋದು ಅಸ್ಸಾಂನಲ್ಲಿ. ಈ ಕಥೆಯ ನಾಯಕ ರಾಣಾ ಪೊಗಾಗ್. ನಾಯಕಿ ಕಮ್ ಸಬ್ ಇನ್ಸ್ ಪೆಕ್ಟರ್ ಜುನ್ಮೋನಿ ರಾಭಾ. ಕೆಲಸ ಕೊಡಿಸೋದಾಗಿ ಹಲವರಿಗೆ ರಾಣಾ ಪೊಗಾಗ್ ವಂಚಿಸಿರೋದು ಗೊತ್ತಾಗಿ ಆತನನ್ನ ಬಂಧಿಸಲಾಗಿದೆ. ಸಬ್ ಇನ್ಸ್ ಪೆಕ್ಟರ್ ಕೈ ಹಿಡಿಯಬೇಕಾಗಿದ್ದ ವರ ಇದೀಗ ವಂಚಕನೆಂಬುದು ಬಯಲಾಗಿದೆ.
ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್(ಒಎನ್‌ಜಿಸಿ) ನಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ರಾಣಾ ಪೊಗಾಗ್ ಹಲವರಿಗೆ ವಂಚಿಸಿದ್ದ. ಈ ವಿಚಾರ ಗೊತ್ತಿಲ್ಲದ ಸಬ್ ಇನ್ಸ್ ಪೆಕ್ಟರ್ ನಾಗಾವ್ ಜಿಲ್ಲೆಯ ಜುನ್ಮೋನಿ ರಾಭಾ ಕಳೆದ ಅಕ್ಟೋಬರ್ ನಲ್ಲಿ ಆತನೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಇದೀಗ ಈತನ ವಂಚನೆ ಬಯಲಾಗಿದ್ದು, ಸ್ವತಃ ಭಾವಿ ಪತಿ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಿದ್ದಾರೆ. ರಾಣಾ ಪೊಗಾಗ್ ತಾನು ಅಸ್ಸಾಂನಲ್ಲಿ ಒಎನ್‌ಜಿಸಿ ಅಧಿಕಾರಿಯಾಗಿದ್ದು, ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಜನರ ಬಳಿ ಹಣ ಕೇಳುತ್ತಿದ್ದ. ಪೋಲೀಸರ ಪ್ರಕಾರ ಕೋಟ್ಯಂತರ ರೂಪಾಯಿ ವಂಚನೆ ಮಾಡಿರೋದು ಬಯಲಾಗಿದೆ.
ಅಸ್ಸಾಂನ ನಾಗಾಂವ್ ಜಿಲ್ಲೆಯ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಜುನ್ಮೋನಿ ರಾಭಾ ಅವರಿಗೆ ತಾನೊಬ್ಬ ಒಎನ್‌ಜಿಸಿ ಅಧಿಕಾರಿ ಎಂದು ಈತ ಪರಿಚಯಿಸಿಕೊಂಡಿದ್ದನಂತೆ. ಆತ ಕಳ್ಳ ಎಂದು ತಿಳಿದ ತಕ್ಷಣ ಎಫ್‌ಐಆರ್ ದಾಖಲಿಸಿದ್ದೇನೆ. ಅವನು(ರಾಣಾ ಪೊಗಾಗ್) ಎಷ್ಟು ದೊಡ್ಡ ವಂಚಕ ಎಂದು ತಿಳಿಸಲು ನನ್ನ ಬಳಿಗೆ ಬಂದ ಮೂರು ಜನರಿಗೆ ನಾನು ಆಭಾರಿಯಾಗಿದ್ದೇನೆ. ಅವರು ನನ್ನ ಕಣ್ಣು ತೆರೆಸಿದರು ಎಂದು ಜುನ್ಮೋನಿ ರಾಭಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಾನು ರಾಣಾ ಪೊಗಾಗ್ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿ ಒಎನ್ ಜಿಸಿಯ ಕೆಲವು ನಕಲಿ ಸೀಲುಗಳು ಮತ್ತು ದಾಖಲೆಗಳಿದ್ದವು. ಅವುಗಳನ್ನು ವಶಪಡಿಸಿಕೊಂಡ ನಂತರ ಆತನ ವಿರುದ್ಧ ಎಫ್‌ಐಆರ್ ದಾಖಲಿಸಿ ಬಂಧಿಸಿದ್ದೇವೆ ಎಂದು ಮಹಿಳಾ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ವಿಚಾರಣೆ ನಡೆಸಿದ ಕೋರ್ಟ್ ರಾಣಾನನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
Discover more from Coastal Times Kannada
Subscribe to get the latest posts sent to your email.
Discussion about this post