ಮಂಗಳೂರು, ಜುಲೈ 7: ಅನುದಾನಿತ ಶಾಲೆಯ ನಿವೃತ್ತ ಶಿಕ್ಷಕಿಯೊಬ್ಬರಿಗೆ ಪಿಂಚಣಿ ಹಣ ಪಡೆಯಲು ಅಗತ್ಯ ದಾಖಲೆ ನೀಡಬೇಕಿದ್ದರೆ ಐದು ಲಕ್ಷ ರೂ. ನೀಡಬೇಕೆಂದು ಸತಾಯಿಸಿ ಲಂಚದ ಹಣಕ್ಕೆ ಕೈಯೊಡ್ಡಿದ ಶಾಲಾ ಸಂಚಾಲಕಿಯನ್ನು ರೆಡ್ ಹ್ಯಾಂಡ್ ಆಗಿಯೇ ಮಂಗಳೂರು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ಹೊರವಲುದ ಬಜ್ಪೆ ನಿರಂಜನ ಸ್ವಾಮಿ ಸರ್ಕಾರಿ ಅನುದಾನಿತ ಶಾಲೆಯ ಸಂಚಾಲಕಿ ಜ್ಯೋತಿ ಪೂಜಾರಿ ರೆಡ್ ಹ್ಯಾಂಡ್ ಆಗಿ ಸೆರೆಯಾದವರಾಗಿದ್ದಾರೆ. ಸುಂಕದಕಟ್ಟೆಯಲ್ಲಿರುವ ಶ್ರೀ ನಿರಂಜನ ಸ್ವಾಮಿ ಶಿಕ್ಷಣ ಪ್ರತಿಷ್ಠಾನಕ್ಕೆ ಸೇರಿದ ಶ್ರೀ ನಿರಂಜನ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಹಾಗು ಮುಖ್ಯ ಶಿಕ್ಷಕಿಯಾಗಿ 42 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಶೋಭಾರಾಣಿರವರು ದಿನಾಂಕ 31.07.2023 ರಂದು ವಯೋನಿವೃತ್ತಿ ಹೊಂದಲಿದ್ದು, ತನ್ನ ವಯೋ ನಿವೃತ್ತಿ ಪಿಂಚಣಿ ಉಪದಾನ ಪತ್ರಗಳಿಗೆ ಸಹಿ ಹಾಕಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸುವಂತೆ ದಿನಾಂಕ 25.05.2023 ರಂದು ಶ್ರೀ ನಿರಂಜನ ಸ್ವಾಮೀ ಅನುದಾನಿತ ಶಾಲೆಯ ಮ್ಯಾನೇಜ್‌ಮೆಂಟ್ ಸಂಚಾಲಕರಾದ ಶ್ರೀಮತಿ ಜ್ಯೋತಿ ಎನ್ ಪೂಜಾರಿರವರಿಗೆ ಮನವಿ ಪತ್ರದೊಂದಿಗೆ ವಿನಂತಿಸಿಕೊಂಡು ಸ್ವೀಕೃತಿಯನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.
ಸಂಚಾಲಕರಾದ ಶ್ರೀಮತಿ ಜ್ಯೋತಿ.ಎನ್.ಪೂಜಾರಿರವರು ಸ್ವೀಕೃತಿಯನ್ನು ನಂತರ ನೀಡುವುದಾಗಿ ತಿಳಿಸಿ, ಪಿಂಚಣಿ ಉಪದಾನ ಪತ್ರಗಳನ್ನು ಸಹಿ ಮಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸದೇ, ಸ್ವೀಕೃತಿ ಪತ್ರವನ್ನು ನೀಡದೇ ಫಿರ್ಯಾದಿದಾರರಿಗೆ ಸತಾಯಿಸಿ, ಪಿಂಚಣಿ ಉಪದಾನ ಪತ್ರಗಳಿಗೆ ಸಹಿ ಹಾಕಿ ಕಳುಹಿಸಬೇಕಾದರೆ ರೂ.20,00,000/- (ಇಪ್ಪತ್ತು ಲಕ್ಷ) ಹಣ ಕೊಡಬೇಕೆಂದು ಬೇಡಿಕೆ ಇಟ್ಟಿದ್ದರು. ಶಿಕ್ಷಕಿ ಶೋಭಾರಾಣಿ ಮತ್ತೊಮ್ಮೆ ಸಂಚಾಲಕಿ ಜ್ಯೋತಿ ಅವರನ್ನು ಭೇಟಿ ಮಾಡಿ ಕೋರಿಕೆ ಸಲ್ಲಿಸಿದರೂ, ಪಿಂಚಣಿ ದಾಖಲೆ ಪತ್ರಗಳಿಗೆ ಸಹಿ ಮಾಡದೆ ರೂ.5 ಲಕ್ಷ ಕೊಡಲೇಬೇಕು ಎಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಬೇಸತ್ತ ಶಿಕ್ಷಕಿ ಮಂಗಳೂರಿನ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅಧಿಕಾರಿಗಳ ಸೂಚನೆಯಂತೆ ಇಂದು ಶಿಕ್ಷಕಿ ಶೋಭಾರಾಣಿ, 5 ಲಕ್ಷ ಮೊತ್ತವನ್ನು ಶಾಲಾ ಸಂಚಾಲಕಿಗೆ ನೀಡುತ್ತಿರುವಾಗಲೇ ಲೋಕಾಯುಕ್ತ ದಾಳಿ ನಡೆಸಿದೆ. ಆರೋಪಿ ಜ್ಯೋತಿ ಪೂಜಾರಿ ಅವರನ್ನು ಬಂಧಿಸಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಲೋಕಾಯುಕ್ತ ಎಸ್ಪಿ ಸಿಎ ಸೈಮನ್ ನೇತೃತ್ವದಲ್ಲಿ ಡಿವೈಎಸ್ಪಿ ಕಲಾವತಿ, ಚೆಲುವರಾಜು, ಇನ್ಸ್ ಪೆಕ್ಟರ್ ವಿನಾಯಕ ಬಿಲ್ಲವ ಆರೋಪಿಯನ್ನು ಟ್ರ್ಯಾಪ್ ಮಾಡಿ ಬಂಧಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.
Discussion about this post