ಮಂಗಳೂರು, ಜುಲೈ 7: ಚಿನ್ನದ ವ್ಯಾಪಾರಿಯನ್ನು ದರೋಡೆಗೈದ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಆರೋಪಿಗಳ ಗುರುತು ಪತ್ತೆಹಚ್ಚಿದ್ದು ಬಂಧನಕ್ಕಾಗಿ ಕೇರಳ ಮತ್ತು ಕೊಡಗಿನಲ್ಲಿ ಬಲೆ ಬೀಸಿದ್ದಾರೆ. ಇದೇ ವೇಳೆ, ಕೃತ್ಯದಲ್ಲಿ ಭಾಗಿಯಾದ ನಟೋರಿಯಸ್ ಆರೋಪಿಗಳ ಫೋಟೋ ಬಿಡುಗಡೆ ಮಾಡಿದ್ದು ಇವರ ಪತ್ತೆಗಾಗಿ ಸಾರ್ವಜನಿಕರ ಸಹಾಯ ಯಾಚಿಸಿದ್ದಾರೆ.
ಪಾಂಡಿಚೇರಿ ಮೂಲದ ಶಿಬಿನ್ ಗಂಗಾಧರನ್ ದರೋಡೆ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾಗಿದ್ದು ಆತನದ್ದು ಸೇರಿ ಒಟ್ಟು 14 ಮಂದಿ ಆರೋಪಿಗಳ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ. ಕೇರಳದ ವಿವಿಧ ಜಿಲ್ಲೆಗಳಿಗೆ ಸೇರಿದ ಶ್ರೀರಾಗ್, ಅತುಲ್, ಮಿಥುನ್‌ಲಾಲ್, ಅಜೀರ್ ತರಾಯಿಲ್, ವೈಶಾಕ್, ಅಸೀರ್ ಪಯ್ಯನ್ನೂರ್, ಪ್ರಣವ್, ವಿಜಿಲ್ ಅಂಜರಕಂಡಿ, ಕೊಡಗಿನ ಉಬೈದ್, ಫಿರೋಜ್, ಮೊಯ್ದು ಅಬ್ಬಾಸ್, ಜಿಯಾದ್, ಜಮೀರ್ ಅಲಿಕಾ ಎಂಬವರು ಆರೋಪಿಗಳು ಎಂದು ಗುರುತಿಸಲಾಗಿದೆ.

ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿರುವ ಕಾರಣ ಆರೋಪಿಗಳ ಬಂಧನಕ್ಕೆ ಸಹರಿಸುವಂತೆ ಮಂಗಳೂರು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ, ಆರೋಪಿಗಳ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ನೀಡಲಾಗುವುದು. ಅವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ತಿಳಿಸಿದ್ದಾರೆ.
ಕರ್ನಾಟಕ ಹಾಗೂ ಕೇರಳದಲ್ಲಿ ಆರೋಪಿಗಳ ಫೋಟೋ ಹಾಗೂ ಹೆಸರನ್ನು ಬಿಡುಗಡೆ ಮಾಡಲಾಗಿದ್ದು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಆರೋಪಿಗಳ ಫೋಸ್ಟರ್ ಅಂಟಿಸಲು ಕ್ರಮ ಕೈಗೊಳ್ಳಲಾಗಿದೆ. ಆರೋಪಿಗಳ ಬಂಧನಕ್ಕಾಗಿ ಮಂಗಳೂರು ಪೊಲೀಸರು ಕೇರಳ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದು ಹಲವು ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಆರೋಪಿಗಳ ಸುಳಿವು ಸಿಗದ ಕಾರಣ ಫೋಟೊ ಬಿಡುಗಡೆ ಮಾಡಿದ್ದಾರೆ.
ಈ ಹಿಂದೆ ಪಣಂಬೂರು ಪೊಲೀಸರು ದರೋಡೆಕೋರರಿಗೆ ಸಹಾಯ ಮಾಡಿದ ಆರೋಪದ ಮೇಲೆ ಮೂವರು ವ್ಯಕ್ತಿಗಳನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳನ್ನು ಕೇರಳದ ನಿಮಿಲ್ ಮತ್ತು ಮಡಿಕೇರಿಯ ಇರ್ಷಾದ್ ಮತ್ತು ಮುಸ್ತಫಾ ಎಂದು ಗುರುತಿಸಲಾಗಿದೆ. ಪ್ರಸ್ತುತ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.

Discover more from Coastal Times Kannada
Subscribe to get the latest posts sent to your email.







Discussion about this post