ದಕ್ಷಿಣ ಕನ್ನಡ: ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯೆಯೊಬ್ಬರ ಮೇಲೆ ಲೋಕಸಭೆ ಚುನಾವಣೆ ವೇಳೆ ನಡೆದಿದ್ದ ಹಲ್ಲೆ ಮತ್ತು ಮಾನಭಂಗ ಪ್ರಕರಣ ಸಂಬಂಧ ಸುಳ್ಯದ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಸೇರಿದಂತೆ 15 ಮಂದಿಗೆ ಜೈಲು ಶಿಕ್ಷೆಯಾಗಿದೆ.
ಏನಿದು ಪ್ರಕರಣ: 2014ರ ಲೋಕಸಭೆ ಚುನಾವಣೆ ವೇಳೆ ಜಿಪಂನ ಅಂದಿನ ಕಾಂಗ್ರೆಸ್ ಸದಸ್ಯೆ ಸುಳ್ಯ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದರು. ಸುಳ್ಯ ತಾಲೂಕಿನ ನೆಲ್ಲೂರು ಕೇಮ್ರಾಜೆಯಲ್ಲಿ ಪ್ರಚಾರ ನಡೆಸುವ ವೇಳೆ ಹರೀಶ್ ಕಂಜಿಪಿಲಿ ಮತ್ತು ಇತರ 14 ಜನರ ಗುಂಪು ತನ್ನ ಮೇಲೆ ಹಲ್ಲೆ ಹಾಗೂ ಖಾಸಗಿ ಭಾಗಗಳಿಗೆ ತುಳಿದು ಮಾನಭಂಗ ಮಾಡಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ಅಂದಿನ ಸುಳ್ಯ ಪೊಲೀಸ್ ಠಾಣಾಧಿಕಾರಿ ಬಿ.ಎಸ್. ರವಿ ಅವರು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹರೀಶ್ ಸೇರಿ 15 ಮಂದಿಗೆ ಸುಳ್ಯ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮಶೇಖರ್ ಅವರು 2 ವರ್ಷ ಜೈಲುಶಿಕ್ಷೆ ಮತ್ತು ನೊಂದ ಮಹಿಳೆಗೆ 50 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿ ತೀರ್ಪು ಪ್ರಕಟಿಸಿದ್ದಾರೆ.
Discussion about this post