ಮಂಗಳೂರು, ಅ.07 : ಕರಾವಳಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುವ ಐತಿಹಾಸಿಕ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವ-2026ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ .ಅ.11ರಿಂದ 22ರವರೆಗೆ ನಡೆಯಲಿರುವ ದಸರಾ ಮಹೋತ್ಸವಕ್ಕೆ ಅ.12ರಂದು ಸಂಜೆ 6.30ಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅದ್ದೂರಿ ಚಾಲನೆ ನೀಡಲಿದ್ದಾರೆ ಎಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಪೂಜಾರಿ ತಿಳಿಸಿದ್ದಾರೆ.
ಈ ವರ್ಷ ಕ್ಷೇತ್ರವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಸುಂದರವಾಗಿ ವಿನ್ಯಾಸಗೊಳಿಸಲಾದ ಭವ್ಯ ದರ್ಬಾರ್ ಹಾಲ್‌ನಲ್ಲಿ ಶ್ರೀ ಮಹಾಗಣಪತಿ, ಶ್ರೀ ಆದಿಶಕ್ತಿ, ನವದುರ್ಗೆಯರು ಮತ್ತು ವಿದ್ಯಾದೇವಿ ಶ್ರೀ ಶಾರದಾ ಮಾತೆಯ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಭಜನೆ, ನೃತ್ಯ, ಸಂಗೀತ, ಕ್ರೀಡಾಕೂಟ ಹಾಗೂ ವಿವಿಧ ಜಾನಪದ ಕಲಾಪ್ರಕಾರಗಳು ಉತ್ಸವದ ಮೆರುಗನ್ನು ಹೆಚ್ಚಿಸಲಿವೆ.
ಅಕ್ಟೋಬರ್ 12 ರಂದು ಮುಖ್ಯಮಂತ್ರಿಗಳಿಂದ ಉದ್ಘಾಟನೆ : ಅಕ್ಟೋಬರ್ 11 ರಂದು ವೈದಿಕ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿದ್ದು, ಮಧ್ಯಾಹ್ನ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆ ನಡೆಯಲಿದೆ. ಅಕ್ಟೋಬರ್ 12 ರಂದು ಸಂಜೆ 6.30 ಕ್ಕೆ ಸಿಎಂ ಡಿ. ಕೆ. ಶಿವಕುಮಾರ್ ಅವರು ಮಂಗಳೂರು ದಸರಾ ಮಹೋತ್ಸವವನ್ನು ವೈಭವಪೂರ್ಣವಾಗಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಐತಿಹಾಸಿಕ ಮಂಗಳೂರು ದಸರಾ ಶೋಭಾಯಾತ್ರೆಯು ಅಕ್ಟೋಬರ್ 21 ರಂದು ಸಂಜೆ 4 ಗಂಟೆಗೆ ಆರಂಭವಾಗಲಿದೆ.
ಪ್ರತಿದಿನ ಚಂಡಿಕಾ ಹೋಮ : ಅಕ್ಟೋಬರ್ 12 ರಿಂದ 20 ರವರೆಗೆ ಪ್ರತಿದಿನ ಬೆಳಗ್ಗೆ 8.30 ಕ್ಕೆ ಕ್ಷೇತ್ರದಲ್ಲಿ ಚಂಡಿಕಾ ಹೋಮ ಜರುಗಲಿದೆ. ಅಕ್ಟೋಬರ್ 17 ರಂದು ವಿಶೇಷ ಸಮೂಹ ಚಂಡಿಕಾ ಹೋಮವನ್ನು ಆಯೋಜಿಸಲಾಗಿದ್ದು, ಬೆಳಗ್ಗೆ 11.30 ಕ್ಕೆ ಪೂರ್ಣಾಹುತಿ ನಿಗದಿಯಾಗಿದೆ. ಸಾರ್ವಜನಿಕರೂ ಚಂಡಿಕಾ ಹೋಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
‘ದಸರಾ ಕಲಾಝೇಂಕಾರ’: ಅಕ್ಟೋಬರ್ 11 ರಿಂದ 20 ರವರೆಗೆ ಮಧ್ಯಾಹ್ನ 2.30 ರಿಂದ ರಾತ್ರಿ 11.30 ರವರೆಗೆ ಸಂತೋಷಿ ಕಲಾ ಮಂಟಪದಲ್ಲಿ ‘ದಸರಾ ಕಲಾಝೇಂಕಾರ’ ಶೀರ್ಷಿಕೆಯಡಿಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಕಲಾವಿದರಿಂದ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅದೇ ವೇದಿಕೆಯಲ್ಲಿ ಸಮಾಜದ ಸಾಧಕ ಮಹಿಳೆಯರನ್ನು ಪ್ರತಿದಿನ ‘ಅಸಾಮಾನ್ಯ ಸ್ತ್ರೀ’ ಪ್ರಶಸ್ತಿಯೊಂದಿಗೆ ಗೌರವಿಸಲಾಗುವುದು.

ಕವಿಗೋಷ್ಠಿ, ನೃತ್ಯ ಮತ್ತು ವಿವಿಧ ಸ್ಪರ್ಧೆಗಳು : ಅಕ್ಟೋಬರ್ 12 ರಂದು ರಾಜ್ಯಮಟ್ಟದ ದಸರಾ ಕವಿಗೋಷ್ಠಿ ಹಾಗೂ ಕಥೆ ಮತ್ತು ಕವನ ಸ್ಪರ್ಧೆಗಳು ನಡೆಯಲಿವೆ. ಅಕ್ಟೋಬರ್ 13 ರಂದು ಸಂಜೆ 7.30 ರಿಂದ ರಾಜ್ಯಮಟ್ಟದ ಭಕ್ತಿಪೂರ್ವಕ ಸಮೂಹ ನೃತ್ಯ ಸ್ಪರ್ಧೆ ‘ರುದ್ರತಾಂಡವಂ’ ಸೀಸನ್-2 ಜರುಗಲಿದೆ.
ಮಕ್ಕಳಿಗಾಗಿ ‘ಮಕ್ಕಳ ದಸರಾ’ ಅಕ್ಟೋಬರ್ 15 ರಂದು ನಡೆಯಲಿದ್ದು, ಬೆಳಿಗ್ಗೆ 9 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಈ ಸಂದರ್ಭದಲ್ಲಿ ಭಕ್ತಿಗೀತೆ, ಚಿತ್ರಕಲೆ ಹಾಗೂ ದೇಶಭಕ್ತಿ ಗೀತೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅಕ್ಟೋಬರ್ 16 ರಂದು ‘ಮುದ್ದು ಶಾರದೆ’ ಸ್ಪರ್ಧೆ, ಅಕ್ಟೋಬರ್ 18 ರಂದು ದಸರಾ ಮ್ಯಾರಥಾನ್ ಆವೃತ್ತಿ-4 ಮತ್ತು ‘ಕಿನ್ನಿಪಿಲಿ’ ಸೀಸನ್-2 ನಡೆಯಲಿದೆ.
ಅಕ್ಟೋಬರ್ 19 ರಂದು ಮಹಿಳೆಯರಿಗಾಗಿ ‘ಮಹಿಳಾ ದಸರಾ’ ಆಯೋಜಿಸಲಾಗಿದ್ದು, ಭರತನಾಟ್ಯ, ಒಲೆ ರಹಿತ ಅಡುಗೆ, ರಂಗೋಲಿ, ಮೆಹಂದಿ, ಸಮೂಹ ಗಾಯನ ಮತ್ತು ಹೂವಿನ ಅಲಂಕಾರ ಸ್ಪರ್ಧೆಗಳು ನಡೆಯಲಿವೆ. ಅಂದು ರಾತ್ರಿ 8 ಗಂಟೆಗೆ ಮಹಿಳೆಯರಿಂದ ಸಮೂಹ ಗರ್ಭಾ-ದಾಂಡಿಯಾ ನೃತ್ಯವೂ ಜರುಗಲಿದೆ.
ಅಕ್ಟೋಬರ್ 20 ರಂದು ‘ದಸರಾ ರಂಗಾಂತರಂಗ’ ಶೀರ್ಷಿಕೆಯಡಿಯಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಗುವುದು.
ಶಾರದಾ ಮಾತೆಯ ಮಡಿಲಲ್ಲಿ ಅಕ್ಷರಾಭ್ಯಾಸ : ಅಕ್ಟೋಬರ್ 20 ರಂದು ಬೆಳಗ್ಗೆ 9 ಗಂಟೆಗೆ ಶಾರದಾ ಮಾತೆಯ ಮಡಿಲಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ.
ಅರಮನೆ ಶೈಲಿಯ ದರ್ಬಾರ್ ಮಂಟಪ : ಈ ವರ್ಷ ಶ್ರೀ ಮಹಾಗಣಪತಿ, ಶ್ರೀ ಆದಿಶಕ್ತಿ, ನವದುರ್ಗೆಯರು ಹಾಗೂ ಶ್ರೀ ಶಾರದಾ ಮಾತೆಯನ್ನು ಪ್ರತಿಷ್ಠಾಪಿಸುವ ದರ್ಬಾರ್ ಮಂಟಪವನ್ನು ಅರಮನೆ ಶೈಲಿಯಲ್ಲಿ ಆಕರ್ಷಕವಾಗಿ ವಿನ್ಯಾಸಗೊಳಿಸಲಾಗಿದೆ.
ಶೋಭಾಯಾತ್ರೆಯಲ್ಲಿ ಡಿಜೆ ಸೌಂಡ್ಸ್‌ಗೆ ಅವಕಾಶವಿಲ್ಲ : ಮಂಗಳೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾಗಿರುವ ಐತಿಹಾಸಿಕ ದಸರಾ ಶೋಭಾಯಾತ್ರೆ ಅ.21ರಂದು ಸಂಜೆ 4 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಆರಂಭವಾಗಲಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಲಿರುವ ಶೋಭಾಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು, ಸ್ತಬ್ಧಚಿತ್ರಗಳು ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವವನ್ನು ಬಿಂಬಿಸುವ ಮೆರವಣಿಗೆ ಪ್ರಮುಖ ಆಕರ್ಷಣೆಯಾಗಲಿದೆ.
ಶೋಭಾಯಾತ್ರೆಯಲ್ಲಿ ಡಿಜೆ ಸೌಂಡ್ಸ್ ಬಳಕೆಗೆ ಅವಕಾಶ ಇರುವುದಿಲ್ಲ ಎಂದು ಆಯೋಜಕರು ಸ್ಪಷ್ಟಪಡಿಸಿದ್ದಾರೆ. ಸಾಂಪ್ರದಾಯಿಕ ಕಲಾ ತಂಡಗಳು, ವಾದ್ಯಮೇಳಗಳು ಹಾಗೂ ಸಾಂಸ್ಕೃತಿಕ ಪ್ರದರ್ಶನಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ದಸರಾ ಶೋಭಾಯಾತ್ರೆಯನ್ನು ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಅನುಗುಣವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕುದ್ರೋಳಿ ಕ್ಷೇತ್ರದಿಂದ ಆರಂಭವಾಗುವ ಶೋಭಾಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂದೇಶವನ್ನು ಸಾರಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡು ಶೋಭಾಯಾತ್ರೆಯ ಸೊಬಗನ್ನು ಕಣ್ತುಂಬಿಕೊಳ್ಳುವ ನಿರೀಕ್ಷೆಯಿದೆ.
ಪತ್ರಿಕಾಗೋಷ್ಠಿಯಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಜಯರಾಜ್ ಸೋಮಸುಂದರ್, ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ಲೀಲಾಕ್ಷ ಕರ್ಕೇರ, ಚಿತ್ತರಂಜನ್ ಗರೋಡಿ,ಡಾ.ಬಿ.ಜಿ ಸುವರ್ಣ, ಜತಿನ್ ಅತ್ತಾವರ, ರಾಧಾಕೃಷ್ಣ, ಚಂದನ್ ದಾಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
.
Discover more from Coastal Times Kannada
Subscribe to get the latest posts sent to your email.







Discussion about this post