ಪಣಜಿ (ಗೋವಾ): ಉತ್ತರ ಗೋವಾದ ಅರ್ಪೋರಾದಲ್ಲಿನ ನೈಟ್ಕ್ಲಬ್ನ ಡ್ಯಾನ್ಸ್ ಫ್ಲೋರ್ನಲ್ಲಿ ಬೆಂಕಿ ಕಾಣಿಸಿಕೊಂಡ ಸಮಯದಲ್ಲಿ ಆ ಮಹಡಿಯಲ್ಲಿ ನೂರಾರು ಜನರಿದ್ದರು. ಅಲ್ಲಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಅವರಲ್ಲಿ ಕೆಲವರು ಸಿಬ್ಬಂದಿ ಜೊತೆಗೆ ಕೆಳಗಡೆ ಇದ್ದ ಅಡುಗೆ ಮನೆಗೆ ಓಡಿ ಹೋದರು. ಅಲ್ಲಿದ್ದ ಸಿಬ್ಬಂದಿ ಜೊತೆ ಅವರೂ ಸಿಲುಕಿಕೊಂಡರು ಎಂದು ದುರಂತದ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
ಶನಿವಾರ ಮಧ್ಯರಾತ್ರಿ ನಂತರ ಸಿಲಿಂಡರ್ ಸ್ಫೋಟದಿಂದಾಗಿ ನೈಟ್‌ಕ್ಲಬ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ರಾಜ್ಯ ಪೊಲೀಸರು ತಿಳಿಸಿದರೆ, ಪ್ರವಾಸಿಗರು ನೃತ್ಯ ಮಾಡುತ್ತಿದ್ದ ಕ್ಲಬ್‌ನ ಮೊದಲ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಕೆಲವು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
ರಾಜ್ಯ ರಾಜಧಾನಿ ಪಣಜಿಯಿಂದ 25 ಕಿ.ಮೀ ದೂರದಲ್ಲಿರುವ ಅರ್ಪೋರಾ ಗ್ರಾಮದ ಜನಪ್ರಿಯ ಪಾರ್ಟಿ ಸ್ಥಳವಾದ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತರಲ್ಲಿ ಹೆಚ್ಚಿನವರು ಕ್ಲಬ್‌ನ ಅಡುಗೆ ಸಿಬ್ಬಂದಿಯಾಗಿದ್ದು, ಅದರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ. ಮೃತರಲ್ಲಿ ನಾಲ್ವರು ಪ್ರವಾಸಿಗರು ಇದ್ದರು. ರಾಜ್ಯದ ಪ್ರವಾಸಿ ಋತುವಿನ ಪ್ರಮುಖ ಸಂದರ್ಭದಲ್ಲಿಯೇ ಇಂತಹ ಘಟನೆ ನಡೆದಿರುವುದು ದುರದೃಷ್ಟಕರ. ನೈಟ್‌ಕ್ಲಬ್ ಅಗ್ನಿ ಸುರಕ್ಷತಾ ಮಾನದಂಡಗಳನ್ನು ಪಾಲಿಸಿಲ್ಲ. ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸುತ್ತೇವೆ. ಕ್ಲಬ್ ಆಡಳಿತ ಮಂಡಳಿ ಮತ್ತು ಸ್ಥಾಪನೆಗೆ ಅವಕಾಶ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
‘ಬೆಂಕಿಯ ಜ್ವಾಲೆಗಳು ಆವರಿಸುತ್ತಿದ್ದಂತೆ ಕ್ಲಬ್ನಲ್ಲಿ ಭಾರಿ ಗದ್ದಲ ಉಂಟಾಯಿತು. ನಾವು ಕ್ಲಬ್‌ನಿಂದ ಹೊರಗೆ ಓಡಿಹೋದಾಗ ಇಡೀ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದೆವು. ವಾರಾಂತ್ಯ ಆಗಿದ್ದರಿಂದ ನೈಟ್‌ಕ್ಲಬ್‌ನಲ್ಲಿ ಹೆಚ್ಚಿನ ಜನರು ಸೇರಿದ್ದರು. ಮತ್ತು ಕನಿಷ್ಠ 100 ಜನರು ಡ್ಯಾನ್ಸ್ ಫ್ಲೋರ್ನಲ್ಲಿದ್ದರು’ ಎಂದು ಪ್ರತ್ಯಕ್ಷದರ್ಶಿ ಹೈದರಾಬಾದ್‌ನ ಪ್ರವಾಸಿ ಫಾತಿಮಾ ಶೇಖ್ ಅರ್ಪೋರಾದಲ್ಲಿ ಮಾಧ್ಯಮಗಳಿಗೆ ತಿಳಿಸಿದರು.

‘ಬೆಂಕಿ ಹೊತ್ತಿಕೊಂಡ ನಂತರ, ಕೆಲವು ಪ್ರವಾಸಿಗರು ಕೆಳಗೆ ಓಡಲು ಪ್ರಾರಂಭಿಸಿದರು. ಗಲಿಬಿಲಿಯಲ್ಲಿ, ನೆಲ ಮಹಡಿಯಲ್ಲಿರುವ ಅಡುಗೆಮನೆಗೆ ಹೋದರು. ಅಲ್ಲಿಗೆ ಓಡಿದ ಪ್ರವಾಸಿಗರು ಇತರ ಸಿಬ್ಬಂದಿಯೊಂದಿಗೆ ಅಲ್ಲಿ ಸಿಕ್ಕಿಹಾಕಿಕೊಂಡರು. ಅನೇಕರು ಕ್ಲಬ್‌ನಿಂದ ಹೊರಗೆ ಓಡಿಹೋಗಿ ಬಚಾವಾದರು’ ಎಂದು ಫಾತಿಮಾ ಹೇಳಿದರು.
‘ಸ್ವಲ್ಪ ಹೊತ್ತಿನಲ್ಲೇ, ಇಡೀ ಕ್ಲಬ್‌ಗೆ ಬೆಂಕಿ ಆವರಿಸಿಕೊಂಡಿತು. ಅಲ್ಲಿ ತಾಳೆ ಗರಿಗಳಿಂದ ಮಾಡಲ್ಪಟ್ಟ ತಾತ್ಕಾಲಿಕ ಹಟ್ಗಳಿದ್ದವು. ನೋಡನೋಡುತ್ತಿದ್ದಂತೆ ಅವುಗಳಿಗೂ ಬೆಂಕಿ ಹೊತ್ತಿಕೊಂಡಿತು. ಈ ನೈಟ್ ಕ್ಲಬ್ ಅರ್ಪೋರಾ ನದಿಯ ಹಿನ್ನೀರಿನಲ್ಲಿದ್ದು, ಪ್ರವೇಶ ಮತ್ತು ನಿರ್ಗಮನದ ದಾರಿಗಳು ತುಂಬಾ ಕಿರಿದಾಗಿವೆ. ಕಿರಿದಾದ ಲೇನ್‌ಗಳಿಂದಾಗಿ ಕ್ಲಬ್‌ಗೆ ಅಗ್ನಿಶಾಮಕ ದಳದವರು ಬರುವುದು ಸಾಧ್ಯವಾಗಿಲ್ಲ. ಅಗ್ನಿಶಾಮಕದಳದ ಟ್ಯಾಂಕರ್‌ಗಳನ್ನು ಸ್ಥಳದಿಂದ ಸುಮಾರು 400 ಮೀಟರ್ ದೂರದಲ್ಲಿ ನಿಲ್ಲಿಸಬೇಕಾಗಿತ್ತು’ ಎಂದು ಅವರು ಘಟನೆಯನ್ನು ವಿವರಿಸಿದರು.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿ, ‘ಸ್ಥಳಕ್ಕಾಗಮಿಸಲು ದಾರಿ ಕಿರಿದಾಗಿತ್ತು. ಬೆಂಕಿಯನ್ನು ನಿಯಂತ್ರಿಸುವುದು ಸವಾಲಿನ ಕೆಲಸವಾಗಿತ್ತು. ಹೆಚ್ಚಿನವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಸಾವನ್ನಪ್ಪಿದವರು ನೆಲಮಹಡಿಯಲ್ಲಿ ಸಿಲುಕಿಕೊಂಡಿದ್ದರು’ ಎಂದು ಹೇಳಿದರು.
Discover more from Coastal Times Kannada
Subscribe to get the latest posts sent to your email.








Discussion about this post