ಮಂಗಳೂರು, ಡಿ.6 : ಮಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ಎಂಡಿಎಂಎ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಜಾಲದಲ್ಲಿ ಎರಡು ವರ್ಷಗಳ ಹಿಂದೆ ಬಂಧಿತರಾಗಿದ್ದ ಐವರು ಡ್ರಗ್ ಪೆಡ್ಲರ್ ಗಳಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 14 ವರ್ಷಗಳ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ.
ಕಾಸರಗೋಡಿನ ಉಪ್ಪಳದ ಮೊಹಮ್ಮದ್ ರಮೀಜ್ (24); ಕಾಸರಗೋಡಿನ ಉಪ್ಪಳದ ಮೊಹಿದ್ದೀನ್ ರಶೀದ್ (24); ಉಪ್ಪಳ ಮುಳಿಂಜದ ಅಬ್ದುಲ್ ರವೂಫ್ (35); ಮತ್ತು ತಮಿಳುನಾಡಿನ ಊಟಿ ಮೂಲದ ಸಬಿತಾ (25) ಶಿಕ್ಷೆಗೆ ಒಳಗಾದ ಆರೋಪಿಗಳು.
ಸುಡಾನ್ ಮೂಲದ ಪ್ರಜೆ, ಬೆಂಗಳೂರು ಗುಂಟೂರು ಪಾಳ್ಯದಲ್ಲಿ ನೆಲೆಸಿದ್ದ ಲೂವಾ ಡೇನಿಯಲ್ ಜಸ್ಟಿನ್ ಬೌಲೋಗೆ 12 ವರ್ಷಗಳ ಕಠಿಣ ಶಿಕ್ಷೆ ಮತ್ತು 1.25 ಲಕ್ಷ ದಂಡ ವಿಧಿಸಲಾಗಿದೆ. ಕಾಸರಗೋಡು ಜಿಲ್ಲೆಯ ಉಪ್ಪಳ ನಿವಾಸಿ ಮಹಮ್ಮದ್ ರಮೀಜ್ ಗೆ 14 ವರ್ಷಗಳ ಕಠಿಣ ಶಿಕ್ಷೆ ಮತ್ತು 1.45 ಲಕ್ಷ ದಂಡ ವಿಧಿಸಲಾಗಿದೆ. ಕಾಸರಗೋಡು ಮಂಜಿಲ್ ಕುನ್ನಿಲ್ ನಿವಾಸಿ ಮೊಯಿದೀನ್ ರಶೀದ್ ಗೆ 12 ವರ್ಷಗಳ ಶಿಕ್ಷೆ ಮತ್ತು 1.25 ಲಕ್ಷ ದಂಡ ವಿಧಿಸಿದೆ. ಉಪ್ಪಳ ನಿವಾಸಿ ಅಬ್ದುಲ್ ರವೂಫ್ ಗೆ 13 ವರ್ಷ ಕಠಿಣ ಶಿಕ್ಷೆ ಮತ್ತು 1.35 ಲಕ್ಷ ದಂಡ ವಿಧಿಸಿದೆ. ಇವರಿಗೆ ಸಹಕಾರ ನೀಡುತ್ತಿದ್ದ ಬೆಂಗಳೂರು ಮಡಿವಾಳ ನಿವಾಸಿ ಸಬಿತಾ ಅಲಿಯಾಸ್ ಚಿಂಚುಗೆ 12 ವರ್ಷ ಶಿಕ್ಷೆ ಮತ್ತು 1.25 ಲಕ್ಷ ದಂಡ ವಿಧಿಸಿದೆ.
ಈ ಐವರೂ ಮಾದಕ ಪದಾರ್ಥ ಸೇವಿಸಿದ್ದು ಸಾಬೀತಾಗಿದ್ದು, ಈ ಸಂಬಂಧ ಎಲ್ಲರಿಗೂ ಹೆಚ್ಚುವರಿಯಾಗಿ 6 ತಿಂಗಳ ಕಠಿಣ ಸಜೆ ಹಾಗೂ ತಲಾ 10 ಸಾವಿರ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ 1 ತಿಂಗಳ ಕಠಿಣ ಸಜೆ ಅನುಭವಿಸಬೇಕು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.
2022ರ ಜೂನ್ 14ರಂದು ಮಂಗಳೂರು ಸಿಸಿಬಿ ಪೊಲೀಸರು ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಡೆಸಿ, ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದ ಪೆಡ್ಲರ್ ಗಳನ್ನು ಅರೆಸ್ಟ್ ಮಾಡಿದ್ದರು. ಈ ವೇಳೆ, 125 ಗ್ರಾಮ್ ಎಂಡಿಎಂಎ ವಶಕ್ಕೆ ಪಡೆಯಲಾಗಿತ್ತು. ಈ ಬಗ್ಗೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಚಾರ್ಜ್ ಶೀಟ್ ಹಾಕಲಾಗಿತ್ತು. ಒಂದೂವರೆ ವರ್ಷಗಳಿಂದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳ ಆರೋಪ ಸಾಬೀತಾಗಿದೆ ಎಂದು ಹೇಳಿದ್ದು ಇದೀಗ ಶಿಕ್ಷೆ ಪ್ರಮಾಣವನ್ನು ಘೋಷಿಸಿದೆ.
ಶನಿವಾರ ನಡೆದ ವಿಚಾರಣೆಯಲ್ಲಿ, ಸರ್ಕಾರಿ ಅಭಿಯೋಜಕ ಜೂಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ಅವರು ರಾಜ್ಯದ ಪರವಾಗಿ ವಾದ ಮಂಡಿಸಿದರು. ಸಲ್ಲಿಕೆಗಳ ನಂತರ, ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಸವರಾಜ್ ಅವರು ತೀರ್ಪು ನೀಡಿದರು.
Discover more from Coastal Times Kannada
Subscribe to get the latest posts sent to your email.








Discussion about this post