ಮಂಗಳೂರು: ಮನೆ ಎದುರು ಕಸ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಿದ ಘಟನೆ ನಗರದ ಅತ್ತಾವರದಲ್ಲಿ ನಡೆದಿದೆ. ಬಿಪುಲ್ ಕುಮಾರ್ ಎಂಬುವರು ಹಲ್ಲೆಗೊಳಗಾದವರು. ದೃಶ್ಯ ಸಿಸಿಟಿವಿ ಮತ್ತು ಮೊಬೈಲ್ನಲ್ಲಿ ಸೆರೆಯಾಗಿದೆ.
ಅತ್ತಾವರದ 7ನೇ ಕ್ರಾಸ್ನಲ್ಲಿರುವ ಅಪಾರ್ಟ್ಮೆಂಟ್ವೊಂದರಲ್ಲಿ ಬಿಪುಲ್ ಕುಮಾರ್ ವಾಸವಾಗಿದ್ದು, ಇವರು ಮನೆ ಮುಂದೆ ಕಸ ಹಾಕಿದ್ದಾರೆ ಎಂದು ಆರೋಪಿಸಿ ಅಕ್ಕಪಕ್ಕದ ಮನೆಯವರು ಗಲಾಟೆ ಮಾಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ಬಿಶ್ವನಾಥ್, ಮಧುಸೂದನ್, ಅಮೃತ, ರಾಜೇಶ್ ಮತ್ತು ನಿರಾಜ್ ಎಂಬವರು ಬಿಪುಲ್ ಕುಮಾರ್ ಹಲ್ಲೆ ನಡೆಸಿದ್ದಾರೆ. ಗಲಾಟೆ ಬಿಡಿಸಲು ಬಂದ ಬಿಪುಲ್ ಕುಮಾರ್ ಅವರ ಪತ್ನಿ ಮತ್ತು ಮಗಳ ಮೇಲೂ ಸಹ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಘಟನೆಯಿಂದ ಬಿಪುಲ್ ಕುಮಾರ್ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 147, 148, 323, 324, 307, 448, ಆರ್/ಡಬ್ಲ್ಯು 149 ಮತ್ತು 2ಎ ಕೆಪಿಡಿಎಲ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಬಿಶ್ವನಾಥ್ ಮತ್ತು ಮಧುಸೂದನ್ನನ್ನು ಬಂಧಿಸಿದ್ದಾರೆ, ಪ್ರಕರಣದ ಇತರ ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.