ಮಂಗಳೂರು: ಮಂಗಳೂರು ನಗರ ವಿಶ್ವದಲ್ಲೇ ಗುರುತಿಸಲ್ಪಟ್ಟಿದೆ. ವಿಶ್ವದ ಶ್ರೇಷ್ಟ ನಗರವಾಗಿ ತಲೆ ಎತ್ತಿ ನಿಲ್ಲುವ ಎಲ್ಲಾ ಸದಾವಕಾಶಗಳು ಮಂಗಳೂರಿಗಿದೆ. ಸರ್ವ ಸಂಪರ್ಕ ಕೇಂದ್ರವಾದ ಮಂಗಳೂರು, ಜಗತ್ತಿನ ವಾಣಿಜ್ಯ ನಗರವಾಗಿ ಪರಿವರ್ತನೆಯಾಗುವ ಎಲ್ಲಾ ಅವಕಾಶಗಳು ತೆರೆದಿವೆ. ಅದಕ್ಕೆ ಸರಕಾರದ ಮತ್ತು ರಾಜಕೀಯ ದೂರದೃಷ್ಟಿತ್ವ ಹಾಗೂ ಇಚ್ಛಾಶಕ್ತಿ ಪ್ರದರ್ಶನವಾಗಬೇಕಿದೆ. ಇದಕ್ಕೆ ಪೂರಕವಾಗಿ ಮಂಗಳೂರು ಶಾಂತಿಯ ತಾಣವಾಗಬೇಕು. ಹಾಗೂ ಕಾನೂನು ವ್ಯವಸ್ಥೆ ಪರಿಣಾಮಕಾರಿಯಾಗಿರಬೇಕು ಎಂದು ಜೆ.ಆರ್. ಲೋಬೊ ಹೇಳಿದರು.
ಮಾನ್ಯ ಶಾಸಕ ಕಾಮತ್ ರವರು ತಾನು ಅಭಿವೃದ್ಧಿ ಮಾಡಿದ್ದೇನೆಂದು, ಪದೇ ಪದೇ ಹೇಳುತ್ತಿದ್ದಾರೆ. ಅಭಿವೃದ್ಧಿ ಏನು ಎಂಬುದರ ಅರ್ಥ ವ್ಯಾಪ್ತಿಯನ್ನು ಜನರು ವಿಶ್ಲೇಷಣೆ ಮಾಡಬೇಕಿದೆ. ಅವರ ಅವಧಿಯಲ್ಲಿ ಯಾವುದೇ ಹೊಸ ಯೋಜನೆಗಳು ಜಾರಿಗೆ ಆಗಿಲ್ಲ. ಕೇವಲ ರಸ್ತೆ ಮತ್ತು ಒಂದಿಷ್ಟು ಮೂಲಭೂತ ಸೌಕರ್ಯಗಳ ಅಭಿವೃಧಿ ಮಾತ್ರ ಆಗಿದೆ. ಅದನ್ನು ಮಹಾನಗರ ಪಾಲಿಕೆಯ ಕಾರ್ಪೊರೇಟರ್‌ಗಳೇ ನಿಭಾಯಿಸಬಲ್ಲರು. ಶಾಸಕನಾದವನು ರಾಜ್ಯ, ರಾಷ್ಟ್ರ, ಮತ್ತು ಅಂತರರಾಷ್ಟ್ರೀಯ ಬಂಡವಾಳವನ್ನು ಆಕರ್ಷಿಸಬೇಕು. ತನ್ಮೂಲಕ ಅಭಿವೃದ್ಧಿಯನ್ನು ಸಾಧಿಸಬೇಕು.
ಕುಡಿಯುವ ನೀರಿನ ತೆರಿಗೆ, ಉದ್ದಿಮೆ ಪರವಾನಿಗೆ ಶುಲ್ಕ, ಘನ ತ್ಯಾಜ್ಯ ಶುಲ್ಕ, ಆಸ್ತಿ ತೆರಿಗೆ ಶುಲ್ಕ ಅತೀ ಹೆಚ್ಚು ಮಾಡಲಾಗಿದೆ. ತನ್ಮೂಲಕ ಜನರನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ. ಮೂಡಾದ ಏಕನಿವೇಶನ ಶುಲ್ಕವನ್ನೂ ಹೆಚ್ಚಿಸಲಾಗಿದೆ. ತುಂಡು ಭೂಪರಿವರ್ತನೆಗೆ ಅವಕಾಶ ಇಲ್ಲದಿರುವುದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಕಚೇರಿಯಿಂದ ಕಚೇರಿಗೆ ಜನ ಅಲೆಯುವಂತೆ ಮಾಡಲಾಗಿದೆ. ನಗರದಲ್ಲಿ 2000ರೂಪಾಯಿಗೆ ಹೂಯಿಗೆ ಕೊಡುತ್ತೇನೆಂದು ಹೇಳಿದ ಬಿಜೆಪಿ ಇದೀಗ ಹೊಯಿಗೆಯೇ ಸಿಗದಂತೆ ಮಾಡಿ ಜನಸಾಮಾನ್ಯರು ಸಣ್ಣ ಮನೆಯನ್ನು ಕಟ್ಟಿಕೊಳ್ಳದಂತೆ ಮಾಡಿದೆ. ಹಂಪನ್ ಕಟ್ಟಾ ಸಿಗ್ನಲ್ ನಿಂದ ಕೆ.ಎಸ್.ರಾವ್ ರಸ್ತೆಗೆ ಹೋಗುವುದಕ್ಕೆ ಪದೇ ಪದೇ ಅಡಚಣೆ, ಟೌನ್ ಹಾಲ್ ಕಡೆಯಿಂದ ಆರ್‌ಟಿಒ ರಸ್ತೆ ಏಕಮುಖ ರಸ್ತೆಯಾಗಿ ಬದಲಾವಣೆ, ಟೌನ್ ಹಾಲ್ ಎದುರು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ ಅಂಡರ್‌ಪಾಸ್ ಸದುಪಯೋಗ ಮಾಡದಿರುವುದು, ಟ್ರಾಫಿಕ್ ಸಮಸ್ಯೆ, ಪಾರ್ಕಿಂಗ್ ಸಮಸ್ಯೆ ಹೀಗೆ ಬಿಜೆಪಿಯ ನಗರ ಪಾಲಿಕೆಯ ಆಡಳಿತ, ಜನ ವಿರೋಧಿಯಾಗಿದೆ.
ಈ ಡಬಲ್ ಇಂಜಿನ್ ಸರಕಾರ ಹೊಸ ಡಿಸಿ ಕಚೇರಿ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಕದ್ರಿ ಪಾರ್ಕ್‌ನಲ್ಲಿ ಅಪಾರ ಹಣ ಖರ್ಚು ಮಾಡಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದಂತೆ ಮಾಡಿದೆ. ಸ್ಮಾರ್ಟ್ ಸಿಟಿ ಹಣವನ್ನು ಕೇವಲ ಕಾಂಕ್ರಿಟ್ ರಸ್ತೆಗೆ ಸುರಿದು 40% ಭ್ರಷ್ಟಾಚಾರ ಮಾಡಿದೆ. ಪದೇ ಪದೇ ಕಾಂಕ್ರಿಟ್ ರಸ್ತೆಯನ್ನು ಅಗೆದು ಸಾರ್ವಜನಿಕರ ತೆರಿಗೆ ಹಣವನ್ನು ಹಾಳು ಮಾಡಿದೆ. ಮೀನುಗಾರಿಕಾ ಬಂದರು ಅಭಿವೃದ್ಧಿಗೆ ಯಾವುದೇ ಪ್ರಯತ್ನ ಮಾಡಿಲ್ಲ. ಸೆಂಟ್ರಲ್ ಮಾರುಕಟ್ಟೆಯನ್ನು ಕೆಡಹುವ ಮೊದಲು ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡದೆ ನೂರಾರು ಕುಟುಂಬಗಳು ಬೀದಿಗೆ ಬಂದಂತಾಗಿದೆ. ಕೊಲೋನಾ ಸಂದರ್ಭದಲ್ಲಿ ಬೇಕಾಬಿಟ್ಟಿ ನಿಯಮಗಳು ಜನಸಾಮಾನ್ಯರನ್ನು ಹಾಗೂ ವ್ಯಾಪಾರಿ ವರ್ಗದವರನ್ನು ಸಂಕಷ್ಟಕ್ಕೆ ತಳ್ಳುವಂತೆ ಮಾಡಿದೆ. ಈ ಎಲ್ಲಾ ವಿಷಯಗಳ ಕುರಿತು ಮಾನ್ಯ ಶಾಸಕರು ಮತದಾರರಿಗೆ ಉತ್ತರಿಸಲೇ ಇಲ್ಲ. ಒಟ್ಟಾರೆ ಮುಂಗಳೂರು ನಗರ ನಿವಾಸಿಗಳ ಬದುಕನ್ನು ಬಿಜೆಪಿ ನರಕವನ್ನಾಗಿಸಿದೆ. ಇದನ್ನೇ ಅಭಿವೃದ್ಧಿ ಎಂದು ಮಾನ್ಯ ಶಾಸಕರು ಹೇಳುತ್ತಿದ್ದಾರೆ.
ನಾನು ಮೊದಲ ಬಾರಿಗೆ ಶಾಸಕನಾಗಿದ್ದಾಗ ಹಲವು ಚಿಂತನೆಗಳೊಂದಿಗೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಮಂಗಳೂರು ನಗರವನ್ನು ಸೇರ್ಪಡಿಸಿದ್ದು, ಜಲಸಿ ಯೋಜನೆಯನ್ನು ಜಾರಿಗೆ ತಂದದ್ದು, ಮಂಗಳೂರಿಗೆ ಹೊಸತನ ನೀಡಬೇಕು ಎಂಬ ಕಾರಣಕ್ಕೆ ದೇಶದಲ್ಲೇ ಮೊದಲ 3ಡಿ ಪ್ಲಾನಿಟೋರಿಯಂ ಪ್ರಾರಂಭಿಸಿದೆ. ನಮ್ಮ ಭಾಗದ ಅನ್ನದ ತಟ್ಟೆಯೆಂದೇ ಪ್ರಸಿದ್ಧವಾದ ಮೀನುಗಾರಿಕೆಗೆ ಪ್ರಥಮ ಆದ್ಯತೆ ನೀಡಲು ಲಕ್ಷದ್ವೀಪದಿಂದ 400ಕೋಟಿ ಬಂಡವಾಳ ತರಲು ಯತ್ನಿಸಿದೆ. ನಾನು ಚುನಾವಣೆಯಲ್ಲಿ ಸೋತ ಹಿನ್ನಲೆಯಲ್ಲಿ ಆನೇಕ ಯೋಜನೆಗಳು ತಡೆಹಿಡಿಯಲ್ಪಟ್ಟಿದೆ, ಅದು ಪುನಃ ಕೈಗೂಡಬೇಕಾದರೆ ಮಂಗಳೂರಿನ ಮತದಾರರು ನನ್ನನ್ನು ಮತ್ತೊಮ್ಮೆ ಆಶೀರ್ವಾದಿಸಬೇಕಿದೆ. ಇದರ ಜೊತೆಗೆ ನಗರದ ದೊಡ್ಡ ಸಮಸ್ಯೆ, ಯುವಕರಲ್ಲಿನ ನಿರುದ್ಯೋಗ, ಅಂತರರಾಷ್ಟ್ರೀಯ ಕ್ರೀಡಾಗ್ರಾಮ, ಐಟಿ ಪಾರ್ಕ್, ಮೀನುಗಾರಿಕಾ ಅಭಿವೃದ್ಧಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಯಿಂದ ಮಾತ್ರ ನಿರುದ್ಯೋಗ ಸಮಸ್ಯೆ ನಿವಾರಣೆ ಆಗುತ್ತದೆ. ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ವಿಫುಲ ಅವಕಾಶವು ಇದೆ. ಜಗತ್ತಿನ ಬಂಡವಾಳ ಆಕರ್ಷಣೆಗೆ ಸುಸಜ್ಜಿತ ರಸ್ತೆ, ನದಿ ತಟದಲ್ಲಿ ಸಂಪರ್ಕ ರಸ್ತೆ ಅಗತ್ಯವಿದೆ.
ಮಂಗಳೂರಿನ ನಗರದಲ್ಲಿ ಕಾನೂನು ವ್ಯವಸ್ಥೆಯನ್ನು ಬಲಪಡಿಸುವುದು ಅಗತ್ಯವಿದೆ. ಯುವಕರನ್ನು ದಾರಿ ತಪ್ಪಿಸುವ ವಿವಿಧ ಜೂಜು ಕೇಂದ್ರಗಳನ್ನು ನನ್ನ ಅವಧಿಯಲ್ಲಿ ನಿಲ್ಲಿಸಲಾಗಿತ್ತು. ಅದು ಕಳೆದ 5 ವರ್ಷಗಳಲ್ಲಿ ಮತ್ತೆ ನಗರದಾದ್ಯಂತ ವ್ಯಾಪಿಸಿದೆ. ಇಂತಹುದ್ದಕ್ಕೆ ಕಡಿವಾಣ ಹಾಕುವುದು, ನನ್ನ ಉದ್ದೇಶವಾಗಿದೆ. ಹಾಗೂ ಮಂಗಳೂರನ್ನು “ಶೈಕ್ಷಣಿಕ ಕಾಶಿ” ಎಂಬ ಪಾವಿತ್ರ್ಯ ನಗರವನ್ನಾಗಿ ಉಳಿಸಬೇಕಾಗಿದೆ. ಜೊತೆಗೆ ಕರಾವಳಿಯ ತುಳು ಭಾಷೆ ಸಂಸ್ಕೃತಿಯ ಅಭಿವೃದ್ಧಿಗೆ ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನು ಮಾಡಲು ನಿರ್ಧರಿಸಿದ್ದೇನೆ.
ಬೆಲೆ ಏರಿಕೆ 40% ಭ್ರಷ್ಟಾಚಾರ, ನಿರುದ್ಯೋಗ, ಆಡಳಿತ ವೈಫಲ್ಯ ಇತ್ಯಾದಿಯಿಂದ ಜನರು ರೋಸಿ ಹೋಗಿದ್ದು, ಮತದಾರರು ಕಾಂಗ್ರೆಸ್ ಬೆಂಬಲಕ್ಕೆ ನಿಲ್ಲುವ ವಾತಾವರಣ ನಿರ್ಮಾಣವಾಗಿದೆ. ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕೆಂದು ಎಂದು ಜೆ.ಆರ್. ಲೋಬೊ ಹೇಳಿದರು.
Discover more from Coastal Times Kannada
Subscribe to get the latest posts sent to your email.







Discussion about this post