ಮಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿಯಿರುವ ಎಂಬಿಬಿಎಸ್ ವೈದ್ಯರ ಹುದ್ದೆಗಳಿಗೆ ವಾರದ ಒಳಗಾಗಿ ನೇಮಕಾತಿ ಪ್ರಕ್ರಿಯೆ ಮುಗಿಸದಿದ್ದರೆ, ಸಂಬಂಧಪಟ್ಟ ಜಿಲ್ಲಾ ಆರೋಗ್ಯ ಅಧಿಕಾರಿಗಳನ್ನು (ಡಿಹೆಚ್‌ಒ) ತಕ್ಷಣವೇ ಅಮಾನತು ಮಾಡಲಾಗುವುದು ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ.
ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಭಾನುವಾರ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸದ್ಯ ರಾಜ್ಯದಲ್ಲಿ ಸುಮಾರು 900 ಎಂಬಿಬಿಎಸ್ ವೈದ್ಯರ ಕೊರತೆಯಿದ್ದು, ಖಾಲಿಯಿರುವ ಖಾಯಂ ಹುದ್ದೆಗಳ ಭರ್ತಿಗೆ ಸರ್ಕಾರ ಸಿದ್ಧತೆಯಲ್ಲಿದೆ. ಈ ನಡುವೆ, ಎಂಬಿಬಿಎಸ್ ಪದವಿ ಮುಗಿಸಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಲು ಇಚ್ಛಿಸುವ ವೈದ್ಯರಿಗೆ ತಕ್ಷಣವೇ ಉದ್ಯೋಗಾವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಆಸಕ್ತ ವೈದ್ಯರು ತಮ್ಮ ಜಿಲ್ಲೆಯ ಡಿಹೆಚ್‌ಒ ಅವರಿಗೆ ಅರ್ಜಿ ಸಲ್ಲಿಸಬೇಕು. ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳ ಸಹಿ ಪಡೆದು ಕೇವಲ ಒಂದು ವಾರದಲ್ಲಿ ನೇಮಕಾತಿ ಆದೇಶ ನೀಡಬೇಕು. ಇದರಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇನ್ನುಳಿದಂತೆ, ಹೊಸದಾಗಿ ಸೇರ್ಪಡೆಯಾಗುವ ಎಂಬಿಬಿಎಸ್ ವೈದ್ಯರಿಗೆ ಆರಂಭದಲ್ಲೇ ಮಾಸಿಕ 60 ಸಾವಿರ ರೂಪಾಯಿ ವೇತನ ನಿಗದಿಪಡಿಸಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ದ.ಕ ಜಿಲ್ಲಾ ಉಸ್ತುವಾರಿ ಆಗುತ್ತೀರಾ ಎಂಬ ಪ್ರಶ್ನೆಗೆ, ಆ ಬಗ್ಗೆ ಮುಖ್ಯಮಂತ್ರಿ ತೀರ್ಮಾನ ಮಾಡ್ತಾರೆ. ಕೋಲಾರ, ಉಡುಪಿ ಹಾಗೂ ಮಂಗಳೂರಿನಲ್ಲಿ ಹಿಂದೆ ಉಸ್ತುವಾರಿ ಸಚಿವನಾಗಿದ್ದೆ. ಹಾಗಾಗಿ ಮಂಗಳೂರಿನ ಉಸ್ತುವಾರಿ ಬೇರೆಯವರಿಗೆ ಕೊಟ್ಟರೆ ಕೊಡಲಿ ಅಂದಿದ್ದೇನೆ. ನನಗೆ ಹೊಸ ಜಿಲ್ಲೆ ಕೊಟ್ಟರೆ ಅಲ್ಲಿನ ಅನುಭವ ಸಿಗುತ್ತೆ ಅನ್ನುವ ಹಂಬಲ ಇದೆ. ಮುಖ್ಯಮಂತ್ರಿಗಳು ಯಾವ ಜಿಲ್ಲೆ ಕೊಡ್ತಾರೋ ಅದನ್ನು ಸ್ವೀಕರಿಸುತ್ತೇನೆ ಎಂದರು.
ಸರ್ಕಾರಿ ಆಸ್ಪತ್ರೆಯನ್ನು ಖಾಸಗಿಯವರಿಗೆ ಗುತ್ತಿಗೆ ವಹಿಸುವ ಕುರಿತ ಪ್ರಶ್ನೆಗೆ, ಒಂದೂವರೆ ಲಕ್ಷ ಕೊಟ್ಟರೂ ಬರಲ್ಲ ಅಂದ್ರೆ ಅವರನ್ನು ಕುತ್ತಿಗೆ ಹಿಡಿದು ಎಳೆತರೋಕೆ ಆಗಲ್ಲ ತಾನೇ.. ಉಚಿತವಾಗಿ ಜನರಿಗೆ ಆರೋಗ್ಯ ಸೇವೆ ದೊರಕಿಸಲು ಖಾಸಗಿ ವೈದ್ಯರ ಸೇವೆ ಪಡೆಯುತ್ತಿದ್ದೇವೆ. ಉಚಿತವಾಗಿ ಸೇವೆ ನೀಡುತ್ತಾರೆಂದರೆ ಬೇಡ ಎನ್ನುವುದೇಕೆ. ನಮ್ಮಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಡ, ಸೌಲಭ್ಯಗಳಿದ್ದರೂ ಗೈನಕಾಲಜಿಸ್ಟ್, ಅನಸ್ತೇಶಿಯಾ ಇನ್ನಿತರ ನುರಿತ ವೈದ್ಯರು ಇಲ್ಲ. ಅಂತಹ ವೈದ್ಯರನ್ನು ಖಾಸಗಿಯಿಂದ ಪಡೆದು ಜನರಿಗೆ ಸೇವೆ ನೀಡುತ್ತೇವೆ. ಅವರಿಗೆ ಸಂಬಳ ಖಾಸಗಿಯವರೇ ನೀಡುತ್ತಾರೆ ಎಂದು ಸಚಿವ ಖಾದರ್ ಹೇಳಿದರು.
Discover more from Coastal Times Kannada
Subscribe to get the latest posts sent to your email.







Discussion about this post