ಮಂಗಳೂರು, ಜುಲೈ 26: ಮಂಗಳೂರಿನಲ್ಲಿ ಸಮಾಜ ಸೇವೆ ಮಾಡುವುದಾಗಿ ಬಿಂಬಿಸಿಕೊಂಡಿದ್ದ ವ್ಯಕ್ತಿಯೋವರ್ವ ಆ್ಯಂಬುಲೆನ್ಸ್ನಲ್ಲೇ ಡ್ರಗ್ಸ್ ದಂಧೆ ಮಾಡುತ್ತಿದ್ದ ವಿಚಾರ ಬಹಿರಂಗಗೊಂಡಿದೆ. ಜಲೀಲ್ ಬಾಬಾ ಎಂಬಾತ ಆರೋಪಿಯಾಗಿದ್ದು, ಈತ ತನ್ನ ಆ್ಯಂಬುಲೆನ್ಸ್ ಅನ್ನೇ ಡ್ರಗ್ ಪೂರೈಕೆಯ ಅಡ್ಡೆ ಮಾಡಿಕೊಂಡಿದ್ದ ಎಂಬುದು ಗೊತ್ತಾಗಿದೆ. ಜೂನ್ 25ರಂದು ಮಂಗಳೂರಿನಲ್ಲಿ ಅಣ್ಣಪ್ಪ ಸ್ವಾಮಿ ಆಲಿಯಾಸ್ ಮನು ಎಂಬಾತನನ್ನು ಎಂಡಿಎಂಎ ಸಹಿತ ಬಂಧಿಸಲಾಗಿತ್ತು. ಈ ವೇಳೆ ಪೊಲೀಸರಿಗೆ ಬಾಗಲಕೋಟೆಯ ಡ್ರಗ್ ಲಿಂಕ್ ಬಗ್ಗೆ ಮಾಹಿತಿ ದೊರೆತಿತ್ತು. ಹೀಗಾಗಿ ಜುಲೈ 15ರಂದು ಬಾಗಲಕೋಟೆಯ ಲಾಡ್ಜ್ ಮೇಲೆ ದಾಳಿ ನಡೆಸಿದ್ದ ಮಂಗಳೂರು ಸಿಸಿಬಿ ಪೊಲೀಸರು, ಅಲ್ಲಿ ಮೂವರನ್ನು ಬಂಧಿಸಿ 5 ಕೋಟಿ ಮೌಲ್ಯದ 5 ಕೆಜಿ ಡ್ರಗ್ಸ್ ವಶ ಪಡಿಸಿಕೊಂಡಿದ್ದರು. ಈ ವೇಳೆ ಬೆಳ್ತಂಗಡಿಯ ಮಹಮ್ಮದ್ ಅಲ್ಫಾಜ್, ಮಹಮ್ಮದ್ ಮುಸ್ತಾಫಾ ಅರೆಸ್ಟ್ ಆಗಿದ್ದರು. ಬಂಧಿತ ಮೂವರು ಲೋಕಲ್ ಪೆಡ್ಲರ್ ಜಲೀಲ್ ಬಾಬಾಗೆ ಡ್ರಗ್ಸ್ ಒದಗಿಸುತ್ತಿದ್ದ ಬಗ್ಗೆ ಸ್ಪೋಟಕ ಮಾಹಿತಿ ತನಿಖೆ ವೇಳೆ ಲಭ್ಯವಾಗಿದ್ದು, ಕಳೆದ 6 ದಿನಗಳಿಂದ ಮೊಬೈಲ್ ಸ್ವಿಚ್ಚ್ ಆಫ್ ಮಾಡಿಕೊಂಡು ಆ್ಯಂಬುಲೆನ್ಸ್ ಚಾಲಕ ಜಲೀಲ್ ಬಾಬಾ ಎಸ್ಕೇಪ್ ಆಗಿರೋ ಬಗ್ಗೆಯೂ ಮಾಹಿತಿ ನೀಡಲಾಗಿದೆ.
ಮಂಗಳೂರು ನಗರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಮಂಗಳೂರಿನ ಪ್ರಿನ್ಸಿಪಲ್ ಸೆಶನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಆರೋಪಿಯಾಗಿ ಜಲೀಲ್ ಬಾಬಾ ಎಂಬವನ ಹೆಸರನ್ನು ಉಲ್ಲೇಖಿಸಿದ್ದು, ದಸ್ತಗಿರಿಗೆ ಬಾಕಿ ಎಂದು ವರದಿ ಸಲ್ಲಿಸಿದ್ದಾರೆ. ಇಂದಬೆಟ್ಟು ಗ್ರಾಮದ ಮೊಹಮ್ಮದ್ ಅಲ್ತಾಫ್ (28), ಉಜಿರೆ ಹಳೆಪೇಟೆಯ ಮೊಹಮ್ಮದ್ ಮುಸ್ತಫಾ (28), ಇಂದಬೆಟ್ಟು ಗ್ರಾಮದ ದೇವನಾರಿ ನಿವಾಸಿ ಅಲ್ಫಾಜ್ ಮತ್ತು ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎಂಬವರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಈ ಪೈಕಿ ಮನುವನ್ನು ಜೈಲಿಗಟ್ಟಲಾಗಿದ್ದು ಉಳಿದ ಆರೋಪಿಗಳ ವಿರುದ್ಧವೂ ಕ್ರಮ ಜರುಗಿಸಲಾಗಿದೆ.
ಸಿಸಿಬಿ ಪೊಲೀಸರು ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಸಮೀಪದ ಮನೆಯಲ್ಲಿ ನಡೆಸಿದ ದಾಳಿಯಲ್ಲಿ ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎಂಬಾತನಿಂದ 1.50 ಲಕ್ಷ ರೂ. ಮೌಲ್ಯದ 15.17 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದರು. ಈ ಪ್ರಕರಣದ ತನಿಖೆ ವೇಳೆ ಮಾದಕ ವಸ್ತು ಪೂರೈಕೆ ಜಾಲದ ಬಗ್ಗೆ ಮಾಹಿತಿ ಪಡೆದ ಪೊಲೀಸರು, ದೆಹಲಿಯಿಂದ ಎಂಡಿಎಂಎ ಖರೀದಿಸಿಕೊಂಡು ಬೆಂಗಳೂರಿಗೆ ಸಾಗಿಸುತ್ತಿದ್ದ ಜಾಲದ ಬಗ್ಗೆ ಸುಳಿವು ಪಡೆದರು.
ಜುಲೈ 15 ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ರಾಯಲ್ ಇನ್ ಲಾಡ್ಜ್ ಮೇಲೆ ದಾಳಿ ನಡೆಸಿ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ಅಂದಾಜು ಐದೂವರೆ ಕೋಟಿ ರೂ. ಮೌಲ್ಯದ ಒಟ್ಟು 5 ಕೆಜಿ 196 ಗ್ರಾಂ ಎಂಡಿಎಂಎ, ಕಾರು, ಬ್ಯಾಗ್ ಮತ್ತು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಕಾರಿನ ಮೂಲಕ ದೆಹಲಿಯಿಂದ ಎಂಡಿಎಂಎ ತಂದು, ಬೆಂಗಳೂರನ್ನು ಕೇಂದ್ರವಾಗಿಸಿಕೊಂಡು ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳದ ವಿವಿಧ ಭಾಗಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದರು ಎಂದು ಎನ್ನಲಾಗಿದೆ. ಆರೋಪಿಗಳು ಬಾಯಿ ಬಿಟ್ಟಂತೆ ಜಲೀಲ್ ಬಾಬಾ ಎಂಬಾತ ತನ್ನ ಆಂಬ್ಯುಲೆನ್ಸ್ ವಾಹನವನ್ನು ಇದಕ್ಕಾಗಿ ಒಳಕೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಪ್ರಕರಣದಲ್ಲಿ ಕಾಣಿಸಿಕೊಂಡಂತೆ ಇದೀಗ ಬೆಳ್ತಂಗಡಿಯ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ ಕಳೆದ 6 ದಿನಗಳಿಂದ ತಲೆಮರೆಸಿಕೊಂಡಿದ್ದಾನೆ. ಮೊಬೈಲ್ ಪೋನ್ ಸ್ವಿಚ್ಚ್ ಆಫ್ ಮಾಡಲಾಗಿದ್ದು ತುರ್ತು ಆಂಬ್ಯುಲೆನ್ಸ್ ಕರೆಯನ್ನೂ ಸ್ವೀಕರಿಸುತ್ತಿಲ್ಲ. ಪೊಲೀಸರು ಪತ್ತೆಗಾಗಿ ಜಾಲ ಬೀಸಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಮಾಡಿ ನಾಪತ್ತೆಯಾಗಿರುವ ಜಲೀಲ್ ಪತ್ತೆಗಾಗಿ ವಿಶೇಷ ಪೊಲೀಸ್ ಪಡೆ ರಚಿಸಲಾಗಿದೆ. ಅಂದಹಾಗೆ, ಜಲೀಲ್ ತನ್ನ ಬಾಬಾ ಹೆಸರಿನ ಆಂಬುಲೆನ್ಸ್ ಇಟ್ಟುಕೊಂಡಿದ್ದು ಬೆಳ್ತಂಗಡಿಯಿಂದ ಮಂಗಳೂರಿಗೆ ಅತಿ ವೇಗದಲ್ಲಿ ಚಲಾಯಿಸಿ ನೂರಾರು ರೋಗಿಗಳ ಜೀವ ಉಳಿಸಿದ್ದಾನೆ ಎಂಬ ಅರ್ಥದಲ್ಲಿ ರೀಲ್ಸ್ ಮಾಡಿ ಜಾಲತಾಣದಲ್ಲಿ ಹಾಕ್ಕೊಂಡು ಸಮಾಜಪರ ಚಟುವಟಿಕೆಯ ಸೋಗಿನಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದ.

Discover more from Coastal Times Kannada
Subscribe to get the latest posts sent to your email.







Discussion about this post