ಮಂಗಳೂರು, ಜುಲೈ 27: 12 ವರ್ಷಗಳ ಹಿಂದೆ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಮೀನಕಳಿಯ ಗಣೇಶ್ ಶಿಪ್ಪಿಂಗ್ ಗೋಡೌನ್ ಬಳಿ ಸಾರ್ವಜನಿಕ ಡಾಂಬಾರು ರಸ್ತೆಯಲ್ಲಿ ಮೀನಕಳಿಯ ನಿವಾಸಿ ಗಂಗಾಧರ ಪಾಂಗಾಳ ಎಂಬವರನ್ನು ಪೂರ್ವ ದ್ವೇಷದಿಂದ ಕೊಲೆಗೈದ ಮೂವರು ಸೋದರರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಸತೀಶ್ ಬೈಕಂಪಾಡಿ (58), ಹರೀಶ್ ಬೈಕಂಪಾಡಿ (60), ಭಾಸ್ಕರ್ ಬೈಕಂಪಾಡಿ (61) ಪುಷ್ಪರಾಜ್ (47) ಜೀವಾವಧಿ ಶಿಕ್ಷೆಗೊಳಗಾದ ಆರೋಪಿಗಳು. ಬೈಕಂಪಾಡಿಯ ಮೊಗವೀರ ಮಹಾಸಭಾದ ಅಧ್ಯಕ್ಷರಾಗಿದ್ದ ಸತೀಶ್ ಬೈಕಂಪಾಡಿಯು ಮೀನಕಳಿಯದ ಗೋಪಾಲ ಕೃಷ್ಣ ಭಜನಾ ಮಂದಿರದ ಪುನಃ ನಿರ್ಮಾಣ ಕಾರ್ಯ ಮತ್ತು ಹೈಸ್ಕೂಲ್ ಕಟ್ಟಡದ ನಿರ್ಮಾಣ ಕಾರ್ಯಗಳ ಅಧ್ಯಕ್ಷರಾಗಿದ್ದಾರೆ. ಸತೀಶ್ ಬೈಕಂಪಾಡಿ ಮತ್ತು ಭಾಸ್ಕರ್ ಸೇರಿ ಅದರ ವಂತಿಗೆ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿ ಮೊಗವೀರ ಮಹಾ ಸಭಾದ ಸದಸ್ಯತ್ವದಿಂದ ಅಮಾನತು ಪಡಿಸಲು ಗಂಗಾಧರ ಪಾಂಗಳ ಕಾರಣರಾಗಿದ್ದಾರೆ ಎಂದು ಅವರ ಮೇಲೆ ದ್ವೇಷ ಸಾಧಿಸಿದ್ದರು ಎಂದು ಆರೋಪಿಸಲಾಗಿತ್ತು.
ಗಂಗಾಧರ ಪಾಂಗಳರನ್ನು ಹತ್ಯೆ ಮಾಡುವ ಉದ್ದೇಶದಿಂದ 2014ರ ಮೇ ತಿಂಗಳಲ್ಲಿ ಬೈಕಂಪಾಡಿ – ಮೀನಕಳಿಯ ರಸ್ತೆಯ ಬದಿಯ ಭಾಸ್ಕರ್ಗೆ ಸೇರಿದ ಮುಚ್ಚಿದ ಗೋದಾಮಿನ ಬಳಿ ಪರಿಚಿತ ಪುಷ್ಪರಾಜ್ ಎಂಬಾತನೊಂದಿಗೆ ಸೇರಿ ಸಂಚು ರೂಪಿಸಿದ್ದು, ಗಂಗಾಧರ್ರ ಚಲನವಲನಗಳ ಬಗ್ಗೆ ಸತೀಶ್ ಬೈಕಂಪಾಡಿ, ಭಾಸ್ಕರ, ಹರೀಶ್ ಬೈಕಂಪಾಡಿ, ಮಾಹಿತಿ ಸಂಗ್ರಹಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಬೈಕಂಪಾಡಿ ಮೀನಕಳಿಯ ರಸ್ತೆಯಲ್ಲಿ ಗಂಗಾಧರ ಪಾಂಗಾಳ ಸವಾರಿ ಮಾಡುತ್ತಿದ್ದ ಸ್ಕೂಟರಿನ ಹಿಂಬದಿಗೆ ಕಾರನ್ನು ಢಿಕ್ಕಿ ಹೊಡೆಸಿ ಆರೋಪಿ ಪುಷ್ಪರಾಜ್ ಪರಾರಿಯಾಗಿದ್ದ. ಹತ್ಯೆ ಆಗಿರುವುದನ್ನು ಖಚಿತಪಡಿಸಲು ಸತೀಶ್ ಬೈಕಂಪಾಡಿ ಮತ್ತು ಹರೀಶ್ ಬೈಕಂಪಾಡಿ ಹಾಗೂ ಭಾಸ್ಕರ್ ಪ್ರತ್ಯೇಕವಾಗಿ ಎರಡು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು. ಅಲ್ಲದೇ ಸಾಕ್ಷ್ಯ ನಾಶ ಮಾಡುವ ಸಲುವಾಗಿ ಹತ್ಯೆ ಮಾಡಲು ಉಪಯೋಗಿಸಿದ ವಾಹನವನ್ನು ಅತ್ತಾವರದ ಗ್ಯಾರೇಜಿನಲ್ಲಿ ಸುಳ್ಳು ಹೇಳಿ ರಿಪೇರಿಗಾಗಿ ಇಟ್ಟಿದ್ದರು. ಆರಂಭದಲ್ಲಿ ಇದೊಂದು ಅಪಘಾತ ಎಂದು ಪ್ರಕರಣ ದಾಖಲಾಗಿತ್ತು. ಆದರೆ, ಬಳಿಕ ಪೂರ್ವ ನಿಯೋಜಿತ ಅಪಘಾತ ಹತ್ಯೆ ಎಂದು ಶಂಕಿಸಲಾಗಿತ್ತು.
ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ನಿರೀಕ್ಷಕ ಎನ್.ಆರ್. ಮುಕ್ರಿ ಪ್ರಾಥಮಿಕ ತನಿಖೆಯನ್ನು ನಡೆಸಿದ್ದರು. ಬಳಿಕ ತನಿಖಾಧಿಕಾರಿಗಳಾದ ರವೀಶ್ ನಾಯಕ್, ಭಾಸ್ಕರ ರೈ ತನಿಖೆ ನಡೆಸಿದ್ದು, ಲೋಕೇಶ್ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿ ವಾದ ಪ್ರತಿವಾದಗಳನ್ನು ಆಲಿಸಿದ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶ ಜಗದೀಶ ವಿ.ಎನ್. ಜು.21ರಂದು ಆರೋಪಿತರನ್ನು ತಪ್ಪಿತಸ್ಥರು ಎಂದು ಪ್ರಕಟಿಸಿ ಜು.27ರಂದು ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ. ಸರಕಾರದ ಪರವಾಗಿ ಜ್ಯೋತಿ ಪ್ರಮೋದ ನಾಯಕ ವಾದಿಸಿದ್ದರು.
ಆರೋಪಿ ಹರೀಶ್ ಬೈಕಂಪಾಡಿ, ಸತೀಶ್ ಬೈಕಂಪಾಡಿ, ಭಾಸ್ಕರ್ ಬೈಕಂಪಾಡಿ ವಿರುದ್ಧ ಭಾ.ದಂ.ಸಂ ಕಲಂ: 302 ಜತೆ 120(ಬಿ), 109, 34ರಡಿ ಜೀವಾವಧಿ ಶಿಕ್ಷೆ ಮತ್ತು ತಲಾ 15,000 ರೂ. ದಂಡ ಪಾವತಿ ಹಾಗೂ ದಂಡ ಪಾವತಿಸಲು ತಪ್ಪಿದಲ್ಲಿ 1 ವರ್ಷಗಳ ಸಾದಾ ಸಜೆ. ಪುಷ್ಪರಾಜ್ ವಿರುದ್ಧ ಭಾ.ದಂ.ಸಂ. ಕಲಂ: 302ಜತೆ 120(ಬಿ), 34 ರಡಿ ಜೀವಾಧಿ ಶಿಕ್ಷೆ ಮತ್ತು 15,000 ರೂ. ದಂಡ ಪಾವತಿ ಹಾಗೂ ದಂಡ ಪಾವತಿಸಲು ತಪ್ಪಿದಲ್ಲಿ 1 ವರ್ಷಗಳ ಸಾದಾ ಸಜೆ ವಿಧಿಸಿ ನ್ಯಾಯಧೀಶರು ತೀರ್ಪು ನೀಡಿದ್ದಾರೆ. ಅಲ್ಲದೇ ನಾಲ್ವರಿಗೂ ಕಲಂ: 201 ಜೊತೆ 34 ರಡಿ 2 ವರ್ಷಗಳ ಕಾಲ ಸಾದಾ ಶಿಕ್ಷೆ ಮತ್ತು ತಲಾ 1,000 ರೂ. ದಂಡ ಪಾವತಿಯನ್ನು, ದಂಡ ಪಾವತಿ ತಪ್ಪಿದಲ್ಲಿ 1 ವರ್ಷಗಳ ಸಾದಾ ಶಿಕ್ಷೆ ವಿಧಿಸಲಾಗಿದೆ.
Discover more from Coastal Times Kannada
Subscribe to get the latest posts sent to your email.







Discussion about this post