ಮಂಗಳೂರು: ನಗರದಲ್ಲಿ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮಂಗಳೂರು ನಗರ ಕಮಿಷನರೇಟ್ ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿತ ಎಂಡಿಎಂಎ ಹಾಗೂ ಗಾಂಜಾ ಸೇವನೆ ಮಾಡಿ ತೂರಾಡುತ್ತಿದ್ದ ಒಟ್ಟು 6 ಮಂದಿಯನ್ನು ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಶಕ್ಕೆ ಪಡೆದು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಮಂಗಳೂರು ಉತ್ತರ, ದಕ್ಷಿಣ, ಮೂಡಬಿದಿರೆ ಹಾಗೂ ಉಳ್ಳಾಲ ಠಾಣಾ ಪೊಲೀಸರು ಪ್ರತ್ಯೇಕ ಕಾರ್ಯಾಚರಣೆಗಳನ್ನು ನಡೆಸಿ ಆರೋಪಿಗಳನ್ನು ಪತ್ತೆಹಚ್ಚಿ, ವೈದ್ಯಕೀಯ ತಪಾಸಣೆಯ ದೃಢೀಕರಣದೊಂದಿಗೆ ಕಾನೂನು ಕ್ರಮ ಕೈಗೊಂಡಿದ್ದಾರೆ.
ಬಾವುಟಗುಡ್ಡದಲ್ಲಿ ಎಂಡಿಎಂಎ ಸೇವಿಸಿದ್ದ ಯುವಕ ಸೆರೆ : ದಿನಾಂಕ 09-09-2026ರಂದು ಬೆಳಗ್ಗೆ 11:30ಕ್ಕೆ ಮಂಗಳೂರು ಉತ್ತರ ಠಾಣಾ ಪಿಎಸ್‌ಐ ಫೈಜುನ್ನಿಸಾ ಅವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬಾವುಟಗುಡ್ಡ ಬಳಿ ತೂರಾಡುತ್ತಾ ಸಾಗುತ್ತಿದ್ದ ಕುದ್ರೋಳಿ ನಡುಪಳ್ಳಿ ನಿವಾಸಿ ಮೊಹಮ್ಮದ್ ಹಝೀಮ್ (26) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಈತನನ್ನು ಎ.ಜೆ. ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ‘ಮೆಥಾಂಫಿಟಮೈನ್’ (Methamphetamine) ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಂಜಾ ಸೇವಿಸಿ ತೂರಾಡುತ್ತಿದ್ದ ವ್ಯಕ್ತಿ ಅರೆಸ್ಟ್ : 09-09-2026ರಂದು ಮಧ್ಯಾಹ್ನ 3:30ಕ್ಕೆ ಬಾವುಟಗುಡ್ಡ ಬಳಿ ಉತ್ತರ ಠಾಣೆಯ ಪಿಎಸ್‌ಐ ಶೀತಲ್ ಆಲಗೂರು ಅವರು ಪರಿಶೀಲನೆ ನಡೆಸುತ್ತಿದ್ದಾಗ, ಮಾತು ತೊದಲುತ್ತಾ ಅಸ್ವಸ್ಥನಾಗಿದ್ದ ಉಳ್ಳಾಲ ಮುನ್ನಿಗುಡ್ಡೆ ನಿವಾಸಿ ಮೊಹಮ್ಮದ್ ಅರಾಫತ್ (30) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಪರೀಕ್ಷೆಯಲ್ಲಿ ಈತ ಗಾಂಜಾ ಸೇವಿಸಿರುವುದು ಸಾಬೀತಾಗಿದ್ದು, ಎನ್‌ಡಿಪಿಎಸ್ ಕಲಂ 27(b) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ದಕ್ಕೆ ಬಳಿ ಎಂಡಿಎಂಎ ವ್ಯಸನಿ ಅರೆಸ್ಟ್ : ಸಂಜೆ 4:30ಕ್ಕೆ ಉತ್ತರ ಠಾಣಾ ಪಿಎಸ್‌ಐ ನಳಿನಿ ಅವರು ರೌಂಡ್ಸ್‌ನಲ್ಲಿದ್ದಾಗ ಉತ್ತರ ದಕ್ಕೆ ಬಳಿ ಅನುಚಿತವಾಗಿ ವರ್ತಿಸುತ್ತಿದ್ದ ಉಳ್ಳಾಲ ಆಲೇಕಲ್ ಮದನಿ ಕಾಲೇಜು ಸಮೀಪದ ನಿವಾಸಿ ಮೊಹಮ್ಮದ್ ಇಕ್ಬಾಲ್ (35) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಎ.ಜೆ. ಆಸ್ಪತ್ರೆಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಈತ ‘ಟೆಟ್ರಾ ಹೈಡ್ರೋಕ್ಯಾನಬಿನಾಲ್’ ಹಾಗೂ ‘ಮೆಥಾಂಫಿಟಮೈನ್’ ಸೇವಿಸಿರುವುದು ದೃಢಪಟ್ಟಿದ್ದು, ಎನ್‌ಡಿಪಿಎಸ್ ಕಲಂ 27(a) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮಾರ್ನಮಿಕಟ್ಟೆಯಲ್ಲಿ 18 ವರ್ಷದ ಯುವಕ ವಶಕ್ಕೆ : 08-09-2026 ರಂದು ರಾತ್ರಿ 10:40ರ ಸುಮಾರಿಗೆ ಮಂಗಳೂರು ದಕ್ಷಿಣ ಠಾಣಾ ಮುಖ್ಯಪೇದೆ ಆಂಜನೇಯ ಕೆ.ಎಸ್. ಮತ್ತು ಸಿಬ್ಬಂದಿ ರೌಂಡ್ಸ್‌ನಲ್ಲಿದ್ದಾಗ, ಮಾರ್ನಮಿಕಟ್ಟೆ ಬಳಿ ಮಾದಕ ವಸ್ತು ಸೇವಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದ ಮಹಾಕಾಳಿಪಡ್ಪುವಿನ ವಿಶ್ವಾಸ್ ವೀನಸ್ ಅಪಾರ್ಟ್‌ಮೆಂಟ್ ನಿವಾಸಿ ದೈವಿಕ್ (18) ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಎ.ಜೆ. ಆಸ್ಪತ್ರೆಯ ಪರೀಕ್ಷೆಯಲ್ಲಿ ಈತ ಮೆಥಾಂಫಿಟಮೈನ್ ಸೇವಿಸಿರುವುದು ದೃಢಪಟ್ಟಿದೆ.
ಮೂಡಬಿದಿರೆ ಠಾಣೆ, ಕೀರ್ತಿನಗರ ಪಾರ್ಕ್ ಬಳಿ ಗಾಂಜಾ ಸೇದುತ್ತಿದ್ದ ವ್ಯಕ್ತಿ ಸೆರೆ : 09-09-2026ರಂದು ಸಂಜೆ 7:20ಕ್ಕೆ ಮೂಡಬಿದಿರೆ ಠಾಣಾ ಪಿಎಸ್‌ಐ ಕೃಷ್ಣಪ್ಪ ಮತ್ತು ಸಿಬ್ಬಂದಿ ಪ್ರಾಂತ್ಯ ಗ್ರಾಮದ ಕೀರ್ತಿನಗರ ಪಾರ್ಕ್ ಬಳಿಯ ನಿರ್ಜನ ಪ್ರದೇಶದ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ. ಅಲ್ಲಿ ಅಮಲು ಪದಾರ್ಥ ಸೇವಿಸುತ್ತಿದ್ದ ಮಾರೂರು ಗ್ರಾಮದ ಕೊಡಂಗೆ ಮನೆ ನಿವಾಸಿ ರಂಜಿತ್ ರಾವ್ (31) ಎಂಬಾತನನ್ನು ಸುತ್ತುವರೆದು ಹಿಡಿದಿದ್ದಾರೆ. ಮೂಡಬಿದಿರೆಯ ಮೌಂಟ್ ರೋಜಾರಿಯೋ ಆಸ್ಪತ್ರೆಯ ತಪಾಸಣೆಯಲ್ಲಿ ಈತ ಗಾಂಜಾ ಸೇವಿಸಿರುವುದು ಖಚಿತಪಟ್ಟಿದೆ.
ಉಳ್ಳಾಲ ಠಾಣೆ: ಕೆ.ಸಿ. ರೋಡ್ ಜಂಕ್ಷನ್‌ನಲ್ಲಿ ಡ್ರಗ್ಸ್ ವ್ಯಸನಿ ಅರೆಸ್ಟ್ : 09-09-2026ರಂದು ಬೆಳಗ್ಗೆ 9:45ಕ್ಕೆ ತಲಪಾಡಿ ಗ್ರಾಮದ ಕೆ.ಸಿ.ರೋಡ್ ಜಂಕ್ಷನ್‌ನಲ್ಲಿ ಸಾರ್ವಜನಿಕರಿಗೆ ಉಪದ್ರವ ನೀಡುತ್ತಿದ್ದ ದ್ಯಾನೇಶ್ ಎಂ. ಎಂಬಾತನನ್ನು ಉಳ್ಳಾಲ ಠಾಣಾ ಪಿಎಸ್‌ಐ ರೇವಣಸಿದ್ಧಪ್ಪ ಮತ್ತು ತಂಡ ಪತ್ತೆಹಚ್ಚಿದೆ. ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ನಡೆಸಿದ ವೈದ್ಯಕೀಯ ತಪಾಸಣೆಯಲ್ಲಿ ಆತ ನಿಷೇಧಿತ ಮಾದಕ ವಸ್ತು ಸೇವಿಸಿರುವುದು ಸಾಬೀತಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಮಾದಕ ದ್ರವ್ಯ ಸೇವನೆ ಹಾಗೂ ಮಾರಾಟ ಜಾಲದಲ್ಲಿ ತೊಡಗಿರುವವರ ವಿರುದ್ಧ ಕಠಿಣ ನಿಗಾ ಇರಿಸಲಾಗಿದ್ದು, ಇಂತಹ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post