ನವದೆಹಲಿ: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಅಪರಾಧಿ, 257 ಜನರ ಸಾವಿಗೆ ಕಾರಣವಾಗಿರುವ ಅಬು ಸಲೇಮ್ ತನ್ನನ್ನು ಬಂಧನದಿಂದ ಬಿಡುಗಡೆ ಮಾಡಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾ ಮಾಡಿದೆ.
ಪೋರ್ಚುಗಲ್‌ನಿಂದ ತನ್ನನ್ನು ಹಸ್ತಾಂತರಿಸುವಾಗ ವಿಧಿಸಲಾಗಿದ್ದ ಷರತ್ತಿನ ಅನ್ವಯ ಭಾರತದ ಜೈಲಿನಲ್ಲಿ 25 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದೇನೆ. ಹೀಗಾಗಿ, ನನ್ನನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಬೇಕು ಎಂದು ಹತ್ಯಾಕಾಂಡದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಅಬು ಸಲೇಂ ಅರ್ಜಿಯಲ್ಲಿ ಕೋರಿದ್ದ.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠವು, ಬಾಂಬೆ ಹೈಕೋರ್ಟ್ ನೀಡಿದ ಆದೇಶದಲ್ಲಿ ಯಾವುದೇ ದೋಷಗಳಿಲ್ಲ. ಹೀಗಾಗಿ, ಈ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ ಎಂದು ಹೇಳಿತು. ಪ್ರಕರಣದಲ್ಲಿ ಹಿರಿಯ ವಕೀಲ ರಿಷಿ ಮಲ್ಹೋತ್ರಾ ಅವರು ಅಬು ಸಲೇಮ್ ಪರ ವಾದ ಮಂಡಿಸಿದ್ದರು.
ಅರ್ಜಿ ವಜಾ: ಇದಕ್ಕೂ ಮೊದಲು, ಅಂದರೆ ಈ ವರ್ಷದ ಎಪ್ರಿಲ್ನಲ್ಲಿ ಬಾಂಬೆ ಹೈಕೋರ್ಟ್ ಅಬು ಸಲೇಮ್ನ ಬಿಡುಗಡೆ ಅರ್ಜಿಯನ್ನು ತಪ್ಪು ಕಲ್ಪನೆಯಿಂದ ಕೂಡಿದೆ ಎಂದು ಹೇಳಿ ವಜಾ ಮಾಡಿತ್ತು. ಇದನ್ನು, ಉಗ್ರ ಅಬು ಸಲೇಂ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದ. ಜುಲೈನಲ್ಲಿ ಈ ಅರ್ಜಿಯ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿತ್ತು.
ಅಬು ಸಲೇಂನ ವಾದವೇನು?: ವಿಚಾರಣೆಯ ಸಂದರ್ಭದಲ್ಲಿ, ಅಬು ಸಲೇಮ್ ತಾನು 25 ವರ್ಷಗಳ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದ್ದೇನೆ ಎಂಬ ಹೇಳಿಕೆಯನ್ನು ಪ್ರಶ್ನಿಸಿದ ಪೀಠವು, “ನೀವು (ಸಲೇಂ) ಅಷ್ಟು ಅವಧಿಯನ್ನು ಹೇಗೆ ಪೂರ್ಣಗೊಳಿಸಿದ್ದೀರಿ?” ಎಂದು ಕೇಳಿತು. ಇದಕ್ಕೆ ಉತ್ತರಿಸಿದ ಸಲೇಂ ಪರ ವಕೀಲ ರಿಷಿ ಮಲ್ಹೋತ್ರಾ, ಜೈಲಿನಲ್ಲಿ ಉತ್ತಮ ನಡವಳಿಕೆಗಾಗಿ ತನ್ನ ಕಕ್ಷಿದಾರನಿಗೆ 2 ವರ್ಷ 9 ತಿಂಗಳಿಗಿಂತ ಹೆಚ್ಚು ವಿನಾಯಿತಿ ಸಿಕ್ಕಿದೆ. ವಿಚಾರಣಾಧೀನ ಅವಧಿ, ಶಿಕ್ಷೆಯ ನಂತರದ ಕಸ್ಟಡಿ ಮತ್ತು ವಿನಾಯಿತಿ ಅವಧಿ ಸೇರಿ ಒಟ್ಟು 25 ವರ್ಷಗಳಿಗೂ ಹೆಚ್ಚು ಕಾಲ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ವಾದಿಸಿದರು.
“ನಿಮಗೆ ವಿವರವಾದ ತೀರ್ಪು ಬೇಕೇ ಅಥವಾ ಸರಳವಾಗಿ ವಜಾಗೊಳಿಸಿದ ಆದೇಶ ಸಾಕೇ” ಎಂದು ನ್ಯಾಯಪೀಠವು ವಕೀಲರನ್ನು ಕೇಳಿತು. ಇದಕ್ಕೆ ಸಲೇಮ್ ಪರ ವಕೀಲರು ಕಾನೂನು ವಿಷಯದ ಬಗ್ಗೆ ವಿವರವಾದ ತೀರ್ಪು ನೀಡುವಂತೆ ಕೋರಿದರು. 1993 ರ ಮುಂಬೈ ಸರಣಿ ಸ್ಫೋಟದ ಅಪರಾಧಿಯಾಗಿರುವ ಅಬು ಸಲೇಮ್ನನ್ನು ದೀರ್ಘ ಕಾನೂನು ಹೋರಾಟದ ನಂತರ ನವೆಂಬರ್ 11, 2005 ರಂದು ಪೋರ್ಚುಗಲ್‌ನಿಂದ ಗಡೀಪಾರು ಮಾಡಿಸಿಕೊಂಡು ಭಾರತಕ್ಕೆ ಕರೆತರಲಾಗಿತ್ತು.
Discover more from Coastal Times Kannada
Subscribe to get the latest posts sent to your email.








Discussion about this post