ಸುಳ್ಯ, ಸೆ.9: ಬೆಳ್ಳಾರೆಯ ಸರ್ಕಾರಿ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಅಕ್ರಮವಾಗಿ ನುಗ್ಗಿದ್ದಲ್ಲದೇ, ವಿದ್ಯಾರ್ಥಿನಿಯರು ಒಣಗಲು ಹಾಕಿದ್ದ ಉಡುಪುಗಳನ್ನು ಕಳವು ಮಾಡಿಕೊಂಡು ಓರ್ವ ಪರಾರಿಯಾಗಿದ್ದ. ಈ ಆರೋಪದ ಹಿನ್ನೆಲೆಯಲ್ಲಿ ಬೆಳ್ಳಾರೆ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ. ಬಂಧಿತ ಆರೋಪಿಯನ್ನು ಪುತ್ತೂರು ತಾಲೂಕಿನ ಕೊಳ್ತಿಗೆ ನಿವಾಸಿ ಕೆ. ರಾಮಚಂದ್ರ (35) ಎಂದು ಗುರುತಿಸಲಾಗಿದೆ.
ಸೆ.2ರಂದು ಬೆಳಗ್ಗೆ ಹಾಸ್ಟೆಲ್ ಆವರಣದಲ್ಲಿ ಒಣಗಲು ಹಾಕಿದ್ದ ವಿದ್ಯಾರ್ಥಿನಿಯರ ಬಟ್ಟೆಗಳು ಕಾಣೆಯಾಗಿದ್ದವು. ವಿದ್ಯಾರ್ಥಿನಿಯರು ಈ ವಿಷಯವನ್ನು ವಾರ್ಡನ್ ಗಮನಕ್ಕೆ ತಂದಾಗ, ಅನುಮಾನಗೊಂಡು ಹಾಸ್ಟೆಲ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಸೆಪ್ಟಂಬರ್ 2ರ ಮುಂಜಾನೆ ಅಪರಿಚಿತ ಯುವಕನೊಬ್ಬ ಹಾಸ್ಟೆಲ್ ಆವರಣಕ್ಕೆ ಅಕ್ರಮವಾಗಿ ನುಗ್ಗಿ, ಒಣಗಲು ಹಾಕಿದ್ದ ಬಟ್ಟೆಗಳನ್ನು ಆಯ್ದು ಕಳವು ಮಾಡಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿತ್ತು. ಈ ಬಗ್ಗೆ ಬೆಳ್ಳಾರೆಯ ಸರ್ಕಾರಿ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ದೂರು ನೀಡಿದ್ದರು.
ಈ ಸಂಬಂಧ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಸೆಪ್ಟಂಬರ್ 5ರಂದು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಪೊಲೀಸರು ಅ.ಕ್ರ 54/2026, ಕಲಂ 331(4) ಹಾಗೂ 305 ಬಿಎನ್‌ಎಸ್ (BNS 2023) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದರು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಬೆಳ್ಳಾರೆ ಪೊಲೀಸರು, ಸೆಪ್ಟಂಬರ್ 7ರಂದು ಆರೋಪಿ ಕೆ. ರಾಮಚಂದ್ರನನ್ನು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆತನಿಗೆ ಸೆಪ್ಟಂಬರ್ 15ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post