ಕಾಪು, ಜು. 27: ಪ್ರಯಾಣಿಕರು ತುಂಬಿದ್ದ ಎರಡು ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗಳ ಚಾಲಕರು ಟೈಮಿಂಗ್ ವಿಚಾರಕ್ಕೆ ಪರಸ್ಪರ ಡಿಕ್ಕಿ ಹೊಡೆದುಕೊಂಡ ಘಟನೆ ಕಾಪು ಬಸ್ ಸ್ಟಾಂಡ್ ಬಳಿ ನಡೆದಿದೆ. ಘಟನೆಯಿಂದ ಬಸ್‌ಗಳಲ್ಲಿದ್ದ ಪ್ರಯಾಣಿಕರು ಭಯಭೀತರಾಗಿದ್ದು, ಸುಮಾರು 15 ನಿಮಿಷಗಳ ಕಾಲ ಸರ್ವಿಸ್ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರನ್ನು ಬಂಧಿಸಿ, ಎರಡೂ ಬಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಉಡುಪಿಯಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಆನಂದ್ ಟ್ರಾವೆಲ್ಸ್ ಹಾಗೂ ಸಂದೇಶ್ ಟ್ರಾವೆಲ್ಸ್ ಬಸ್‌ಗಳ ಚಾಲಕರು ಮತ್ತು ನಿರ್ವಾಹಕರ ನಡುವೆ ಉದ್ಯಾವರದಿಂದಲೇ ಟೈಮಿಂಗ್, ಓವರ್‌ಟೇಕ್ ಹಾಗೂ ಪ್ರಯಾಣಿಕರನ್ನು ಹತ್ತಿಸುವ ವಿಚಾರವಾಗಿ ವಾಗ್ವಾದ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ವಿವಾದ ಕಾಪು ಬಸ್ ನಿಲ್ದಾಣದಲ್ಲಿ ತಾರಕಕ್ಕೇರಿ, ಸಂದೇಶ್ ಟ್ರಾವೆಲ್ಸ್ ಬಸ್ ಪ್ರಯಾಣಿಕರನ್ನು ಹತ್ತಿಸಲು ಹಾಗೂ ಇಳಿಸಲು ನಿಲ್ಲಿಸಿದ್ದ ವೇಳೆ, ಹಿಂದಿನಿಂದ ಬಂದ ಆನಂದ್ ಟ್ರಾವೆಲ್ಸ್ ಬಸ್ ಉದ್ದೇಶಪೂರ್ವಕವಾಗಿ ಅದರ ಬಲಭಾಗಕ್ಕೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಡಿಕ್ಕಿಯ ರಭಸಕ್ಕೆ ಎರಡೂ ಬಸ್‌ಗಳಲ್ಲಿದ್ದ ಪ್ರಯಾಣಿಕರು ಆತಂಕದಿಂದ ಕಿರುಚಾಡಿದ್ದು, ಕೆಲಕಾಲ ಪರಿಸ್ಥಿತಿ ಉದ್ವಿಗ್ನಗೊಂಡಿತು. ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳು ಸಂಭವಿಸಿಲ್ಲ.

ನಾಲ್ವರು ವಶಕ್ಕೆ: ಪ್ರಕರಣಕ್ಕೆ ಸಂಬಂಧಿಸಿ ಬಸ್ ಚಾಲಕರಾದ ರಮೇಶ್ ಹಾಗೂ ಅಭಿಷೇಕ್, ನಿರ್ವಾಹಕರಾದ ವಿಜಯ ಕುಮಾರ್ ಹಾಗೂ ಹರೀಶ್ ಬಿ. ಹೆಗ್ಡೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎರಡೂ ಬಸ್‌ಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.







Discussion about this post