ಕಾಸರಗೋಡು, ಜು 8: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಕಾಸರಗೋಡು ಶಾಖೆಯ ಮ್ಯಾನೇಜರ್ ಆಗಿದ್ದ ಮಹಿಳೆ ಮತ್ತು ಫೈನಾನ್ಸ್ ಸಂಸ್ಥೆಯಲ್ಲಿ ಮ್ಯಾನೇಜರ್ ಆಗಿದ್ದ ಆಕೆಯ ಪತಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮಲಪ್ಪುರಂ ಮುಂಡುಪರಂಬ ಮೈತ್ರಿ ಕಾಲನಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಎಸ್‌ಬಿಐಯ ಕಾಸರಗೋಡು ಶಾಖೆಯ ಮ್ಯಾನೇಜರ್ ಶೀನಾ(35), ಅವರ ಪತಿ ಮಲಪ್ಪುರಂನ ಖಾಸಗಿ ಹಣಕಾಸು ಸಂಸ್ಥೆಯ ಮ್ಯಾನೇಜರ್ ಮೇಲೋಕಾಟಿಲ್ ಪರಂಬಿಲ್ ಸಬೀಶ್ (37), ಮಕ್ಕಳಾದ ಹರಿಗೋವಿಂದ್(6) ಮತ್ತು ಶ್ರೀವರ್ಧನ್(ಎರಡೂವರೆ ವರ್ಷ) ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಬೀಶ್ ಮನೆಯ ಒಂದು ಕೊಠಡಿಯೊಳಗೆ ಹಾಗೂ ಶೀನಾ ಇನ್ನೊಂದು ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಶೀನಾಗೆ ಇತ್ತೀಚೆಗಷ್ಟೇ ಕಾಸರಗೋಡು ಶಾಖೆಯಿಂದ ಕಣ್ಣೂರಿಗೆ ವರ್ಗವಾಗಿದ್ದು, ಮ್ಯಾನೇಜರ್ ಆಗಿ ಭಡ್ತಿ ಪಡೆದಿದ್ದರು. ಹಾಗಾಗಿ ಮನೆಯನ್ನು ಕಣ್ಣೂರಿಗೆ ಶಿಫ್ಟ್ ಮಾಡಲು ಬ್ಯಾಂಕಿನಲ್ಲಿ ಒಂದು ವಾರದ ರಜೆ ಪಡೆದಿದ್ದರು. ಮಲಪ್ಪುರಂನಲ್ಲಿ ಗಂಡ ಸಬೀಶ್ ಕೆಲಸ ಮಾಡುತ್ತಿದ್ದರಿಂದ ಇಲ್ಲಿ ವರೆಗೂ ಮುಂಡುಪರಂಬದಲ್ಲಿ ಫ್ಲಾಟ್ ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮನೆ ಶಿಫ್ಟ್ ಮಾಡಲೆಂದು ಬ್ಯಾಂಕಿಗೆ ರಜೆ ಹಾಕಿದ್ದ ಶೀನಾ ಗುರುವಾರ ರಾತ್ರಿಯೇ ಕಣ್ಣೂರಿನಲ್ಲಿ ಗೊತ್ತುಪಡಿಸಿದ್ದ ಮನೆಗೆ ತೆರಳುವ ಬಗ್ಗೆ ಸಂಬಂಧಿಕರಿಗೆ ತಿಳಿಸಿದ್ದರು. ಆದರೆ, ಅದೇ ರಾತ್ರಿ ನಾಲ್ವರು ಕೂಡ ನಿಗೂಢ ಸಾವಿಗೀಡಾಗಿದ್ದು, ಸಂಬಂಧಿಕರೆಲ್ಲ ದಿಗ್ಭ್ರಾಂತರಾಗಿದ್ದಾರೆ. ರಾತ್ರಿ ಆಗಿದ್ದರೂ ಫೋನ್ ಕರೆ ಸ್ವೀಕರಿಸುತ್ತಿಲ್ಲ ಎಂದು ಸಂಬಂಧಿಕರು ಮಲಪ್ಪುರಂ ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ಮೈತ್ರಿ ಕಾಲನಿಯ ಮನೆಗೆ ತೆರಳಿ ನೋಡಿದಾಗ, ಗಂಡ- ಹೆಂಡತಿ ನೇಣು ಬಿಗಿದುಕೊಂಡಿದ್ದರೆ, ಮಕ್ಕಳಿಬ್ಬರು ಒಬ್ಬ ಕೊಠಡಿ ಒಳಗಿನ ಬೆಡ್ ನಲ್ಲಿದ್ದರೆ, ಮತ್ತೊಬ್ಬ ಹೊರಗೆ ಇರಿಸಿದ್ದ ಸಣ್ಣ ಬೆಡ್ ನಲ್ಲಿ ಮಲಗಿದಲ್ಲೇ ಶವವಾಗಿದ್ದರು.
ಗುಣಪಡಿಸಲಾಗದ ಆನುವಂಶಿಕ ಕಾಯಿಲೆಯಾದ ಡುಚೆನ್ ಮಸ್ಕ್ಯುಲಾರ್ ಡಿಸ್ಟ್ರೋಫಿ (ಡಿಎಮ್‌ಡಿ) (Duchenne Muscular Dystrophy (DMD) ಯಿಂದ ಇಬ್ಬರು ಮಕ್ಕಳು ಬಳಲುತ್ತಿರುವುದರಿಂದ ಮನನೊಂದು ಪೋಷಕರು ಸಾಮೊಹಿಕವಾಗಿ ಪ್ರಾಣ ಕಳೆದುಕೊಳ್ಳಲು ನಿರ್ಧರಿಸಿರಬಹುದೆಂದು ಶಂಕಿಸಲಾಗಿದೆ. ಕಳೆದ ತಿಂಗಳು ಇಬ್ಬರು ಮಕ್ಕಳ ಪೈಕಿ ದೊಡ್ಡ ಮಗನಿಗೆ ಡಿಎನ್‌ಡಿ ಇರುವುದು ದೃಢಪಟ್ಟಿತ್ತು. ಇದರ ಬಳಿಕ ಚಿಕ್ಕ ಮಗನ ಪ್ರಾಥಮಿಕ ವೈದ್ಯಕೀಯ ತನಿಖೆಯನ್ನು ನಡೆಸಲಾಗಿತ್ತು. ಈ ವೇಳೆ ಕಿರಿಯ ಮಗುವಿನಲ್ಲೂ ಕೂಡ ರೋಗ ಅಭಿವೃದ್ಧಿಗೊಳ್ಳುತ್ತಿರುವ ಸಾಧ್ಯತೆ ಗೋಚರಿಸಿದೆ. ಪರಿಣಾಮವಾಗಿ, ವೈದ್ಯರು ತಾಯಿಯ ಜೆನೆಟಿಕ್ ಸ್ಕ್ರೀನಿಂಗ್ ನಡೆಸುವಂತೆ ಶಿಫಾರಸು ಮಾಡಿದರು. ಆದರೆ ಇದನ್ನು ಕೈಗೊಳ್ಳುವ ಮೊದಲೇ ಕುಟುಂಬ ದುಡುಕಿನ ನಿರ್ಧಾರಕ್ಕೆ ಮುಂದಾಗಿದೆ.
Discussion about this post