ಮಂಗಳೂರು: ನಗರದ ನೂತನ ಪೊಲೀಸ್ ಆಯುಕ್ತರಾಗಿ ಅನುಪಮ್ ಅಗರ್‌ವಾಲ್ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ಅವರು ಅಧಿಕಾರ ಹಸ್ತಾಂತರಿಸಿದರು.
ಕುಲದೀಪ್ ಕುಮಾರ್ ಆರ್. ಜೈನ್ ಅವರಿಗೆ ಸದ್ಯ ಯಾವುದೇ ಸ್ಥಾನ ತೋರಿಸಿಲ್ಲ. ನೂತನ ಆಯುಕ್ತ ಅಗರ್‌ವಾಲ್ ರಾಜಸ್ಥಾನದ ಜೋಧ್‌ಪುರದವರು. ಈ ಹಿಂದೆ ಕರ್ನಾಟಕ ಪೊಲೀಸ್ ಅಕಾಡೆಮಿಯ ನಿರ್ದೇಶಕರಾಗಿ, ದಾವಣಗೆರೆಯಲ್ಲಿ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯಾಗಿ, ಬೆಳಗಾವಿಯಲ್ಲಿ ಉಪಪೊಲೀಸ್ ಆಯುಕ್ತರಾಗಿ ರಾಮನಗರ ಮತ್ತು ವಿಜಯಪುರದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. 2011ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾದ ಕುಲದೀಪ್ ಕೇವಲ ಆರು ತಿಂಗಳ ಕಾಲ ಮಂಗಳೂರು ಪೊಲೀಸ್ ಆಯುಕ್ತರಾಗಿದ್ದು ಹಲವು ದಿಟ್ಟ ಕ್ರಮ, ಸುಧಾರಣೆಗಳನ್ನು ಕೈಗೊಂಡಿದ್ದರು.
ಅಧಿಕಾರ ಸ್ವೀಕರಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ಅನುಪಮ್ ಅಗರ್ವಾಲ್, ರಾಜ್ಯದಲ್ಲಿಯೇ ಮಂಗಳೂರು ನಗರ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿದ್ದು ಇಲ್ಲಿ ಕೆಲಸ ಅಂದ್ರೆ ಹೆಚ್ಚಿನ ಶ್ರಮ ಬೇಕಾಗುತ್ತದೆ. ಬೀಟ್ ವ್ಯವಸ್ಥೆ ಮೂಲಕ ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲಾಗುವುದು ಎಂದು ಹೇಳಿದ್ದಾರೆ. ಫೋನ್ ಇನ್ ಕಾರ್ಯಕ್ರಮ ಸಮಸ್ಯೆಗಳ ಸ್ಪಂದನೆಗೆ ಉತ್ತಮ ವೇದಿಕೆಯಾಗಿದ್ದು ಇಂತಹ ಕಾರ್ಯಕ್ರಮಗಳನ್ನು ಮುಂದುವರಿಸುವುದಾಗಿ ತಿಳಿಸಿದರು.
ಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮಂಗಳೂರಿನ ಡ್ರಗ್ಸ್ ಸಮಸ್ಯೆಗಳ ಬಗ್ಗೆ ಕೇಳಿದ್ದೇನೆ. ಹಿಂದಿನ ಕಮಿಷನರ್ ಕುಲದೀಪ್ ಕುಮಾರ್ ಅವರು ಈ ದಿಸೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಡ್ರಗ್ಸ್ ಮುಕ್ತ ಮಂಗಳೂರು ಅಭಿಯಾನ ಯಶಸ್ಸು ಕಾಣುತ್ತಿದ್ದು, ನಶೆ ಮುಕ್ತ ಮಂಗಳೂರು ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಅಭಿಯಾನ ಮುಂದುವರಿಸುತ್ತೇನೆ ಎಂದರು.
ಈ ಭಾಗದಲ್ಲಿ ಅನೈತಿಕ ಪೊಲೀಸ್‌ಗಿರಿ ನಡೆಯುವ ಬಗ್ಗೆಯೂ ಅರಿವಿದೆ. ಈ ಕೃತ್ಯದಲ್ಲಿ ತೊಡಗುವವರ ವಿರುದ್ಧ ಕಠಿಣ ಕ್ರಮ ಜರುಗಿಸುತ್ತೇನೆ. ಜೊತೆಗೆ ಅನೈತಿಕ ಪೊಲೀಸ್‌ಗಿರಿ ಕೃತ್ಯಗಳಿಗೆ ಬೆಂಬಲ ಕೊಡುವವರನ್ನೂ ಕಾನೂನಿನಡಿ ತರುವ ಕೆಲಸ ಮಾಡುತ್ತೇನೆ ಎಂದು ಎಚ್ಚರಿಸಿದರು.
Discover more from Coastal Times Kannada
Subscribe to get the latest posts sent to your email.
Discussion about this post