ಮಂಗಳೂರು: ರೈಲು ಪ್ರಯಾಣದ ವೇಳೆ ಕಳ್ಳತನವಾಗಿದ್ದ ಸುಮಾರು ₹80,000 ಮೌಲ್ಯದ ಲ್ಯಾಪ್‌ಟಾಪ್, ಚಿನ್ನದ ಸರ, ಕೈಗಡಿಯಾರ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕರ್ತವ್ಯನಿರತ ಟಿಕೆಟ್ ತಪಾಸಕರ (TTE) ಸಮಯಪ್ರಜ್ಞೆಯಿಂದ ಕೆಲವೇ ಗಂಟೆಗಳಲ್ಲಿ ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಕೃತ್ಯ ಎಸಗಿದ ಆರೋಪಿಯನ್ನು ಕೆ.ಆರ್. ನಗರದಲ್ಲಿ ವಶಕ್ಕೆ ಪಡೆದು ರೈಲ್ವೆ ಪೊಲೀಸರಿಗೆ ಒಪ್ಪಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಿಭಾಗದ ಪ್ರಕಟಣೆ ತಿಳಿಸಿದೆ.
ದೂರುದಾರ ಅಭಿಷೇಕ್ ಎಂಬುವರು ರೈಲು ಸಂಖ್ಯೆ 16585ರಲ್ಲಿ ಹೊಳೆನರಸೀಪುರದಿಂದ ಮಂಗಳೂರು ಜಂಕ್ಷನ್‌ಗೆ ಪ್ರಯಾಣಿಸುತ್ತಿದ್ದರು. ಪ್ರಯಾಣದ ವೇಳೆ ತಮ್ಮ ಬರ್ತ್‌ನಲ್ಲಿ ಇರಿಸಲಾಗಿದ್ದ ಲ್ಯಾಪ್‌ಟಾಪ್ ಬ್ಯಾಗ್ ಕಾಣೆಯಾಗಿರುವುದನ್ನು ಗಮನಿಸಿದ ಅವರು ತಕ್ಷಣ ರೈಲ್ವೆ ಸಹಾಯವಾಣಿ ‘ರೈಲ್‌ಮದದ್’ ಮೂಲಕ ದೂರು ದಾಖಲಿಸಿದ್ದರು. ಬ್ಯಾಗ್‌ನಲ್ಲಿ ಲೆನೊವೊ ಲ್ಯಾಪ್‌ಟಾಪ್, ಚಾರ್ಜರ್, ಬಂಗಾರದ ಸರ, ಕೈಗಡಿಯಾರ ಹಾಗೂ ಗುರುತಿನ ಚೀಟಿಗಳು ಇದ್ದವು. ಹೊಳೆನರಸೀಪುರ ಮತ್ತು ಸಕಲೇಶಪುರ ನಡುವೆ ಈ ಕಳ್ಳತನ ನಡೆದಿರಬಹುದು ಎಂದು ಶಂಕಿಸಲಾಗಿತ್ತು.
ದೂರಿನ ಹಿನ್ನೆಲೆಯಲ್ಲಿ ರೈಲ್ವೆ ರಕ್ಷಣಾ ಪಡೆ ನಿಗಾ ವಹಿಸಿತ್ತು. ಇದೇ ವೇಳೆ ಬೆಳಗಾವಿ–ಮೈಸೂರು ಮಾರ್ಗದ ರೈಲು ಸಂಖ್ಯೆ 17302ರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಟಿಟಿಇ ಚಂದ್ರ ನಾಯಕ್ ಅವರಿಗೆ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನ ವರ್ತನೆ ಕಂಡುಬಂದಿದೆ. ತಕ್ಷಣ ಎಚ್ಚೆತ್ತ ಟಿಟಿಇ ಆತನನ್ನು ವಿಚಾರಿಸಿ ವಶಕ್ಕೆ ಪಡೆದು ಕೆ.ಆರ್. ನಗರದ ಆರ್‌ಪಿಎಫ್ ಔಟ್‌ಪೋಸ್ಟ್‌ಗೆ ಒಪ್ಪಿಸಿದರು. ವಿಚಾರಣೆ ವೇಳೆ ಆರೋಪಿಯು ಹೊಳೆನರಸೀಪುರ ಮತ್ತು ಹಾಸನ ನಡುವೆ ರೈಲು ಸಂಖ್ಯೆ 16585ರಿಂದ ಲ್ಯಾಪ್‌ಟಾಪ್ ಬ್ಯಾಗ್ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆತನನ್ನು ಬಸವರಾಜ ಎಂದು ಗುರುತಿಸಲಾಗಿದೆ.
ಆರೋಪಿಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಕೆ.ಆರ್. ನಗರದ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಉಪನಿರೀಕ್ಷಕರಿಗೆ ಹಸ್ತಾಂತರಿಸಲಾಗಿದ್ದು, ವಶಪಡಿಸಿಕೊಂಡ ವಸ್ತುಗಳನ್ನು ಪರಿಶೀಲಿಸಿ ದೂರುದಾರ ಅಭಿಷೇಕ್ ಅವರಿಗೆ ಮರಳಿಸಲಾಗಿದೆ. ಕರ್ತವ್ಯನಿರತ ಟಿಟಿಇ ಚಂದ್ರ ನಾಯಕ್ ಅವರ ದಕ್ಷತೆ ಮತ್ತು ಸಮಯಪ್ರಜ್ಞೆಯನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಶ್ಲಾಘಿಸಿದೆ. ಪ್ರಯಾಣಿಕರು ಯಾವುದೇ ಭದ್ರತಾ ಸಮಸ್ಯೆ ಅಥವಾ ಕಳ್ಳತನ ಸಂಭವಿಸಿದಲ್ಲಿ ತಕ್ಷಣ ‘ರೈಲ್‌ಮದದ್ 139’ ಸಂಪರ್ಕಿಸುವಂತೆ ರೈಲ್ವೆ ಪ್ರಕಟಣೆ ತಿಳಿಸಿದೆ.
Discover more from Coastal Times Kannada
Subscribe to get the latest posts sent to your email.







Discussion about this post