ಉಡುಪಿ, ನ.7: ಉಡುಪಿ ಜಿಲ್ಲೆಯಲ್ಲಿ ಉದ್ಯಮಿಗಳಿಗೆ ಕರೆ ಮಾಡಿ, ಹಣಕ್ಕಾಗಿ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಒಡ್ಡಿದ ಆರೋಪ ಎದುರಿಸುತ್ತಿರುವ ಭೂಗತ ಪಾತಕಿ ಹೇಮಂತ್ ಪೂಜಾರಿ ಮಲೇಷ್ಯಾದಲ್ಲಿ ಬಂಧಿಸಲಾಗಿದೆ. ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಈ ಮಾಹಿತಿಯನ್ನು ನೀಡಿದ್ದಾರೆ. ಸ್ಥಳೀಯ ಅಪರಾಧ ಪ್ರಕರಣದ ಹಿನ್ನೆಲೆಯಲ್ಲಿ ಪೂಜಾರಿಯನ್ನು ಬಂಧಿಸಲಾಗಿದೆಯೇ ಅಥವಾ ಭಾರತ ಸರ್ಕಾರವು ಇಂಟರ್‌ಪೋಲ್ ಮೂಲಕ ಹೊರಡಿಸಿರುವ ರೆಡ್ ಕಾರ್ನರ್ ನೋಟಿಸ್ ಆಧಾರದ ಮೇಲೆ ಬಂಧಿಸಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಹೆಮಂತ್ ಪೂಜಾರಿ ಮಲೇಷ್ಯಾ ಪೊಲೀಸರ ವಶದಲ್ಲಿರುವುದನ್ನು ಮುಂಬೈ ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ಲಭ್ಯ ಮಾಹಿತಿಯ ಪ್ರಕಾರ, ಹೆಮಂತ್ ಪೂಜಾರಿಯ ಸುಲಿಗೆ ಬೆದರಿಕೆ ಕರೆಗಳು ಹಲವು ವರ್ಷಗಳಿಂದ ಸ್ಥಗಿತಗೊಂಡಿದ್ದವು. ಹೀಗಾಗಿ ಆತ ಮೃತಪಟ್ಟಿರಬಹುದು ಎಂದು ಹಲವು ತನಿಖಾ ಸಂಸ್ಥೆಗಳು ಊಹಿಸಿದ್ದವು. ಈ ಹಿಂದೆ ಮುಂಬೈನಲ್ಲಿ ಪೂಜಾರಿಯನ್ನು ಬಂಧಿಸಿದ್ದ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಕೆಲವು ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದ. ಬಳಿಕ ಆತನಿಗೆ ಪಾರ್ಶ್ವವಾಯು ಉಂಟಾಗಿದ್ದು, ದೀರ್ಘಕಾಲ ಹಾಸಿಗೆ ಹಿಡಿದಿದ್ದ. ಇದೇ ಕಾರಣದಿಂದ ಮುಂಬೈನಲ್ಲಿ ಆತನ ಸುಲಿಗೆ ಬೆದರಿಕೆ ಕರೆಗಳು ನಿಂತಿದ್ದವು ಎಂದು ತಿಳಿದುಬಂದಿದೆ.
ಎರಡು ವರ್ಷಗಳಿಂದ ಉಡುಪಿ, ಕುಂದಾಪುರ ಭಾಗದ 17ಕ್ಕೂ ಹೆಚ್ಚಿನ ಬಿಲ್ಡರ್ ಗಳು, ಹೊಟೇಲ್ ಉದ್ಯಮಿಗಳು, ಸಿವಿಲ್ ಕಾಂಟ್ರಾಕ್ಟರುಗಳು ಹಾಗೂ ಕೆಲವು ಕಂಪೆನಿಗಳ ಮುಖ್ಯಸ್ಥರಿಗೆ ಇಂಟರ್ನೆಟ್ ಕರೆ ಮೂಲಕ ಹಣಕ್ಕಾಗಿ ಒತ್ತಾಯಿಸುತ್ತಿದ್ಸ. ಹಣ ನೀಡದಿದ್ದರೆ ಗುಂಡಿಕ್ಕಿ ಕೊಲೆ ಮಾಡುವುದಾಗಿಯೂ ಬೆದರಿಕೆ ಒಡ್ಡಿರುವ ಬಗ್ಗೆ ಪೊಲೀಸರಿಗೆ ದೂರುಗಳು ಬಂದಿದ್ದವು.
ಕಳೆದ ಸೆಪ್ಟೆಂಬರ್ ನಲ್ಲಿ ಮುದರಂಗಡಿಯ ಉದ್ಯಮಿ ಡೇವಿಡ್ ಅವರನ್ನು ಹೇಮಂತ್ ಪೂಜಾರಿ ಸಹಚರರು ತಲೆಗೆ ಗುಂಡಿಕ್ಕಿ ಕೊಲೆ ಮಾಡಿದ್ದು, ಒಟ್ಟು 10 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದಲ್ಲಿ ಹೇಮಂತ್ ಪೂಜಾರಿಯನ್ನು 11ನೇ ಆರೋಪಿಯಾಗಿ ಹೆಸರಿಸಿ ಕೋಕಾ (KCOCA) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಪೊಲೀಸರುಲ ಇತ್ತೀಚೆಗೆ ಹೇಮಂತ ಪೂಜಾರಿ ವಿರುದ್ಧ ಶಿರ್ವ, ಪಡುಬಿದ್ರಿ, ಕಾಪು ಹಾಗೂ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಒಟ್ಟು 8 ಪ್ರಕರಣಗಳನ್ನು ದಾಖಲಿಸಿದ್ದು, ಹೇಮಂತ ಪೂಜಾರಿಗೆ ಸ್ಥಳೀಯ ಉದ್ಯಮಿಗಳ ಮಾಹಿತಿ ಒದಗಿಸುತ್ತಿದ್ದ ಎರ್ಮಾಳು ಬಡಾ ನಿವಾಸಿ ಸುರೇಶ್ ಅಮೀನ್ (38) ಹಾಗೂ ಹರೀಶ್ ಪೂಜಾರಿ ಸಾಂತೂರು (45) ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದರು.
ಕಳೆದ ಆರು ತಿಂಗಳ ಅವಧಿಯಲ್ಲಿ ಕರ್ನಾಟಕ ಮತ್ತು ಮುಂಬೈನ ಹಲವು ಮಂದಿಗೆ ಆತ ಮತ್ತೆ ಬೆದರಿಕೆ ಕರೆಗಳನ್ನು ಮಾಡಿದ್ದ. ಇದರಿಂದ ತನಿಖಾ ಸಂಸ್ಥೆಗಳು ಮತ್ತೆ ಎಚ್ಚೆತ್ತುಕೊಂಡು ಆತ ಇನ್ನೂ ಜೀವಂತವಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದವು. ಕಳೆದ ಕೆಲವು ವಾರಗಳಲ್ಲಿ ಕರ್ನಾಟಕ ಪೊಲೀಸರು ಆತನ ಕುಟುಂಬದ ಕೆಲವು ಸದಸ್ಯರನ್ನೂ ಬಂಧಿಸಿದ್ದಾರೆ. ಕುಟುಂಬದ ಸದಸ್ಯರನ್ನು ವಿಚಾರಣೆ ನಡೆಸಿದ ಬಳಿಕ ಪೊಲೀಸರು ಆತನ ಇರುವಿಕೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದರು ಎನ್ನಲಾಗಿದೆ. ಇದೀಗ ಆತನನ್ನು ಮಲೇಷ್ಯಾದಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಹೆಮಂತ್ ಪೂಜಾರಿ ಒಂದು ಕಾಲದಲ್ಲಿ ಛೋಟಾ ರಾಜನ್ ಗ್ಯಾಂಗ್‌ನ ಅತ್ಯಂತ ಆಪ್ತ ಸದಸ್ಯರಲ್ಲಿ ಒಬ್ಬನಾಗಿದ್ದ. ಆತನ ಬಳಿ ಅಪಾಯಕಾರಿ ಶೂಟರ್‌ಗಳ ತಂಡವೇ ಇತ್ತು. ಅರುಣ್ ಗವಳಿ ಗ್ಯಾಂಗ್‌ನ ನಂತರ ಮುಂಬೈ ಭೂಗತ ಲೋಕದಲ್ಲಿ ಹೆಮಂತ್ ಪೂಜಾರಿಯ ಶೂಟರ್‌ಗಳು ಅತ್ಯಂತ ಅಪಾಯಕಾರಿ ಎಂಬ ಮಾತುಗಳು ಕೇಳಿಬರುತ್ತಿದ್ದವು. ಹೆಮಂತ್ ಪೂಜಾರಿ ಸೆಪ್ಟೆಂಬರ್ 2000ರವರೆಗೆ ಛೋಟಾ ರಾಜನ್ ಗ್ಯಾಂಗ್‌ನಲ್ಲಿದ್ದ. ಅದೇ ವರ್ಷ ಬ್ಯಾಂಕಾಕ್‌ನಲ್ಲಿ ರಾಜನ್‌ನನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆದಿತ್ತು. ಈ ದಾಳಿಯಿಂದ ರಾಜನ್ ಪಾರಾಗಿದ್ದರೂ, ಆತನ ಆಪ್ತ ಸಹಚರ ರೋಹಿತ್ ವರ್ಮಾ ಹತನಾಗಿದ್ದ. ಬ್ಯಾಂಕಾಕ್ ಗುಂಡಿನ ದಾಳಿಯ ಬಳಿಕ ಛೋಟಾ ರಾಜನ್ ಗ್ಯಾಂಗ್‌ನಲ್ಲಿ ಬಿರುಕು ಮೂಡಿತ್ತು. ಆತನೊಂದಿಗೆ ಗುರುತಿಸಿಕೊಂಡಿದ್ದ ಹಲವು ಮಂದಿ ಗ್ಯಾಂಗ್‌ನಿಂದ ಹೊರಬಂದು ತಮ್ಮದೇ ಆದ ತಂಡಗಳನ್ನು ರಚಿಸಿಕೊಂಡಿದ್ದರು. ಹೆಮಂತ್ ಪೂಜಾರಿಯೂ ಅವರಲ್ಲಿ ಒಬ್ಬನಾಗಿದ್ದ.
ಸುಮಾರು ಎರಡೂವರೆ ದಶಕಗಳ ಹಿಂದೆ ಮುಂಬೈನ ಖಾರ್‌ನ ನಿರ್ಮಲ್ ನಗರ ಪ್ರದೇಶದಲ್ಲಿ ಹೆಮಂತ್ ಪೂಜಾರಿಯನ್ನು ಬಂಧಿಸಲಾಗಿತ್ತು. ಆ ಪ್ರಕರಣದಲ್ಲಿ ಕೆಲವು ದಿನಗಳ ಬಳಿಕ ಜಾಮೀನು ಪಡೆದಿದ್ದ ಆತ, ನಂತರ ನಕಲಿ ಪಾಸ್‌ಪೋರ್ಟ್ ಬಳಸಿ ವಿದೇಶಕ್ಕೆ ಪರಾರಿಯಾಗಿದ್ದ. ಮುಂಬೈನಲ್ಲಿ ಆತನ ವಿರುದ್ಧ 24 ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. 1993ರ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಕೆಲವು ಆರೋಪಿಗಳ ಮೇಲೂ ಆತ ಮುಂಬೈನಲ್ಲಿ ಗುಂಡಿನ ದಾಳಿ ನಡೆಸಿದ್ದ ಎಂದು ವರದಿಯಾಗಿದೆ.
Discover more from Coastal Times Kannada
Subscribe to get the latest posts sent to your email.




Discussion about this post