ಮಂಗಳೂರು: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಧಾರುಣ ಘಟನೆ ಮಂಗಳೂರಿನ ಮೋರ್ಗನ್ಸ್ ಗೇಟ್ನಲ್ಲಿ ಸಂಭವಿಸಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ನಾಗೇಶ್ ಶೆರಗುಪ್ಪಿ(30) ಮತ್ತು ಪತ್ನಿ ವಿಜಯಲಕ್ಷ್ಮೀ(26), ಮಕ್ಕಳಾದ ಸ್ವಪ್ನ(8) ಹಾಗೂ ಸಮರ್ಥ್(4) ಮೃತ ದುರ್ದೈವಿಗಳು. ಇವರೆಲ್ಲೂ ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದವರು. ಮಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ನಾಗೇಶ ಶೆರಗುಪ್ಪಿ ವಾಸವಿದ್ದರು.
ಮೋರ್ಗನ್ ಗೇಟ್ ಬಳಿ ಬಾಡಿಗೆ ಮನೆ ಹೊಂದಿದ್ದ ನಾಗೇಶ್ ಮೂಲತಃ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗಾ ಗ್ರಾಮದ ನಿವಾಸಿಯಾಗಿದ್ದು ಪತ್ನಿ , ಮಕ್ಕಳೊಂದಿಗೆ ವಾಸವಿದ್ದ. ಮೋರ್ಗನ್ ಗೇಟ್ ಬಳಿಯ ಮನೆಗೆ 15 ದಿನಗಳ ಹಿಂದಷ್ಟೇ ಬಂದಿದ್ದು ಅದಕ್ಕೂ ಹಿಂದೆ ವೇಲೆನ್ಸಿಯಾದಲ್ಲಿ ಅಪಾರ್ಟ್ಮೆಂಟ್ ಒಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದುಕೊಂಡು ನಾಗೇಶ್ ಟ್ರಕ್ ಚಾಲಕನಾಗಿ ಕೆಲಸಕ್ಕೆ ಹೋಗುತ್ತಿದ್ದ. ಈ ನಡುವೆ, ಪತ್ನಿ ವಿಜಯಲಕ್ಷ್ಮಿ ಬಿಜೈ ನಿವಾಸಿ ಮುಸ್ಲಿಂ ಮಹಿಳೆಯೊಬ್ಬರ ಮನೆಗೆ ತೆರಳುತ್ತಿದ್ದಳು. ಮನೆ ಕೆಲಸಕ್ಕೆ ಹೋಗುತ್ತಿರುವುದಾಗಿ ವಿಜಯಲಕ್ಷ್ಮಿ ಹೇಳಿಕೊಂಡಿದ್ದಳು. ಆದರೆ, ಮಹಿಳೆಯ ಜೊತೆಗೆ ಅಲ್ಲಿಯೇ ಇರುತ್ತಿದ್ದಳು. ಕಳೆದ ಅಕ್ಟೋಬರ್ ತಿಂಗಳಲ್ಲಿ ವಿಜಯಲಕ್ಷ್ಮಿ ಗಂಡನ ಮನೆ ಬಿಟ್ಟು ಎಂಟು ದಿನಗಳ ಕಾಲ ಹೊರಗೆ ಹೋಗಿದ್ದಳು. ಈ ಬಗ್ಗೆ ಪತಿ ನಾಗೇಶ್, ಪಾಂಡೇಶ್ವರ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದ.
ಇದೀಗ ಮೋರ್ಗನ್ ಗೇಟ್ ಮನೆಯಲ್ಲಿ ಏನು ಗಲಾಟೆ ಆಗಿತ್ತು ಅನ್ನೋದು ಗೊತ್ತಿಲ್ಲ. ನಿನ್ನೆ ರಾತ್ರಿ ಗಂಡ ನಾಗೇಶ್, ಹೆಂಡ್ತಿ ಮೇಲಿನ ಸಿಟ್ಟಿನಿಂದ ಫ್ರೈಡ್ ರೈಸ್ ನಲ್ಲಿ ವಿಷ ಬೆರೆಸಿ ತಂದಿರುವ ಶಂಕೆಯಿದ್ದು ಪತ್ನಿ ಮಕ್ಕಳಿಗೆ ಉಣಿಸಿದ್ದಾನೆ. ಅಲ್ಲದೆ, ರಾತ್ರಿ ವೇಳೆ ಪತ್ನಿಯನ್ನು ಮಲಗಿದಲ್ಲೇ ತಲೆದಿಂಬು ಮುಖಕ್ಕೆ ಇಟ್ಟು ಉಸಿರು ಕಟ್ಟಿಸಿ ಸಾಯಿಸಿದ ಬಗ್ಗೆ ಶಂಕೆಯಿದೆ. ಪತ್ನಿ ಮುಖದಲ್ಲಿ ರಕ್ತ ಬಂದಿದ್ದು ಬೆಡ್ ನಲ್ಲಿ ರಕ್ತದ ಕಲೆಗಳು ಕಂಡುಬಂದಿವೆ. ಸಣ್ಣ ಮಗು ತಾಯಿ ಜೊತೆಗಿದ್ದರೆ, ದೊಡ್ಡ ಮಗಳು ಹೊರಗಡೆ ಮಲಗಿದಲ್ಲೇ ಶವವಾಗಿದ್ದಳು. ನಾಗೇಶ್ ಇಂದು ಬೆಳಗ್ಗೆ ನೇಣಿಗೆ ಶರಣಾಗಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ.
ಬಿಜೈ ನಿವಾಸಿ ನೂರ್ ಜಾನ್ ಎಂಬ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಪಾಂಡೇಶ್ವರ ಠಾಣೆಯಲ್ಲಿ ಸುಮೊಟೊ ಪ್ರಕರಣ ದಾಖಲಾಗಿದೆ. ಸ್ಥಳಕ್ಕಾಗಮಿಸಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ಘಟನೆ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಮೃತ ನಾಗೇಶ್, ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಬಾಡಿಗೆ ಮನೆಯ ಮಾಲೀಕರು ಕ್ವಾರಿ ಹೊಂದಿದ್ದು ಅವರ ಜೊತೆಗೇ ಕೆಲಸ ಮಾಡುತ್ತಿದ್ದ. ಇಂದು ಬೆಳಗ್ಗೆ ಮನೆ ಬಾಗಿಲು ತೆರೆದಿಲ್ಲ ಯಾಕೆ, ಕೆಲಸ ಬೇಗ ಇತ್ತು ಎಂದು ಹೇಳುವುದಕ್ಕೆ ನಾಗೇಶ್ ನನ್ನು ಕರೆದರೆ ಬಾಗಿಲು ತೆರೆದಿರಲಿಲ್ಲ. ಹೀಗಾಗಿ ಕಿಟಕಿಯಲ್ಲಿ ನೋಡಿದಾಗ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬಂದಿದ್ದ.
Discover more from Coastal Times Kannada
Subscribe to get the latest posts sent to your email.
Discussion about this post