ಮಂಗಳೂರು, ಡಿ.07 : ರಾಜ್ಯ ವಿಧಾನ ಪರಿಷತ್ತಿಗೆ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ದ್ವೈವಾರ್ಷಿಕ ಚುನಾವಣೆ ಇದೇ ಡಿ.10ರಂದು ಮತದಾನ ನಡೆಯಲಿದ್ದು, ಈ ಸಂದರ್ಭದಲ್ಲಿ ಮದ್ಯ ಮಾರಾಟ ಹಾಗೂ ಸಾಗಾಟವನ್ನು ನಿಷೇಧಿಸಲಾಗಿದೆ.
ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿನ್ನಲೆಯಲ್ಲಿ ಮದ್ಯ ಮಾರಾಟ ಮತ್ತು ಸಾಗಾಣಿಕೆಯನ್ನು ನಿಷೇಧಿಸಿ ಮದ್ಯ ಮುಕ್ತ ದಿನವೆಂದು ಘೋಷಿಸಿ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಆದೇಶ ಹೊರಡಿಸಿದ್ದಾರೆ.
ಅವರು ಕರ್ನಾಟಕ ಅಬಕಾರಿ ನಿಯಮ 1967 ರ 10 (ಬಿ)ರ ಅಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಡಿ. 9ರ ಮಧ್ಯರಾತ್ರಿ 12 ಗಂಟೆಯಿಂದ ಡಿ. 10ರ ಮಧ್ಯರಾತ್ರಿ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ಎಲ್ಲಾ ವಿವಿಧ ಮದ್ಯದಂಗಡಿಗಳನ್ನು ಮುಚ್ಚುವಂತೆ ಹಾಗೂ ಮದ್ಯ ಸಾಗಾಣಿಕೆ, ಶೇಖರಣೆ, ತಯಾರಿಕೆ, ಸರಬರಾಜು ಮತ್ತು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಮದ್ಯ ಮುಕ್ತ ದಿನಗಳೆಂದು ಘೋಷಿಸಿದ್ದಾರೆ.