ಮಂಗಳೂರು, ಡಿ 07: ಮಂಗಳೂರಿನಲ್ಲಿ ವ್ಯಾಪಾರದಲ್ಲಿ ಧರ್ಮ ದಂಗಲ್ ಮತ್ತೆ ಮುನ್ನಲೆಗೆ ಬಂದಿದೆ. ಮಂಗಳೂರಿನ ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನದ ಷಷ್ಠಿ ಮಹೋತ್ಸವ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಿರಾಕರಣೆ ಮಾಡಿರುವ ಆರೋಪ ಕೇಳಿಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನದಲ್ಲಿ ಡಿಸೆಂಬರ್ 14 ರಿಂದ 19 ರವರೆಗೆ ಷಷ್ಟಿ ಮಹೋತ್ಸವ ಜಾತ್ರೆ ಅದ್ಧೂರಿಯಾಗಿ ನಡೆಯಲಿದೆ. ಈ ಷಷ್ಟಿ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸಲಿದ್ದು, ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತದೆ. ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ಈ ದೇವಸ್ಥಾನದ ಪ್ರಾಂಗಣದ ಹೊರಗಡೆ ವ್ಯಾಪಾರ ನಡೆಯುತ್ತದೆ. ಆದರೆ ಇಲ್ಲಿ ಧಾರ್ಮಿಕ ತಾರತಮ್ಯ ನಡೆದಿದೆ.
ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನದ ಆಡಳಿತ ಮಂಡಳಿ ಷಷ್ಟಿ ಸಂತೆ ವ್ಯಾಪಾರದ ಹಂಚಿಕೆ ನಡೆಸಿದೆ. ಈ ವೇಳೆ ಜಾಗ ಕೇಳಲು ಹೋಗಿದ್ದ ಮುಸ್ಲಿಂ ವ್ಯಾಪಾರಿಗಳಿಗೆ ಜಾಗ ಹಂಚಿಕೆಗೆ ನಿರಾಕರಣೆ ಮಾಡಲಾಗಿದೆ. ಬೇಕಾದರೆ ಹಿಂದೂಗಳ ಹೆಸರಿನಲ್ಲಿ ಅಂಗಡಿ ಪಡೆಯುವಂತೆ ಆಡಳಿತ ಮಂಡಳಿ ಸೂಚಿಸಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನ ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದೆ. ಆದರೆ ವ್ಯಾಪಾರಕ್ಕೆ ಜಾಗ ಕೇಳಲು ಹೋಗಿದ್ದ ಮುಸ್ಲಿಂ ವ್ಯಾಪಾರಿಗಳಿಗೆ ಜಾಗ ಹಂಚಿಕೆಗೆ ನಿರಾಕರಣೆ ಮಾಡಲಾಗಿದೆ. ಕಳೆದ ಬಾರಿಯೂ ಮುಸ್ಲಿಂ ವ್ಯಾಪಾರಿಗಳಿಗೆ ಕುಡುಪು ದೇವಸ್ಥಾನದಲ್ಲಿ ವ್ಯಾಪಾರ ನಿರಾಕರಣೆ ಮಾಡಲಾಗಿತ್ತು. ಸಂಘಟನೆಗಳ ವಿರೋಧದ ಹಿನ್ನೆಲೆಯಲ್ಲಿ ಮುಸ್ಲಿಮರಿಗೆ ವ್ಯಾಪಾರ ನಡೆಸಲು ಅವಕಾಶ ಕೊಡುತ್ತಿಲ್ಲ ಎಂದು ಬೀದಿ ಬದಿ ವ್ಯಾಪಾರಸ್ಥರು ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆಗೆ ಆಗ್ರಹಿಸಿದ ಮುಸ್ಲಿಂ ವ್ಯಾಪಾರಿಗಳು, ತಕ್ಷಣ ಸಿಎಂ ಸಿದ್ದರಾಮಯ್ಯ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ. ಕಳೆದ ಬಾರಿ ನವರಾತ್ರಿ ಹೊತ್ತಲ್ಲಿ ಮಂಗಳಾದೇವಿ ದೇವಸ್ಥಾನದಲ್ಲಿ ಇದೇ ವಿವಾದ ಭುಗಿಲೆದ್ದಿತ್ತು. ಆದರೆ ಜಿಲ್ಲಾಡಳಿತ ಮಧ್ಯಪ್ರವೇಶಿಸಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಿತ್ತು. ಇದೀಗ ಕುಡುಪು ಶ್ರೀಅನಂತ ಪದ್ಮನಾಭ ದೇವಸ್ಥಾನದಲ್ಲೂ ಹೀಗೆ ಆಗುತ್ತಿದ್ದು, ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಮುಸ್ಲಿಂ ವ್ಯಾಪಾರಿಗಳು ಆಗ್ರಹಿಸಿದ್ದಾರೆ.
Discover more from Coastal Times Kannada
Subscribe to get the latest posts sent to your email.