ಮಂಗಳೂರು: ವೆನ್ಲಾಕ್ ಆಸ್ಪತ್ರೆ ಡಯಾಲಿಸಿಸ್ ಕೇಂದ್ರಕ್ಕೆ ಈಚೆಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಎರಡು ಹೊಸ ಡಯಾಲಿಸಿಸ್ ಯಂತ್ರಗಳ ಕೊಡುಗೆ ನೀಡಿರುವುದು, ಪ್ರತಿದಿನ 80 ಮಂದಿ ರೋಗಿಗಳಿಗೆ ಡಯಾಲಿಸಿಸ್ ಸೌಲಭ್ಯ ಒದಗಿಸುವ ಮೂಲಕ ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯು ರಾಜ್ಯದಲ್ಲಿಯೇ ಮೊದಲ ಸ್ಥಾನದ ಹೆಗ್ಗಳಿಕೆಗೆ ಪಾತ್ರವಾಗಿದೆ.
ದಿನವೊಂದಕ್ಕೆ 60 ಮಂದಿಗೆ ಡಯಾಲಿಸಿಸ್ ಸೌಲಭ್ಯ ನೀಡುವ ಮೂಲಕ ಎರಡನೇ ಸ್ಥಾನದಲ್ಲಿದ್ದ ಸರ್ಕಾರಿ ಆಸ್ಪತ್ರೆಯು ಈಗ ಇನ್ನಷ್ಟು ರೋಗಿಗಳಿಗೆ ಸೇವೆ ಒದಗಿಸಲು ಸಿದ್ಧವಾಗಿದೆ.
ಮೂತ್ರ ಪಿಂಡದ ಸಮಸ್ಯೆ ಹೊಂದಿರುವ ಬಡ ರೋಗಿಗಗಳು, ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚದ ಡಯಾಲಿಸಿಸ್ ಚಿಕಿತ್ಸೆ ಪಡೆಯಲು ಪರದಾಡುವಂತಹ ಇಂತಹ ಸ್ಥಿತಿ ಇತ್ತು. ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೌಲಭ್ಯ ಸಿಗುತ್ತಿರುವುದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ತಿಂಗಳಿಗೆ 1,800 ಮಂದಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ.
ಕೆಲವು ರೋಗಿಗಳಿಗೆ ವಾರಕ್ಕೆ 2ರಿಂದ 3ಬಾರಿ ಡಯಾಲಿಸಿಸ್ ಮಾಡುವ ಅಗತ್ಯವಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ತಿಂಗಳೊಂದಕ್ಕೆ ₹4 ಸಾವಿರದಿಂದ ₹6 ಸಾವಿರದವರೆಗೆ ಹಣಖರ್ಚು ಮಾಡಬೇಕಾಗುತ್ತದೆ.
ವೆನ್ಲಾಕ್‌ನಲ್ಲಿ ಇಡೀ ಸೇವೆ ಉಚಿತವಾಗಿ ಲಭಿಸುತ್ತಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ, ಡಯಾಲಿಸಿಸ್ ಅಗತ್ಯವಿರುವ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಷ್ಟೇ ಅಲ್ಲ, ಇತರ ವರ್ಗದ ರೋಗಿಗಳಿಗೂ ಉಚಿತವಾಗಿ ಈ ಸೌಲಭ್ಯ ನೀಡಲಾಗುತ್ತದೆ.
ವೆನ್ಲಾಕ್ ಆಸ್ಪತ್ರೆಯಲ್ಲಿ 2000ನೇ ಸಾಲಿನಲ್ಲಿ ಡಯಾಲಿಸಿಸ್ ಕೇಂದ್ರ ಆರಂಭವಾಗಿತ್ತು. ಆ ಸಂದರ್ಭದಲ್ಲಿ 10 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದರು. ಈಗ ದಿನವೊಂದಕ್ಕೆ 80 ರೋಗಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಒಂದು ಯಂತ್ರದಿಂದ ಚಿಕಿತ್ಸೆ ಆರಂಭಿಸಿದ್ದ ಕೇಂದ್ರದಲ್ಲಿ ಈಗ 19 ಡಯಾಲಿಸಿಸ್ ಯಂತ್ರಗಳು ಕಾರ್ಯ ನಿರ್ವಹಿಸುತ್ತಿವೆ.
‘ಪ್ರಸಕ್ತ ಒಂದು ಡಯಾಲಿಸಿಸ್ ಯಂತ್ರವನ್ನು ತೀವ್ರ ನಿಗಾ ಘಟಕದಲ್ಲಿ ಹಾಗೂ ಇನ್ನೊಂದನ್ನು ಕೋವಿಡ್ ಕೇಂದ್ರದಲ್ಲಿ ಇಡಲಾಗಿದೆ. ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿಯಿಂದ 1, ಶ್ರೀಕ್ಷೇತ್ರ ಧರ್ಮಸ್ಥಳದಿಂದ 2, ರೋಟರಿಯಿಂದ 4 ಡಯಾಲಿಸಿಸ್ ಯಂತ್ರ ಆಸ್ಪತ್ರೆಗೆ ಕೊಡುಗೆಯಾಗಿ ಬಂದಿವೆ. ಯಂತ್ರಗಳ ಸಂಖ್ಯೆ ಹೆಚ್ಚಿದಂತೆ ಅದರ ಪ್ರಯೋಜನ ಪಡೆಯುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳಿಗೆ ಸಕಾಲದಲ್ಲಿ ಡಯಾಲಿಸಿಸ್ ಸೌಲಭ್ಯ ಒದಗಿಸಬೇಕಾದರೆ ಇನ್ನುಷ್ಟು ಯಂತ್ರಗಳು ಬೇಕಾಗಿವೆ’ ಎಂದು ವೆನ್ಲಾಕ್ ಆಸ್ಪತ್ರೆ ಮೂತ್ರ ರೋಗ ವಿಭಾಗದ ಮುಖ್ಯಸ್ಥ ಡಾ. ಸದಾನಂದ ಪೂಜಾರಿ ಹೇಳುತ್ತಾರೆ.
Discover more from Coastal Times Kannada
Subscribe to get the latest posts sent to your email.
Discussion about this post