ಮಂಗಳೂರು, ಜ.8 : ಕಳೆದ ಆಗಸ್ಟ್ 4ರಂದು ಬೆಂಗಳೂರಿನಲ್ಲಿ ಬಂಧಿತನಾಗಿದ್ದ ಮಾದೇಶ್ ಪೆರುಮಾಳ್ ಅಲಿಯಾಸ್ ಅಬ್ದುಲ್ ಎಂಬಾತ ಇದೇ ದೀಪ್ತಿ ಮರಿಯಂ ತೋಡಿದ್ದ ಹನಿಟ್ರ್ಯಾಪ್ ಖೆಡ್ಡಾಕ್ಕೆ ಬಿದ್ದು ಮತಾಂತರ ಆಗಿದ್ದ ಅನ್ನೋ ವಿಚಾರವೂ ಎನ್ಐಎ ಅಧಿಕಾರಿಗಳ ತನಿಖೆಯಲ್ಲಿ ಹೊರಬಿದ್ದಿದೆ. ಕರಾವಳಿ ಸೇರಿದಂತೆ ಕರ್ನಾಟಕ ಮತ್ತು ಕೇರಳದಲ್ಲಿ ಹತ್ತಕ್ಕೂ ಹೆಚ್ಚು ಯುವಕರನ್ನು ತನ್ನ ಕಾಮದ ಬಲೆಗೆ ಬೀಳಿಸಿ, ಮತಾಂತರಿಸಿದ್ದಲ್ಲದೆ ಅವರನ್ನು ಐಸಿಸ್ ನೆಟ್ವರ್ಕ್ ಜಾಲದಲ್ಲಿ ಸಿಲುಕಿಸಿದ್ದಾಳೆ.
ಆಕೆಯದ್ದು ಪೂರ್ತಿ ಐಸಿಸ್ ನೆಟ್ವರ್ಕ್. ಸಿರಿಯಾ ಮೂಲದ ಐಸಿಸ್ ಉಗ್ರವಾದಿ ಗುಂಪಿನ ಪರ ಯುವಕರನ್ನು ಸೇರ್ಪಡೆಗೊಳಿಸಿ, ಅದಕ್ಕಾಗಿ ಹಣ ಪಡೆಯುತ್ತಿದ್ದ ಜಾಲ. ಆದರೆ, ಈ ಕೃತ್ಯಕ್ಕಾಗಿ ಆಕೆ ಯಾವ ಹೀನ ಕೆಲಸ ಮಾಡುವುದಕ್ಕೂ ಹೇಸದ ಯುವತಿ. ಉಳ್ಳಾಲದ ಮಾಜಿ ಶಾಸಕ ಬಿ.ಎಂ. ಇದಿನಬ್ಬ ಅವರ ಮೊಮ್ಮಗನ ಮನೆಯಲ್ಲಿ ಸಿಕ್ಕಿಬಿದ್ದಿರುವ ಮತಾಂತರಿ ಯುವತಿ ದೀಪ್ತಿ ಮರಿಯಂಳನ್ನು ಎನ್ಐಎ ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಂತೆ ಯಾರೂ ನಂಬಲಾಗದ ವಿಚಾರಗಳು ಹೊರಬಂದಿವೆ. ದೀಪ್ತಿ ಮಾರ್ಲ ಅಲಿಯಾಸ್ ಮರಿಯಂ ಹಿಂದು ಯುವಕರನ್ನು ಇಸ್ಲಾಂನತ್ತ ಸೆಳೆಯಲು ಆನ್ಲೈನಲ್ಲೇ ಹನಿಟ್ರ್ಯಾಪ್ ಮಾಡುತ್ತಿದ್ದಳು ಎನ್ನುವ ಮಾಹಿತಿ ತನಿಖೆಯಲ್ಲಿ ಬಯಲಾಗಿದೆ. ಲೈಂಗಿಕ ಆಸೆ ತೋರಿಸಿ ಮದುವೆಯಾಗುವ ಆಮಿಷವೊಡ್ಡಿ, ಒಬ್ಬಳೇ ಹತ್ತಕ್ಕೂ ಹೆಚ್ಚು ಯುವಕರನ್ನು ಬಲೆಗೆ ಬೀಳಿಸಿದ್ದಲ್ಲದೆ ಅವರನ್ನು ಮುಸ್ಲಿಮ್ ಆಗಿ ಮತಾಂತರ ಮಾಡಿದ್ದಾಳೆ ಎನ್ನುವ ಆಘಾತಕಾರಿ ವಿಚಾರ ಬಯಲಾಗಿದೆ.
15ಕ್ಕೂ ಹೆಚ್ಚು ಖಾತೆ ತೆರೆದು ಸೆಕ್ಸ್ ಚಾಟಿಂಗ್
ದೀಪ್ತಿ ಮರಿಯಂ ಪತಿ ಅನಾಸ್ ಮತ್ತು ಮೈದುನ ಅಮರ್ ಸೂಚನೆಯಂತೆ ವಿವಿಧ ಜಾಲತಾಣಗಳಲ್ಲಿ ದೀಪ್ತಿ ಮರಿಯಂ ಖಾತೆ ತೆರೆದಿದ್ದಳು. ಫೇಸ್ಬುಕ್, ಇನ್ ಸ್ಟಾ ಗ್ರಾಮ್, ಟೆಲಿಗ್ರಾಮ್, ಟ್ವಿಟರ್ ಗಳಲ್ಲಿ ಹಿಂದು ಹಾಗೂ ಮುಸ್ಲಿಂ ಹೆಸರಿನಲ್ಲಿ 15ಕ್ಕೂ ಹೆಚ್ಚು ಖಾತೆಗಳನ್ನು ತೆರೆದಿದ್ದು, ಹಿಂದು- ಮುಸ್ಲಿಂ ಯುವಕರಿಗೆ ಗಾಳ ಹಾಕುತ್ತಿದ್ದಳು. ಹಿಂದುಗಳಿಗೆ ತಾನು ಹಿಂದು ಎನ್ನುತ್ತಿದ್ದರೆ, ಮುಸ್ಲಿಂ ಯುವಕರಿಗೆ ತಾನು ಮುಸ್ಲಿಂ ಹೆಣ್ಣು ಎಂದೇ ಪರಿಚಯಿಸಿಕೊಳ್ಳುತ್ತಿದ್ದಳು. ಹೆಸರು ಮಾತ್ರ ಬೇರೆ ಬೇರೆ ಇರುತ್ತಿದ್ದವು. ಪ್ರೀತಿಯ ಹೆಸರಲ್ಲಿ ಸಲುಗೆ ಬೆಳೆಸಿಕೊಂಡು ಲೈಂಗಿಕ ಪ್ರಚೋದನೆಯ ಚಾಟಿಂಗ್ ಗಳನ್ನು ಮಾಡಿ ಯುವಕರನ್ನು ಆಕರ್ಷಿಸುತ್ತಿದ್ದಳು.
ಹಿಂದು ಯುವಕರಲ್ಲಿ ಮದುಯಾದವರಿದ್ದರೆ, ಮುಸ್ಲಿಂ ಆಗಿ ಮತಾಂತರಗೊಂಡರೆ ಎರಡು- ಮೂರು ಮದುವೆ ಆಗಬಹುದು ಎಂದು ಹೇಳಿ ಮತಾಂತರ ಆಗುವಂತೆ ಪ್ರಚೋದಿಸುತ್ತಿದ್ದಳು. ವಿಡಿಯೋ ಕರೆ ಮಾಡಿ, ಭಾವ-ಭಂಗಿಗಳನ್ನು ತೋರಿಸಿ ಆಸೆ ಹುಟ್ಟಿಸುತ್ತಿದ್ದಳು. ಜೊತೆಗೆ ಹಣಕಾಸು ನೆರವಿನ ಆಮಿಷವನ್ನೂ ಒಡ್ಡುತ್ತಿದ್ದಳು. ಮುಸ್ಲಿಂ ಯುವಕರಲ್ಲಿ ಪ್ರೀತಿ, ಲೈಂಗಿಕ ಆಸೆ, ಮದುವೆಯ ಆಮಿಷವೊಡ್ಡಿ ಹಣದ ಆಮಿಷ ತೋರಿಸಿ, ಐಸಿಸ್ ನೆಟ್ವರ್ಕ್ ಪರ ಒಲವು ತೋರುವಂತೆ ಪ್ರಚೋದಿಸುತ್ತಿದ್ದಳು. ಇದಕ್ಕಾಗಿ ಸಾಕಷ್ಟು ಹಣವನ್ನೂ ಖರ್ಚು ಮಾಡುತ್ತಿದ್ದಳು. ನಿಧಾನಕ್ಕೆ ಮರಿಯಂನ ಜಾಲಕ್ಕೆ ಬೀಳುತ್ತಿದ್ದ ಯುವಕರು ಐಸಿಸ್ ಪರ ಒಲವು ತೋರುತ್ತಿದ್ದರು. ಅದಕ್ಕಾಗಿ ಕುಳಿತಲ್ಲೇ ಹಣವನ್ನೂ ಪಡೆಯುತ್ತಿದ್ದರು. ಮರಿಯಂ ಮಾಡುತ್ತಿದ್ದ ಮೋಡಿಯಿಂದ ಉತ್ತೇಜಿತಗೊಂಡ ಕೇರಳದ ನಾಲ್ವರು ಯುವಕರು 2020-21ರಲ್ಲಿ ಸಿರಿಯಾಕ್ಕೆ ತೆರಳಿದ್ದರು ಅನ್ನೋದು ಎನ್ಐಎ ತನಿಖೆಯಲ್ಲಿ ತಿಳಿದುಬಂದಿದೆ.
ಕಾಮಿನಿಯ ಲೈಂಗಿಕ ಆಕರ್ಷಣೆಗೆ ಬಿದ್ದ ಮಾದೇಶ :
ತಮಿಳುನಾಡು ಮೂಲದ, ಬೆಂಗಳೂರಿನಲ್ಲಿ ನೆಲೆಸಿದ್ದ ಮಾದೇಶ್ ಪೆರುಮಾಳ್ ಗೆ ದೀಪ್ತಿ ಮರಿಯಂ ಇನ್ ಸ್ಟಾ ಗ್ರಾಮ್ ನಲ್ಲಿ ಪರಿಚಯ ಆಗಿದ್ದಳು. ಆತನ ಸ್ನೇಹ ಸಂಪಾದಿಸಿ, ಮಾದೇಶನ ಮಾನಸಿಕ ಒತ್ತಡವನ್ನು ತಿಳಿದುಕೊಂಡು ಪ್ರಚೋದನೆ, ಆಮಿಷ ತೋರಿದ್ದಳು. ನೀನು ಮತಾಂತರ ಆದಲ್ಲಿ ಮದುವೆಯಾಗುತ್ತೇನೆ. ನಿನಗಾಗಿ ಎಷ್ಟು ಬೇಕಾದ್ರೂ ಖರ್ಚು ಮಾಡುತ್ತೇನೆ ಎನ್ನುತ್ತಾ ಆತನನ್ನು ಐಸಿಸ್ ಪರ ಮಾನಸಿಕತೆ ಬೆಳೆಸುವಂತೆ ಪ್ರಚೋದಿಸಿದ್ದಳು. ಐಸಿಸ್ ಕಾರ್ಯಕರ್ತರು ಹೇಳಿದಂತೆ ಕೇಳಿದರೆ, ನಿನಗೆ ಸಾಕಷ್ಟು ಹಣ ಬರುತ್ತದೆ. ಜೊತೆಗೆ ನಾನು ಮದುವೆಯಾಗಿ ಸುಖ ನೀಡುತ್ತೇನೆ ಎಂದಿದ್ದಳು.
ಮರಿಯಂ ಸೂಚನೆಯಂತೆ ಐಸಿಸ್ ಗೆ ಆಕರ್ಷಕನಾದ ಮಾದೇಶ ಪೆರುಮಾಳ್ ಮೊದಲಿಗೆ ಮತಾಂತರಗೊಂಡು ತನ್ನ ಹೆಸರನ್ನು ಅಬ್ದುಲ್ ಎಂದು ಬದಲಿಸಿಕೊಂಡಿದ್ದ. ಆನಂತರ ಐಸಿಸ್ ನೆಟ್ವರ್ಕ್ ಜಾಲಕ್ಕೆ ಬಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಗಳಿಸಿದ್ದಲ್ಲದೆ ಅವರ ಸೂಚನೆಯಂತೆ ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ರೆಡಿಯಾಗಿದ್ದ. ಮಾದೇಶನನ್ನು ಐಸಿಸ್ ಪರ ಉಗ್ರನಾಗಿ ರೂಪಿಸಲು ದೀಪ್ತಿ ಮರಿಯಂ ಬರೋಬ್ಬರಿ ಹತ್ತು ಲಕ್ಷ ರೂ. ಖರ್ಚು ಮಾಡಿದ್ದಳು ಅನ್ನೋ ಮಾಹಿತಿ ಎನ್ಐಎ ತಂಡಕ್ಕೆ ಲಭಿಸಿದೆ.
ಇದೆಲ್ಲವನ್ನೂ ದೀಪ್ತಿ ಮರಿಯಂ ಉಳ್ಳಾಲದ ಗಂಡನ ಮನೆಯಲ್ಲಿದ್ದುಕೊಂಡೇ ಜಾಲತಾಣಗಳ ಮೂಲಕ ನಡೆಸುತ್ತಿದ್ದಳು. ಇದಲ್ಲದೆ, ಐಸಿಸ್ ನೆಟ್ವರ್ಕ್ ಜೊತೆಗೆ ಅಂತಾರಾಷ್ಟ್ರೀಯ ಲಿಂಕನ್ನೂ ಹೊಂದಿದ್ದಳು. ಐಸಿಸ್ ಜಾಲಕ್ಕೆ ಯುವಕರನ್ನು ಸೇರಿಸುವುದರ ಜೊತೆಗೆ ಅದಕ್ಕಾಗಿ ಭಾರೀ ಪ್ರಮಾಣದಲ್ಲಿ ಹಣಕಾಸು ನೆರವನ್ನು ಪಡೆಯುತ್ತಿದ್ದಳು. ಉಳ್ಳಾಲದಲ್ಲಿದ್ದೇ ಜಮ್ಮು ಕಾಶ್ಮೀರ, ಸಿರಿಯಾ ಮೂಲದ ಉಗ್ರರ ನಡುವೆ ಸಂಪರ್ಕ ಸಾಧಿಸಿದ್ದಳು. 2020ರಲ್ಲಿ ಗಂಡ ಅನಾಸ್ ರೆಹ್ಮಾನ್, ಮೈದುನ ಅಮರ್ ರೆಹ್ಮಾನ್ ಜೊತೆಗೆ ಜಮ್ಮು ಕಾಶ್ಮೀರಕ್ಕೆ ತೆರಳಿದ್ದಳು. ಅಲ್ಲಿ ವಲಸಿಗರು ಹಮ್ಮಿಕೊಂಡಿದ್ದ ಹಿಜ್ರಾ ಸಮ್ಮೇಳನದಲ್ಲಿ ಭಾಗವಹಿಸಿ, ತನ್ನ ಬಗ್ಗೆ ನಕಲಿ ಹೆಸರನ್ನು ಹೇಳಿ ಯುವಕರನ್ನು ಪರಿಚಯ ಮಾಡಿಕೊಂಡಿದ್ದಳು. ತಾನು ಕೂಡ ಕಾಶ್ಮೀರದ ನಿವಾಸಿ ಎನ್ನುತ್ತಾ ಅವರನ್ನು ಸಿರಿಯಾದ ಐಸಿಸ್ ಮತ್ತು ಅಪ್ಘಾನಿಸ್ತಾನದ ಐಎಸ್ – ಖೊರಸಾನ್ ಉಗ್ರ ಸಂಘಟನೆಗಳ ಪರ ಒಲವು ತೋರುವಂತೆ ಪ್ರಚೋದಿಸಿದ್ದಳು.
ಕಳೆದ ಆಗಸ್ಟ್ 4ರಂದು ಉಳ್ಳಾಲದ ಮನೆಗೆ ದಾಳಿ ನಡೆಸಿದ್ದ ಎನ್ಐಎ ಅಧಿಕಾರಿಗಳು ಮರಿಯಂಳನ್ನು ಎರಡು ದಿನಗಳ ಕಾಲ ವಿಚಾರಣೆ ನಡೆಸಿದ್ದರು. ಆನಂತರ, ಆಕೆಯ ಲ್ಯಾಪ್ಟಾಪ್, ಮೊಬೈಲ್ ಫೋನ್ ಗಳನ್ನು ವಶಕ್ಕೆ ಪಡೆದಿದ್ದರು. ದೀಪ್ತಿ ಮರಿಯಂ ಎಂಬ ಭಯಾನಕ ಚರಿತ್ರೆಯನ್ನು ತಿಳಿದುಕೊಂಡೇ ಬಂದಿದ್ದ ಅಧಿಕಾರಿಗಳು ಅಂದು ಆಕೆಯ ಮೈದುನ ಅಮರ್ ಅಬ್ದುರ್ ರೆಹ್ಮಾನನ್ನು ಮಾತ್ರ ಬಂಧಿಸಿ, ದೆಹಲಿಗೆ ಒಯ್ದಿದ್ದರು. ದೀಪ್ತಿ ಮರಿಯಂ ಐದು ತಿಂಗಳ ಮಗು ಹೊಂದಿದ್ದರಿಂದ ಆಕೆಯನ್ನು ವಶಕ್ಕೆ ಪಡೆಯದೆ ನಿಗಾ ವಹಿಸಿದ್ದರು. ಮೊಬೈಲ್ ಮತ್ತು ಲ್ಯಾಪ್ಟಾಪ್ ನಲ್ಲಿ ಉಗ್ರವಾದ, ಹಣಕಾಸು ವಹಿವಾಟು, ಜಾಲತಾಣದ ಹನಿಟ್ರ್ಯಾಪ್ ಬಗ್ಗೆ ಖಚಿತ ಸಾಕ್ಷ್ಯಗಳು ದೊರೆತಿದ್ದರಿಂದ ಮರಿಯಂಳನ್ನು ಐದು ದಿನಗಳ ಹಿಂದೆ ಉಳ್ಳಾಲದಿಂದಲೇ ಬಂಧಿಸಿ ದೆಹಲಿಗೆ ಒಯ್ದಿದ್ದಾರೆ.